ಟಿಕೇಟ್ ಪಕ್ಕಾ ಆದರೂ ಶೋಭಾ ವಿರುದ್ದ ನಿಲ್ಲದ ಗೋ ಬ್ಯಾಕ್ ಚಳುವಳಿ; ನೋಟಾ ಚಲಾವಣೆಯ ಬೆದರಿಕೆ!

Spread the love

ಟಿಕೇಟ್ ಪಕ್ಕಾ ಆದರೂ ಶೋಭಾ ವಿರುದ್ದ ನಿಲ್ಲದ ಗೋ ಬ್ಯಾಕ್ ಚಳುವಳಿ; ನೋಟಾ ಚಲಾವಣೆಯ ಬೆದರಿಕೆ!

ಉಡುಪಿ: ಸಾಕಷ್ಟು ಕುತೂಹಲ ಕೆರಳಿಸಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಕೊನೆಗೂ ತೆರೆ ಬಿದ್ದಿದೆ.

ಬಿಜೆಪಿಗೆ ಕಗ್ಗಂಟಾಗಿ ಉಳಿದಿದ್ದ ಹಾಗೂ ರಾಜ್ಯದಲ್ಲೇ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಅಭ್ಯರ್ಥಿಯಾಗಿ ಇದೀಗ ಹಾಲಿ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಮತ್ತೊಮ್ಮೆ ಸ್ಪರ್ಧಿಸಲು ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಕಾರ್ಯಕರ್ತರ ಆಯ್ಕೆ ಕಡೆಗಣನೆಗೆ ಬಿಜೆಪಿ ವರಿಷ್ಠರ ವಿರುದ್ದ ಇದೀಗ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಬಿಜೆಪಿ ಕಾರ್ಯಕರ್ತರು ಸೋಶಿಯಲ್ ಮೀಡಿಯಾಗಳಲ್ಲಿ “ನೋಟಾ-ಚಳವಳಿ” ಆರಂಭಿಸಿದ್ದಾರೆ.

ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಿದ ವಿಚಾರ ಮುಂದಿಟ್ಟುಕೊಂಡು ಜಿಲ್ಲೆಯ ಉಡುಪಿ, ಕಾರ್ಕಳ, ಕುಂದಾಪುರದಲ್ಲಿ ಕಾರ್ಯಕರ್ತರು ಶೋಭಾ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ವಿರುದ್ದ ಆಕ್ರೋಶದ ಬರಹಗಳನ್ನು ಪ್ರಕಟಿಸುತ್ತಿದ್ದಾರೆ. “ನಮ್ಮದು ಕಾರ್ಯಕರ್ತರ ಪಕ್ಷ ಎಂದು ತಿಳಿದಿದ್ದೇವೆ. ಕೇವಲ ಕಾರ್ಯಕರ್ತರ ಸಭೆಗಳಲ್ಲಿ ಮಾತ್ರ ನಮ್ಮದು ಕಾರ್ಯಕರ್ತರ ಪಕ್ಷ. ನಾಯಕರ ಸಭೆಗಳಲ್ಲಿ ಹಠವಾದಿ ಪಕ್ಷ ಎಂದು ಇಂದು ತಿಳಿಯಿತು”. “ಹೆಸರಿಗೆ ಮಾತ್ರ ಕಾರ್ಯಕರ್ತರ ಪಕ್ಷ, ಆದರಿಲ್ಲಿ ಕಾರ್ಯಕರ್ತರ ಮಾತಿಗೆ ಕಿಂಚಿತ್ತೂ ಬೆಲೆ ಇಲ್ಲ. ಗೆಲುವಿನ ಮದ ಏರಿಸಿಕೊಂಡ ನಾಯಕರಿಗೂ ಕಾರ್ಯಕರ್ತನ ಮನದಾಳ ತಿಳಿಯದು” ಎಂಬಿತ್ಯಾದಿ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಸಮ್ಮುಖದಲ್ಲಿ ನಡೆದ ಚುನಾವಣಾ ಸಮಿತಿ ಸಭೆಯಲ್ಲಿ ಹೆಚ್ಚಿನ ಬಿಜೆಪಿ ನಾಯಕರು ಶೋಭಾ ಕರಂದ್ಲಾಜೆಗೆ ಟಿಕೇಟ್ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ಎಸ್ ಯಡ್ಯೂರಪ್ಪ ಅವರು ಶತಾಯಗತಾಯ ಶೋಭಾ ಅವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದಲೇ ಸ್ಪರ್ಧಿಸಲೇ ಬೇಕು ಎಂದು ಹಠಹಿಡಿದ ಪರಿಣಾಮ ಬಿಜೆಪಿ ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡದೆ ಹೋದರು ಹಾಲಿ ಸಂಸದರಿಗೆ ಟಿಕೇಟ್ ಪಕ್ಕ ಎನ್ನುವುದು ರಾಜ್ಯ ಬಿಜೆಪಿ ನಾಯಕರೇ ಸುಳಿವು ನೀಡಿದ ಪರಿಣಾಮ ಸದಾ ಶೋಭಾ ಕರಂದ್ಲಾಜೆ ಅವರು ಸಂಸದರಾಗಿದ್ದ ವೇಳೆ ಕ್ಷೇತ್ರದ ಕಡೆಗೆ ನಿರ್ಲಕ್ಷ್ಯ ಭಾವನೆ ತೋರಿದ್ದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಆದ್ದರಿಂದ ಕಾರ್ಯಕರ್ತರು ಯಾವ ಮುಖವನ್ನಿಟ್ಟು ಶೋಭಾಗೆ ಮತ ಕೇಳುವುದು ಎಂಬ ಗೊಂದಲದಲ್ಲಿದ್ದಾರೆ. ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಶೋಭಾ, ಯಡ್ಯೂರಪ್ಪ ವಿರುದ್ದ ಬಹಿರಂಗವಾಗಿ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.

