ದಕ್ಷಿಣ ಕನ್ನಡ ಜಿಲ್ಲೆಯ ನೆರೆ ಸಂತ್ರಸ್ತರಿಗೂ ಕೊಡಗು ಮಾದರಿ ಪರಿಹಾರ ನೀಡಿ – ಐವನ್ ಡಿಸೋಜಾ ಆಗ್ರಹ

ದಕ್ಷಿಣ ಕನ್ನಡ ಜಿಲ್ಲೆಯ ನೆರೆ ಸಂತ್ರಸ್ತರಿಗೂ ಕೊಡಗು ಮಾದರಿ ಪರಿಹಾರ ನೀಡಿ – ಐವನ್ ಡಿಸೋಜಾ ಆಗ್ರಹ

ಮಂಗಳೂರು: ‘ಜಿಲ್ಲೆಯ ನೆರೆ ಸಂತ್ರಸ್ತರಿಗೂ ಕೊಡಗು ಮಾದರಿಯಲ್ಲಿ ಪರಿಹಾರ ನೀಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಆಗ್ರಹಿಸಿದರು.

‘ರಾಜ್ಯದಲ್ಲಿ ಏಕಚಕ್ರಾಧಿಪತ್ಯ ಸರ್ಕಾರವಿದೆ. ಮುಖ್ಯಮಂತ್ರಿಗಳು ರಾಜ್ಯದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಆದರೆ, ನೀಡಿದ ಭರವಸೆಗಳನ್ನು ಅನುಷ್ಠಾನಗೊಳಿಸುವ ಕೆಲಸ ಮಾಡಬೇಕು’ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.

‘ರಾಜ್ಯದಲ್ಲಿ ಸರ್ಕಾರವೇ ಅಸ್ತಿತ್ವದಲ್ಲಿ ಇಲ್ಲದಂತಿರುವ (ಸಚಿವರಿಲ್ಲ) ಕಾರಣ ಅಧಿಕಾರಿಗಳು ಎನ್‌ಡಿಆರ್‌ಎಫ್‌ ಮಾರ್ಗಸೂಚಿಗಳ ಅನ್ವಯ ಪರಿಹಾರ ನೀಡುತ್ತಿದ್ದಾರೆ. ಆದರೆ, ಲೋಕೋಪಯೋಗಿ ಇಲಾಖೆಯಿಂದ ಪ್ರತ್ಯೇಕ ಸರ್ವೆ ನಡೆಸಿ ಹಾನಿಯ ಅಂದಾಜು ಆಧಾರದಲ್ಲಿ ಪರಿಹಾರ ನೀಡಬೇಕು’ ಎಂದರು.

‘ಮನೆ ನಿರ್ಮಾಣಕ್ಕೆ ₹ 5ಲಕ್ಷ ಹಾಗೂ ಅಲ್ಲಿ ತನಕದ 10 ತಿಂಗಳು ಮನೆ ಬಾಡಿಗೆ ತಲಾ ₹5 ಸಾವಿರ ಹಾಗೂ ಇತರ ಖರ್ಚು ವೆಚ್ಚಕ್ಕಾಗಿ ₹10 ಸಾವಿರ ತಿಂಗಳಿಗೆ ನೀಡುವುದಾಗಿ ಮುಖ್ಯಮಂತ್ರಿಗಳು ಸೋಮವಾರ ಭರವಸೆ ನೀಡಿದ್ದರು. ಆದರೆ, ಅಧಿಕಾರಿಗಳಿಗೆ ಕಾನೂನಿನ ಅನುಸಾರ ಯಾವುದೇ ಆದೇಶ ನೀಡದ ಕಾರಣ, ಅವರು ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ₹3,800 ಪರಿಹಾರ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ’ ಎಂದು ದೂರಿದರು.

‘ದಕ್ಷಿಣ ಕನ್ನಡ ಜಿಲ್ಲಾಡಳಿತವು ಉತ್ತಮ ಕೆಲಸ ಮಾಡುತ್ತಿದೆ. ಆದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರವು ಸ್ಪಷ್ಟ ಆದೇಶಗಳನ್ನು ನೀಡದ ಕಾರಣ, ಜನತೆ ಪರಿಹಾರ ವಂಚಿತರಾಗುತ್ತಿದ್ದಾರೆ. ನಾವು ಪ್ರವಾಹದ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಆದರೆ, ಜನರ ನಿರ್ಲಕ್ಷ್ಯ ಮುಂದುವರಿದರೆ, ಬೀದಿಗಿಳಿದು ಅವರ ಪರವಾಗಿ ಹೋರಾಡುತ್ತೇವೆ’ ಎಂದರು.