ಡಾ.ಎಚ್.ಎಸ್.ಅನುಪಮಾ ಅವರಿಗೆ ಡಾ.ಸರೋಜಿನಿ ಮಹಿಷಿ ಪ್ರಶಸ್ತಿ ಪ್ರದಾನ

Spread the love

ಡಾ.ಎಚ್.ಎಸ್.ಅನುಪಮಾ ಅವರಿಗೆ ಡಾ.ಸರೋಜಿನಿ ಮಹಿಷಿ ಪ್ರಶಸ್ತಿ ಪ್ರದಾನ

ದೆಹಲಿ: ಕರ್ನಾಟಕ ರಾಜ್ಯೋತ್ಸವ ಆಚರಣೆಯ ಅಂಗವಾಗಿ ದೆಹಲಿ ಕರ್ನಾಟಕ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು ನವೆಂಬರ್ ತಿಂಗಳ ಪೂರ್ತಿ ಹಾಕಿಕೊಂಡಿರುವ ವಿಶೇಷ ಕಾರ್ಯಕ್ರಮಗಳಲ್ಲಿ ‘ಜನಪದ ಕಲಾ ಪ್ರದರ್ಶನ’ ಹಾಗೂ ಡಾ. ಸರೋಜಿನಿ ಮಹಿಷಿ ಪ್ರಶಸ್ತಿ ಪ್ರದಾನ ಸಮಾರಂಭವು ಸಂಘದ ಸಭಾಂಗಣದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.

ಪಿಚ್ಚಳ್ಳಿ ಶ್ರೀನಿವಾಸ ಅಧ್ಯಕ್ಷರು, ಕರ್ನಾಟಕ ಜಾನಪದಅಕಾಡೆಮಿ ಬೆಂಗಳೂರು, ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೆ. ಪ್ರಹ್ಲಾದ್ ಮಹಿಷಿ, ಮಾಜಿ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ ಇವರು ಕರ್ನಾಟಕ ಸಂಘವು ಮಾಜಿ ಅಧ್ಯಕ್ಷೆ ಡಾ. ಸರೋಜಿನಿ ಮಹಿಷಿ ಅವರ ಸ್ಮರಣಾರ್ಥ, ಮೊದಲ ಬಾರಿಗೆ ಕೊಡ ಮಾಡುವ ‘ಡಾ. ಸರೋಜಿನಿ ಮಹಿಷಿ’ ಪ್ರಶಸ್ತಿಯನ್ನು ಡಾ. ಎಚ್.ಎಸ್. ಅನುಪಮಾ ಅವರಿಗೆ ನೀಡಿ ಗೌರವಿಸಿದರು.

sarojini-mahishi-award

ಸಮಾರಂಭದ ಮುಖ್ಯ ಅತಿಥಿಗಳಾಗಿ ಟಿ. ದಿಲೀಪ್‍ಕುಮಾರ್, ಅಧ್ಯಕ್ಷರು, ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಹಾಗೂ ಡಾ. ವಿ. ಗೋಪಾಲಕೃಷ್ಣ, ಖ್ಯಾತ ಸಾಹಿತಿ ಮತ್ತು ಬಹುಭಾಷಾ ತಜ್ಞರು ಭಾಗವಹಿಸಿದ್ದರು. ಕರ್ನಾಟಕ ಸಂಘದ ಮಾಜಿಅಧ್ಯಕ್ಷರು, ಕರ್ನಾಟಕದ ಮಾಜಿ ಸಂಸದರು ಹಾಗೂ ಕೇಂದ್ರದಲ್ಲಿ ಮಾಜಿ ಮಂತ್ರಿಗಳೂ ಆಗಿದ್ದ ಡಾ. ಸರೋಜಿನಿ ಮಹಿಷಿ ಅವರು ಕಳೆದ ವರ್ಷ ನಮ್ಮನ್ನಗಲಿದ್ದರು. ಅವರುಕರ್ನಾಟಕ ಸಂಘಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುತ್ತಾ ಸಂಘವು ಡಾ. ಸರೋಜಿನಿ ಮಹಿಷಿ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಮೊದಲ ಪ್ರಶಸ್ತಿಯನ್ನು ಸಾಹಿತ್ಯಕ್ಷೇತ್ರದಲ್ಲಿ ಮಹಿಳೆಯರು ಸಲ್ಲಿಸಿದ ಸೇವೆಗೆ ನೀಡಲಾಗುತ್ತಿದ್ದು ಕರ್ನಾಟಕದ ಒಬ್ಬ ಉದಯೋನ್ಮುಖ ಲೇಖಕಿ ಡಾ. ಎಚ್.ಎಸ್. ಅನುಪಮಾ ಅವರನ್ನು ಡಾ. ಎಚ್.ಎಸ್. ಶಿವಪ್ರಕಾಶ್ ಮತ್ತು ಡಾ. ಪುರುಷೋತ್ತಮ ಬಿಳಿಮಲೆಯವರನ್ನೊಳಗೊಂಡ ಆಯ್ಕೆ ಸಮಿತಿ ಶಿಫಾರಸ್ಸು ಮಾಡಿತ್ತು.

ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಡಾ. ಅನುಪಮಾ ಅವರು ಸಮಾಜಕ್ಕೆ ಉಪಯೋಗವಾಗುವ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುವಂತಹ ಸಾಹಿತ್ಯ ರಚಿಸಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.

ವೃತ್ತಿಯಿಂದ ವೈದ್ಯೆಯಾಗಿ, ಬಡ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ಜನರ ಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವ ಡಾ. ಎಚ್‍ಎಸ್‍ಅನುಪಮಾ ಅವರು ಸಾಹಿತ್ಯ, ಅನುವಾದ ಮತ್ತುಜನಪರ ಸಂಘಟಣೆಗಳಲ್ಲಿ ಕೆಲಸ ಮಾಡುತ್ತಾ ಕ್ರಿಯಾಶೀಲರಾಗಿದ್ದಾರೆ. ಅವರು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕಿನ ಹೆಬ್ಬಾಗಿಲಿನಲ್ಲಿ ಜನಿಸಿದರು. ಪ್ರಸ್ತುತ ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲೂಕು ಕವಲಕ್ಕಿ ಗ್ರಾಮದಲ್ಲಿ 23 ವರ್ಷದಿಂದ ‘ಜಲಜ ಜನರಲ್ ಮತ್ತು ಮೆಟರ್ನಿಟಿ ಕ್ಲಿನಿಕ್’ ನಡೆಸುತ್ತಿದ್ದಾರೆ.

ಇದುವರೆಗೆ ಇವರು ಮಹಿಳಾ ಕಾವ್ಯ ಸಂಗ್ರಹ-2014, `ನೀರದಾರಿ-ದಲಿತ ಮಹಿಳಾ ಪ್ರಜ್ಞೆ ವಿವಿಧ ನೆಲೆಗಳಿಂದ’ ಹಾಗೂ `ಮೆರವಣಿಗೆ ಹೊರಡುತ್ತೇವೆ’ ಸೇರಿದಂತೆ ಏಳು ಪುಸ್ತಕಗಳು ಮತ್ತು ನಾಲ್ಕು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರು `ಕುವೆಂಪು ಭಾಷಾ ಭಾರತಿ ಪ್ರಾಧಿಕಾರ’ದ ಸದಸ್ಯರು ಹಾಗೂ `ಮಂಥನ’ ಸಾಹಿತ್ಯಿಕ, ಸಾಂಸ್ಕøತಿಕ ವೇದಿಕೆಯ ಸಹ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ವತಿಯಿಂದ ಸುಮಾರು 150ಕ್ಕೂ ಜನಪದ ಕಲಾವಿದರು ಕರ್ನಾಟಕದ ವಿವಿಧ ಪ್ರಾಂತ್ಯಗಳಿಗೆ ಸೇರಿದ ಅತ್ಯಾಕರ್ಷಕವಾದ ಜನಪದ ಕಲಾ ಪ್ರದರ್ಶನಗಳನ್ನು ಕಿಕ್ಕಿರಿದು ನೆರೆದಿದ್ದ ಸಭಿಕರ ಮುಂದೆ ಪ್ರದರ್ಶಿಸಿದರು.


Spread the love