ಸ್ಥಳೀಯ ಶಾಸಕರ ವಿರೋಧ, ರಾಜ್ಯ ಕೋರ್ ಕಮೀಟಿಯಲ್ಲಿ 9 ಜನರ ವಿರೋಧ, ದೆಹಲಿಯಲ್ಲಿ ರಾಷ್ಟ್ರೀಯ ನಾಯಕರ ಮುಂದೆ ನಡೆದ ರಾಜ್ಯ ನಾಯಕರ ಸಭೇಯಲ್ಲಿ ವಿರೋಧ, ಇಷ್ಟೆಲ್ಲಾ ವಿರೋಧಗಳ ಮಧ್ಯ ಕೇವಲ ಒಬ್ಬರ ಹಠದಿಂದ ರಾಷ್ಟ್ರೀಯ ಚುನಾವಣಾ ಸಮಿತಿಯಲ್ಲಿ ಟಿಕೇಟ್ ನೀಡುತ್ತಾರೆ. ನಮ್ಮದು ಕಾರ್ಯಕರ್ತರ ಪಕ್ಷ ಎಂದು ತಿಳಿದಿದ್ದೆ ಕೇವಲ ಕಾರ್ಯಕರ್ತರ ಸಭೆಗಳಲ್ಲಿ ಮಾತ್ರ ಕಾರ್ಯಕರ್ತರ ಪಕ್ಷ, ನಾಯಕರ ಸಭೆಗಳಲ್ಲಿ ಹಠವಾದಿಗಳ ಪಕ್ಷ ಎಂದು ತಿಳಿಯಿತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಮೋದಿಯವರಿಂದ ಅಭ್ಯರ್ಥಿಗಳ ಘೋಷಣೆಯಾದರೆ ಎಲ್ಲರೂ ಬಾಯಿ ಮುಚ್ಚಿಕೊಂಡು ಕೆಲಸ ಮಾಡುತ್ತಾರೆ ಎನ್ನುವುದು ರಾಜ್ಯ ನಾಯಕರಿಗೆ ತಿಳಿದಿತ್ತು. ಆದರೆ ಬುದ್ದಿವಂತ ಜಿಲ್ಲೆಯ ಮತದಾರರಾದ ನಾವೆಲ್ಲರೂ ಆಲೋಚನೆ ಮಾಡಬೇಕು. ಮೋದಿಯವರು ಈ ಬಾರಿ ಮುನ್ನೂರಕ್ಕಿಂತ ಹೆಚ್ಚಿನ ಸೀಟು ಪಡೆದು ಪ್ರಧಾನಿಯಾಗುತ್ತಾರೆ. ನಮ್ಮ ಜಿಲ್ಲೆಯ ಒಂದು ಸೀಟು ಅವರಿಗೆ ಲೆಕ್ಕವಲ್ಲ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ನಮ್ಮೊಳಗೆ ವಿರೋಧವಿದ್ದು, ನಾವು ಅದನ್ನು ಪ್ರದರ್ಶನ ಮಾಡಲೇಬೇಕು. “ಅಲ್ಲಿ ಮೋದಿ, ಇಲ್ಲಿ ನನ್ನ ವಿರೋಧ” ಈ ಬರಹ ವಾಟ್ಸಾಪ್ ಹಾಗೂ ಪೇಸ್ಬುಕ್ಗಳಲ್ಲಿ ರಾರಾಜಿಸುತ್ತಿದೆ.

ಬಿಜೆಪಿ ಯುವ ನಾಯಕ, ಮೀನುಗಾರಿಕಾ ಮುಖಂಡ ಯಶಪಾಲ ಸುವರ್ಣ ಹಾಗೂ ಕಳೆದ ಬಾರಿ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆಯವರು ಸಹಜವೆಂಬಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸಲು ಇಚ್ಛೆ ವ್ಯಕ್ತಪಡಿಸಿದ್ದರು. ಹೀಗಾಗಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಯಶಪಾಲ ಸುವರ್ಣ, ಸದಸನಶೂರ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಹೀಗಾಗಿ ರಾಜ್ಯ ರಾಜಕಾರಣದಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರ ಸಾಕಷ್ಟು ಸದ್ದು ಮಾಡಿತ್ತು.

ಈಗಾಗಲೇ ಶೋಭಾ ಕರಂದ್ಲಾಜೆ ಅವರಿಗೆ ಪಕ್ಷ ಗ್ರೀನ್ ಸಿಗ್ನಲ್ ನೀಡಿರುವ ಪರಿಣಾಮ ಅಭ್ಯರ್ಥಿ ಬದಲಾಗುವುದು ಅಸಾಧ್ಯದ ಮಾತು. ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತರು ಶೋಭಾ ವಿರುದ್ದ ನೋಟಾ ಚಲಾವಣೆ, ಗೋ ಬ್ಯಾಕ್ ಚಳುವಳಿ ತೀವ್ರಗೊಂಡರೆ ಮಾತ್ರ ಬಿಜೆಪಿಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೆಲುವು ಸ್ವಲ್ಪ ಕಷ್ಟದಾಯಕವಾಗಲಿದೆ ಎನ್ನುವುದು ಕಾರ್ಯಕರ್ತರ ಅಭಿಪ್ರಾಯ. ಯಾವುದಕ್ಕೂ ಮತದಾರರ ಚಿತ್ತ ಯಾರ ಪರ ಎನ್ನುವುದು ಫಲಿತಾಂಶದ ವರೆಗೆ ಕಾಯಲೇ ಬೇಕು.


Spread the love