ಡಿ. 27: ಉಡುಪಿಗೆ ರಾಷ್ಟ್ರಪತಿ ಕೋವಿಂದ್- ಸಂಚಾರದಲ್ಲಿ ಬದಲಾವಣೆ; ಕೃಷ್ಣ ಮಠಕ್ಕೆ ಭಕ್ತಾದಿಗಳಿಗೆ ನಿರ್ಬಂಧ

Spread the love

ಡಿ. 27: ಉಡುಪಿಗೆ ರಾಷ್ಟ್ರಪತಿ ಕೋವಿಂದ್- ಸಂಚಾರದಲ್ಲಿ ಬದಲಾವಣೆ; ಕೃಷ್ಣ ಮಠಕ್ಕೆ ಭಕ್ತಾದಿಗಳಿಗೆ ನಿರ್ಬಂಧ

ಉಡುಪಿ: ಪೇಜಾವರ ಮಠದ ಹಿರಿಯ ಸ್ವಾಮೀಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಡಿಸೆಂಬರ್ 27 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಉಡುಪಿ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಡಿಸೆಂಬರ್ 27 ರಂ ಬೆಳಿಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಉಡುಪಿಯಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಮಲ್ಪೆ ಕಲ್ಮಾಡಿಯಿಂದ ಬರುವ ವಾಹನಗಳು ಕಲ್ಮಾಡಿ ಜಂಕ್ಷನ್ ನಿಂದ ಕಿದಿಯೂರು ಜಂಕ್ಷನ್ ಮಾರ್ಗವಾಗಿ ಅಂಬಲಪಾಡಿ ಸ್ವಾಗತ ಗೋಪುರ, ಜೋಡುಕಟ್ಟೆ ಮಾರ್ಗವಾಗಿ ಉಡುಪಿ ನಗರಕ್ಕೆ ಬರುವುದು.

ಕುಂದಾಪುರ, ಬ್ರಹ್ಮಾವರ, ಸಂತೆಕಟ್ಟೆಯಿಂದ ಉಡುಪಿಗೆ ಬರುವ ವಾಹನಗಳು ಅಂಬಾಗಿಲಿನಿಂದ ಬಂದು ರಸಿಕ ಬಾರ್ ಜಂಕ್ಷನ್ ಮುಖೇನ ದೊಡ್ಡಣಗುಡ್ಡೆ, ಮನೋಳಿಗುಜ್ಜಿ, ಲಾ-ಕಾಲೇಜು ಜಂಕ್ಷನ್, ಎಸ್ ಎಂ ಕೆ ಜಂಕ್ಷನ್, ಬೀಡಿನಗುಡ್ಡೆ ಮಾರ್ಗವಾಗಿ ನಗರಕ್ಕೆ ಬರುವುದು.

ಕಾರ್ಕಳ, ಹಿರಿಯಡ್ಕ, ಮಣಿಪಾಲ ಕಡೆಯಿಂದ ಬರುವ ವಾಹನಗಳು ಎಸ್ ಎಂ ಕೆ ಜಂಕ್ಷನ್ ಬೀಡಿನಗುಡ್ಡೆ, ಮಿಷನ್ ಕಂಪೌಂಡ್ ಮಾರ್ಗವಾಗಿ ನಗರಕ್ಕೆ ಬರುವುದು.

ನಗರದಿಂದ ಮಲ್ಪೆ ಕಡೆಗೆ ಹೋಗುವ ವಾಹನಗಳು ಜೋಡುಕಟ್ಟೆ, ಕಿನ್ನಿಮೂಲ್ಕಿ, ಅಂಬಲಪಾಡಿ, ಕಿದಿಯೂರು, ಕಲ್ಮಾಡಿ ಮಾರ್ಗವಾಗಿ ಬರುವುದು.

ಡಿಸೆಂಬರ್ 26 ರಂದು ಮಧ್ಯಾಹ್ನ 12 ಗಂಟೆಯಿಂದ 27 ರ ಅಪರಾಹ್ನ 4 ಗಂಟೆಯವರೆಗೆ ಸರ್ಕೂಟ್ ಹೌಸ್, ಶ್ರೀಕೃಷ್ಣ ಮಠ, ರಾಜಾಂಗಣ, ಸಂಸ್ಕೃತ ಕಾಲೇಜು ಪಕ್ಕದ ಗೇಟಿನಿಂದ ಸಂಫೂರ್ಣ ರಥಬೀದಿ ಸುತ್ತಮುತ್ತಲಿನ ಪ್ರದೇಶಗಳ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆಯೂ ಹಾಗೂ ರಾಷ್ಟ್ರಪತಿಗಳ ಆಗಮನದ ಪ್ರಯುಕ್ತ ಡಿಸೆಂಬರ್ 27 ರ ಬೆಳಿಗ್ಗೆ 6 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ಶ್ರೀ ಕೃಷ್ಣ ಮಠಕ್ಕೆ ಸಾರ್ವಜನಿಕರ ಭೇಟಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಡುಪಿ ಜಿಲ್ಲೆ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love