ಜೆಪ್ಪಿನಮೊಗರು ಮನೆಯಲ್ಲಿ ಕಳ್ಳತನ: ಮಹಾರಾಷ್ಟ್ರ ಮೂಲದ ಆರೋಪಿ ಬಂಧನ
ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೆಪ್ಪಿಮೊಗರು ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮೂಲದ 26 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 4ರಂದು ಜೆಪ್ಪಿಮೊಗರು ನಿವಾಸಿಗಳು ಮನೆಯಲ್ಲಿ ಇಲ್ಲದ ವೇಳೆ, ದುಷ್ಕರ್ಮಿಗಳು ಮನೆಯ ಬಾಗಿಲಿನ ಬೀಗವನ್ನು ಯಾವುದೋ ಆಯುಧದಿಂದ ಮುರಿದು ಒಳನುಗ್ಗಿ ಕಪಾಟಿನಲ್ಲಿದ್ದ 14 ಗ್ರಾಂ ತೂಕದ ಚಿನ್ನದ ಸರ, ತಲಾ 2 ಗ್ರಾಂ ತೂಕದ ಎರಡು ಉಂಗುರಗಳು ಹಾಗೂ ₹25,000 ನಗದು ಕಳವು ಮಾಡಿದ್ದರು. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ತನಿಖೆ ವೇಳೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ಆಗಸ್ಟ್ 11ರಂದು ನಗರದ ತಲಪಾಡಿ ಬಸ್ ನಿಲ್ದಾಣದ ಬಳಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತನನ್ನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ನರಳೆವಾಡಿ ಗ್ರಾಮದ ಸಮಧನ ಸಕಹರಿ ನರಳೆ (26) ಎಂದು ಗುರುತಿಸಲಾಗಿದೆ.
ಆರೋಪಿಯಿಂದ ಕಳವು ಮಾಡಲಾದ ಸೊತ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.













