ಡಿಸೆಂಬರ್ 10 ರಂದು ತುಳು ಸಾಹಿತ್ಯ ಸಮ್ಮೇಳನ  

Spread the love

ಡಿಸೆಂಬರ್ 10 ರಂದು ತುಳು ಸಾಹಿತ್ಯ ಸಮ್ಮೇಳನ   

ಮಒಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಬಂಟ್ವಾಳ ತಾಲೂಕು ತುಳು ಸಾಹಿತ್ಯ ಸಮ್ಮೇಳನ ಸಮಿತಿಯ ಆಶ್ರಯದಲ್ಲಿ ಡಿಸೆಂಬರ್ 10 ರಂದು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ಬಿ.ಸಿ ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಬಂಟ್ವಾಳ ತಾಲೂಕಿನ ಪ್ರಥಮ ತುಳು ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಕಾಡೆಮಿ ಜನರ ಕಡೆಗೆ ಕಾರ್ಯಕ್ರಮದ ಅಂಗವಾಗಿ ತುಳುನಾಡಿನ ಎಲ್ಲಾ ತಾಲೂಕುಗಳಲ್ಲಿ ತಾಲೂಕು ಮಟ್ಟದ ತುಳು ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ತುಳು ಸಾಹಿತ್ಯ, ಸಂಸ್ಕøತಿ-ರಂಗಭೂಮಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಜನರಿಗೆ ಅವಕಾಶ ಕಲ್ಪಿಸುವ ಉದ್ದೇಶವನ್ನು ಪ್ರಧಾನವಾಗಿರಿಸಿಕೊಂಡು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತುಳು ಭಾಷಾ ಚಳವಳಿಯಲ್ಲಿ ಲಿಖಿತ ಸಾಹಿತ್ಯದ ಜತೆಯಲ್ಲಿ ಮೌಖಿಕ ಸಾಹಿತ್ಯ ಕೂಡಾ ಜಾನಪದ ಸಾಹಿತ್ಯದ ನೆಲೆ ಗಟ್ಟಿನಲ್ಲಿ ಪ್ರಧಾನವಾಗುತ್ತದೆ.

ತುಳು ಜನಪದ ಸಾಹಿತ್ಯದಲ್ಲಿ ಪಾಡ್ದನ-ಪಾರಿ, ಉರಲ್, ಬೀರ, ಸಂಧಿ ಮೊದಲಾದವುಗಳನ್ನು ಇಂದಿಗೂ ಉಳಿಸಿಕೊಂಡಿರುವುದು ಗ್ರಾಮೀಣ ಭಾಗದ ಅನಕ್ಷರಸ್ಥರು. ತುಳು ಭಾಷೆಯ ಪ್ರಾಚೀನತೆ, ಹಿರಿಮೆ, ಗರಿಮೆಯನ್ನು ತಿಳಿಸುವ ಲಿಖಿತ ಸಾಹಿತ್ಯಕ್ಕೂ ಮೌಖಿಕ ಸಾಹಿತ್ಯವು ಮೂಲ ಆಕರವಾಗಿ ಸಿಗುತ್ತದೆ.

ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ತುಳು ಮೌಖಿಕ ಸಾಹಿತ್ಯವನ್ನು ಇಂದಿಗೂ ಉಳಿಸಿಕೊಂಡು ಬಂದಿರುವವರಿಗೆ ಸಮ್ಮೇಳನದಲ್ಲಿ ವಿಶೇಷ ಅವಕಾಶಗಳನ್ನು ಒದಗಿಸಲಾಗುತ್ತಿದೆ. ತುಳು ನಾಡಿನ ‘ತುಳುವೆರೆ ಗೊಬ್ಬುಲು’ ಇತರ ಕ್ರೀಡಾ ಪ್ರಾಕಾರಗಳಿಂದ ಭಿನ್ನವಾಗಿದ್ದು ತುಳುವರ ಬುದ್ದಿವಂತಿಕೆಗೆ ಹೆಸರಾಗಿದೆ. ಇಂದಿನ ಆಧುನಿಕ ಕ್ರೀಡೆಗಳ ಭರಾಟೆಯೊಂದಿಗೆ ತುಳುವರ ಕ್ರೀಡೆಗಳು ಮರೆಯಾಗುತ್ತಿದೆ. ತುಳುವರ ಕ್ರೀಡೆಗಳನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಸಮ್ಮೇಳನದಲ್ಲಿ ‘ತುಳುವೆರೆ ಗೊಬ್ಬಲು’ ಎಂಬ ಪರಿಕಲ್ಪನೆಯೊಂದಿಗೆ ವ್ಯವಸ್ಥೆಗೊಳಿಸಲಾಗಿದೆ.

ತುಳುನಾಡಿನಲ್ಲಿ ವಿವಿಧ ಜಾತಿ ಸಮುದಾಯದ ಕುಲಕಸುಬು ಪ್ರಧಾನ ಪಾತ್ರವಹಿಸಿದ್ದು ಇಂದಿನ ದಿನದಲ್ಲಿ ಆಧುನಿಕ ಜೀವನದ ಅನುಕರಣೆಯಲ್ಲಿ ಕುಲಕಸುಬು ಜನಮಾನಸದಿಂದ ದೂರವಾಗುತ್ತಿದೆ. ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ಅಗತ್ಯವೆಂದು ಪರಿಗಣಿಸಿ ಕುಲಕಸುಬುಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದಕ್ಕಾಗಿ ಕುಲಕಸುಬುಗಳ ಪ್ರಾತ್ಯಕ್ಷಿಕೆ ಮತ್ತು ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಪುಸ್ತಕ ಪ್ರದರ್ಶನ-ಮಾರಾಟ, ತುಳುನಾಡಿನ ಬದುಕು ಮತ್ತು ಸಂಸ್ಕøತಿ ಬಿಂಬಿಸುವ ಹಳೇ ವಸ್ತುಗಳ ಪ್ರದರ್ಶನ ಕೂಡಾ ಇದೆ. ತುಳುನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಗುರುತಿಸಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜತೆಗೆ ಕವಿಗೋಷ್ಠಿ, ಚಾವಡಿ ಪಟ್ಟಾಂಗ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ.

ಬಂಟ್ವ್ವಾಳ ತಾಲೂಕು ತುಳು ಸಾಹಿತ್ಯ ಸಮ್ಮೇಳನವು ತುಳು ಭಾಷಾ ಚಳವಳಿಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿದ್ದು ಈ ಕಾರ್ಯಕ್ರಮ ಇತರರಿಗೆ ಪ್ರೇರಣೆಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಬಂಟ್ವಾಳ ತಾಲೂಕಿನಲ್ಲಿ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ತಾಲೂಕಿನ ಎಲ್ಲಾ ವರ್ಗದ, ವಿವಿಧ ಜಾತಿ ಸಮುದಾಯದ, ವಿವಿಧ ಕ್ಷೇತ್ರಗಳ ಪ್ರಮುಖರು ಸಹಕರಿಸಲು ತುಳು ಅಕಾಡೆಮಿ ಪ್ರಕಟಣೆ ತಿಳಿಸಿದೆ.


Spread the love