ಡಿ. 29 : ರಾಮಕೃಷ್ಣ ಮಿಷನ್ ಸ್ವಚ್ಛ ಗ್ರಾಮ ಅಭಿಯಾನ ಉದ್ಘಾಟನಾ ಸಮಾರಂಭ

Spread the love

ಡಿ. 29 : ಸ್ವಚ್ಛ ಗ್ರಾಮ ಅಭಿಯಾನ ಉದ್ಘಾಟನಾ ಸಮಾರಂಭ

ಮಂಗಳೂರು : ರಾಮಕೃಷ್ಣ ಮಿಷನ್ ಮಂಗಳೂರು ಕಳೆದ ನಾಲ್ಕು ವರ್ಷಗಳಿಂದ ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸ್ವಚ್ಛತೆಯ ಕುರಿತಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಅಭಿಯಾನದ ರೂಪದಲ್ಲಿ ಕೈಗೊಳ್ಳುತ್ತಿದೆ. ಅದರಂತೆ ಮಂಗಳೂರಿನಲ್ಲಿ ಸಾರ್ವಜನಿಕರ ಸಹಕಾರದಿಂದ ಕಳೆದ ನಾಲ್ಕು ವರ್ಷಗಳಿಂದ ಪ್ರತೀ ಭಾನುವಾರ ಶ್ರಮದಾನ, ಪ್ರತಿದಿನ ಮನೆ ಮನೆ ಭೇಟಿ, ವಿದ್ಯಾರ್ಥಿಗಳಿಗೆ ಸ್ವಚ್ಛ ಮನಸ್ಸು ಎಂಬ ಅಭಿಯಾನ ಹಾಗೂ ದಕ ಜಿಲ್ಲೆಯಲ್ಲಿ ಸ್ವಚ್ಛ ಗ್ರಾಮ ಎಂಬ ಅಭಿಯಾನ ಆಯೋಜಿಸಲಾಗಿದೆ. ಈ ರೀತಿ ಸ್ವಚ್ಛತೆಗೆ ನವೀನ ಆಯಾಮ ನೀಡಿದ ಹೆಗ್ಗಳಿಕೆ ಹೊಂದಿದೆ. ಈ ಅಭಿಯಾನದಲ್ಲಿ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವುದರ ಜೊತೆಜೊತೆಗೆ ಸಾಮಾಜಿಕ ಜವಾಬ್ದಾರಿಯ ಕುರಿತು ಅರಿವನ್ನುಂಟು ಮಾಡಿಸುವಲ್ಲಿಯೂ ಒತ್ತು ನೀಡಲಾಗಿದೆ.

ಸ್ವಚ್ಛ ಗ್ರಾಮ ಅಭಿಯಾನ : ಈಗಾಗಲೇ ಐದನೇ ಹಂತದ ಅನೇಕ ಕಾರ್ಯಕ್ರಮಗಳು ಚಾಲನೆಗೊಂಡಿವೆ. ಇದೀಗ ಸ್ವಚ್ಛ ಗ್ರಾಮ ಎಂಬ ಅಭಿಯಾನವನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಸುಮಾರು ಇನ್ನೂರು ಗ್ರಾಮಗಳಲ್ಲಿ ಹಮ್ಮಿಕೊಳ್ಳಲು ಯೋಜಿಸಲಾಗಿದೆ. 2 ಅಕ್ಟೋಬರ್ 2019 ರ ವರೆಗೆ ಸಾಗುವ ಈ ಅಭಿಯಾನದಲ್ಲಿ ಸುಮಾರು ಎರಡು ಸಾವಿರ ಸ್ವಚ್ಛತಾ ಶ್ರಮದಾನಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಕಳೆದ ವರ್ಷ ಕೇವಲ ದಕ್ಷಿಣ ಕನ್ನಡ ಜಿಲ್ಲೆಗೆ ಸಿಮೀತವಾಗಿದ್ದ ಈ ಸ್ವಚ್ಛ ಗ್ರಾಮ ಅಭಿಯಾನ ಇದೀಗ ಉಡುಪಿ ಜಿಲ್ಲೆಯ ಗ್ರಾಮಗಳಿಗೂ ವಿಸ್ತರಿಸಲಾಗಿದೆ. ಅಭಿಯಾನದಲ್ಲಿ ಕೈಜೋಡಿಸುವ ಗ್ರಾಮಗಳಿಗೆ ರಾಮಕೃಷ್ಣ ಮಿಶನ್ನಿನಿಂದ ಸಕಲ ವ್ಯವಸ್ಥೆಗಳನ್ನು ಒದಗಿಸಿಕೊಡಲಾಗುತ್ತಿದೆ. ಶ್ರಮದಾನಕ್ಕೆ ಬೇಕಾದ ಪೆÇರಕೆ ಮತ್ತಿತರ ಉಪಕರಣಗಳು, ಭಾಗವಹಿಸುವ ಸದಸ್ಯರಿಗೆ ಟೀಶರ್ಟಗಳು, ಜಾಗೃತಿ ಕರಪತ್ರ, ಬ್ಯಾನರ್‍ಗಳು, ತ್ಯಾಜ್ಯ ಸಾಗಿಸಲು ವಾಹನದ ವ್ಯವಸ್ಥೆ ಹಾಗೂ ಶ್ರಮದಾನದ ಬಳಿಕ ಉಪಾಹಾರದ ವ್ಯವಸ್ಥೆ ಮತ್ತಿತರ ಸೌಲಭ್ಯಗಳನ್ನು ಮಂಗಳೂರು ರಾಮಕೃಷ್ಣ ಮಿಷನ್ ಒದಗಿಸಿಕೊಡುತ್ತದೆ. ತಿಂಗಳಿಗೆ ಒಂದು ಶ್ರಮದಾನದಂತೆ (ಭಾನುವಾರದಂದು) ಒಟ್ಟು ಹತ್ತು ಶ್ರಮದಾನಗಳನ್ನು (ಡಿಸೆಂಬರ್ 2018 ರಿಂದ ಆರಂಭಿಸಿ 2 ಅಕ್ಟೋಬರ್ 2019 ರ ತನಕ) ಪ್ರತಿ ಗ್ರಾಮದಲ್ಲಿ ಆಯೋಜನೆ ಮಾಡಲಾಗುತ್ತಿದೆ.

