ದಕ್ಷಿಣ ಕನ್ನಡ ಜಿ್ಲ್ಲೆಯಲ್ಲಿ ಭಾರಿ ಮಳೆ ; ಅಸ್ತವ್ಯಸ್ಥಗೊಂಡ ಜನಜೀವನ

Spread the love

ದಕ್ಷಿಣ ಕನ್ನಡ ಜಿ್ಲ್ಲೆಯಲ್ಲಿ ಭಾರಿ ಮಳೆ ; ಅಸ್ತವ್ಯಸ್ಥಗೊಂಡ ಜನಜೀವನ

ಮಂಗಳೂರು: ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರುಗಳಲ್ಲಿ ಭಾರಿ ಮಳೆಯಾಗುತ್ತಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.

ದಕ್ಷಿಣಕನ್ನಡದಲ್ಲಿ ಗುಡುಗು ಸಹಿತ ಮಳೆಯ ಆರ್ಭಟ ಹೆಚ್ಚಿದ್ದು, ಕಗ್ಗತ್ತಲು ಆವರಿಸಿದೆ. ನದಿ, ತೊರೆಗಳು ತುಂಬಿ ಹರಿಯುತ್ತಿದ್ದು ಹಲವೆಡೆ ತೋಟ, ಕೃಷಿ ಪ್ರದೇಶಕ್ಕೆ ನೀರು ನುಗ್ಗಿದೆ. ಭತ್ತ ಮತ್ತು ಕೃಷಿ ಚಟುವಟಿಕೆಗೆ ಅಡ್ಡಿಯಾಗಿದ್ದು, ಹಲವೆಡೆ ಸಂಚಾರಕ್ಕೆ ತೊಡಕುಂಟಾಗಿದೆ.

ಪುತ್ತೂರಿನ ಸಾಲ್ಮರ ಬಳಿಯ ಹೆಬ್ಬಾರಬೈಲು ಎಂಬಲ್ಲಿ ರಾತ್ರಿ ಮನೆ ಮೇಲೆ ತಡೆಗೋಡೆ ಕುಸಿದು ವೃದ್ಧೆ ಮತ್ತು ಮೊಮ್ಮಗ ಹಾಗೂ ಶೃಂಗೇರಿಯಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಒಬ್ಬರು ಮೃತಪಟ್ಟಿದ್ದಾರೆ. ಪಾರ್ವತಿ (65) ಮತ್ತು ಧನುಷ್ (11) ಮೃತಪಟ್ಟವರು.

ದಕ್ಷಿಣ ಕನ್ನಡದಲ್ಲಿ ನೇತ್ರಾವತಿ ನದಿ ತುಂಬಿದ್ದು, ಅಪಾಯದ ಮಟ್ಟ ತಲುಪಿದೆ. ತೀವ್ರ ಮಳೆಯ ಕಾರಣ ಮೂಡಬಿದಿರೆ ವ್ಯಾಪ್ತಿಯ ಶಾಲೆಗಳಿಗೆ ತಹಶೀಲ್ದಾರ್ ರಶ್ಮಿ ರಜೆ ಪ್ರಕಟಿಸಿದ್ದಾರೆ. ಸುಳ್ಯ, ಬೆಳ್ತಂಗಡಿ, ಪುತ್ತೂರು ಸೇರಿದಂತೆ ಬಹುತೇಕ ಶಾಲೆಗಳಿಗೂ ರಜೆ ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲೂ ಮಳೆಯಾಗುತ್ತಿದ್ದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ದಕ್ಷಿಣ ಕನ್ನಡದಲ್ಲಿ ಕಳೆದ 24 ಗಂಟೆಯಲ್ಲಿ ದಾಖಲೆಯ ಅಂದರೆ 175 ಮಿಲಿ ಮೀಟರ್‌ ಮಳೆ ಸುರಿದಿದೆ. ಬಂಟ್ವಾಳದಲ್ಲಿ 202 ಮಿಲಿಮೀಟರ್‌ ಮಳೆಯಾಗಿದೆ.

ಮಳೆ- ತಾಲೂಕುವಾರು ಕಂಟ್ರೋಲ್ ರೂಂ: ತೀವ್ರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ತಾಲೂಕುಗಳಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಸಾರ್ವಜನಿಕರು ಯಾವುದೇ ನೆರವಿಗೆ ಆಯಾ ತಾಲೂಕಿನ ಕಂಟ್ರೋಲ್‌ ರೂಂ ದೂರವಾಣಿ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಮಂಗಳೂರು ತಾಲೂಕು 0824-2220587 ಅಥವಾ 2220596, ಬಂಟ್ವಾಳ 08255-232120/232500, ಪುತ್ತೂರು 08251-230349/232799, ಬೆಳ್ತಂಗಡಿ 08256-232047/233123, ಸುಳ್ಯ 08257-230330/231231, ಮೂಡಬಿದ್ರೆ 08258-238100/239900, ಕಡಬ 08251-260435, ಮುಲ್ಕಿ 0824-2294496, ಮಂಗಳೂರು ಮಹಾನಗರಪಾಲಿಕೆ 0824-2220306


Spread the love