ಸ್ವಚ್ಛ ಗ್ರಾಮ ಉದ್ಘಾಟನೆ: ದಿನಾಂಕ 29-12-2018 ಶನಿವಾರದಂದು ಬೆಳಿಗ್ಗೆ 10-30 ಕ್ಕೆ ಸ್ವಚ್ಛ ಗ್ರಾಮ ಅಭಿಯಾನ ವಿಧ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಇನ್ನೂರು ಗ್ರಾಮಗಳಿಂದ ಪ್ರತಿನಿಧಿಗಳು ವಿಶೇಷವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಮಹರಾಜ್ ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಶಾಂತಿಗೋಡು ಹಾಗೂ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀ ದಿನಕರ್ ಬಾಬು ಇವರುಗಳು ಭಾಗಿಯಾಗಲಿದ್ದಾರೆ. ವಿಶೇಷ ಆಹ್ವಾನಿತರಾಗಿ ದಕ ಜಿಲ್ಲಾಧಿಕಾರಿ ಶ್ರೀ ಸಸಿಕಾಂತ್ ಸೆಂಥಿಲ್ ಹಾಗೂ ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ದಕ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆರ್ ಸೆಲ್ವಮಣಿ ಹಾಗೂ ಉಡುಪಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಸಿಂಧು ರೂಪೇಶ್ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಉಪಸ್ಥಿತರಿರುವರು. ಮಾಜಿ ಶಾಸಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ ಎಂ ಆರ್ ಪಿ ಎಲ್ ಜಿಜಿಎಂ ಶ್ರೀ ಬಿಎಚ್ ವಿ ಪ್ರಸಾದ್ ಉಪಸ್ಥಿತರಿರುತ್ತಾರೆ. ಬೆಳಿಗ್ಗೆ 10-30 ರಿಂದ 12-30 ವರೆಗೆ ಸ್ವಚ್ಛ ಗ್ರಾಮ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಳಿಕ ಸ್ವಚ್ಛ ಗ್ರಾಮ ಅಭಿಯಾನದಲ್ಲಿ ಹೆಸರು ನೋಂದಾಯಿಸಿಕೊಂಡ ಗ್ರಾಮಗಳಿಗೆ ಅಗತ್ಯ ಸಲಕರಣೆಗಳು ಹಾಗೂ ಸ್ವಚ್ಛತಾ ಅಭಿಯಾನಕ್ಕೆ ವಿಶೇಷವಾಗಿ ರೂಪಿಸಲಾದ ಟೀಶರ್ಟ್ ಗಳ ವಿತರಣೆ ನಡೆಯಲಿದೆ.

ಗೌರವಾಭಿನಂದನೆ: ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜರುಗಿದ ಸ್ವಚ್ಛ ಗ್ರಾಮ ಅಭಿಯಾನ 2017-18 ಸ್ವಚ್ಛತಾ ಅಭಿಯಾನದಲ್ಲಿ ಅತ್ತ್ಯುತ್ತಮವಾಗಿ ಅಭಿಯಾನವನ್ನು ಸಂಘಟಿಸಿದ 10 ಗ್ರಾಮಗಳನ್ನು ಗುರುತಿಸಿ ಗೌರವಿಸಲು ರಾಮಕೃಷ್ಣ ಮಿಷನ್ನಿನಿಂದ ತೀರ್ಮಾನಿಸಲಾಗಿದೆ. ನಿಗದಿತ ಗ್ರಾಮಗಳ ಅಧ್ಯಕ್ಷರನ್ನು ಸ್ವಚ್ಛ ಗ್ರಾಮ ಅಭಿಯಾನ 2018-19 ಉದ್ಘಾಟನಾ ಸಮಾರಂಭದಲ್ಲಿ ಫಲಪುಷ್ಪ ಪತ್ರ ನೀಡಿ ಗೌರವಿಸಲಾಗುವುದು.


Spread the love