ದಕ ಜಿಲ್ಲಾಡಳಿತ; ಆಳ್ವಾಸ್ ಸಹಯೋಗದಲ್ಲಿ ಫೆಬ್ರವರಿ 17 ರಂದು  ದಿಶಾ ಉದ್ಯೋಗ ಪರ್ವ

Spread the love

 ದಕ ಜಿಲ್ಲಾಡಳಿತ; ಆಳ್ವಾಸ್ ಸಹಯೋಗದಲ್ಲಿ ಫೆಬ್ರವರಿ 17 ರಂದು  ದಿಶಾ ಉದ್ಯೋಗ ಪರ್ವ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತವು ಉದ್ಯಮ ಶೀಲತೆ ಅವಕಾಶ ಮತ್ತು ಕಲಿಕಾ ಕೇಂದ್ರ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಫೆಬ್ರವರಿ 17 ರಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ದಿಶಾ ಉದ್ಯೋಗ ಪರ್ವ ಆಯೋಜಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದರು.

ಅವರು ಸೋಮವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ದಿಶಾ ಉದ್ಯೋಗ ಪರ್ವದಲ್ಲಿ ಹತ್ತನೇ ತರಗತಿಯಿಂದ ಸ್ನಾತಕೋತ್ತರ ಪದವಿ ಉತ್ತೀರ್ಣರಾದ ಅಭ್ಯರ್ಥಿಗಳು ಭಾಗವಹಿಸಲು ಅವಕಾಶವಿದ್ದು, ಅರ್ಹರಿಗೆ ಉದ್ಯೋಗ ದೊರೆಯಬೇಕು ಎಂಬ ಉದ್ದೇಶದಿಂದ ಉದ್ಯೋಗ ಪರ್ವದಲ್ಲಿ ಅಂತಿಮ ಪದವಿ ಅಥವಾ ಇಂಜಿನಿಯರಿಂಗ್ ಅವಕಾಶ ಕಲ್ಪಿಸಲಾಗಿಲ್ಲ. ಸುಮಾರು 150 ಕಂಪೆನಿಗಳು ಈ ದಿಶಾ ಉದ್ಯೋಗ ಪರ್ವದಲ್ಲಿ ಭಾಗವಹಿಸಲಿದ್ದು, ಈಗಾಗಲೇ 66 ಕಂಪೆನಿಗಳು ಹೆಸರನ್ನು ನೊಂದಾಯಿಸಿಕೊಂಡಿದೆ ಎಂದರು.

ಈಗಾಗಲೇ ನೊಂದಾಯಿಸಿಕೊಂಡಿರುವ ಕಂಪೆನಿಗಳಲ್ಲಿ ಎಸೆಸೆಲ್ಸಿ ವಿದ್ಯಾರ್ಹತೆ ಹೊಂದಿದವರಿಗೆ 1842 , ಐಟಿಐ ಡಿಪ್ಲೋಮಾ ಹೊಂದಿದವರಿಗೆ 1164, ಪದವಿಯಾದವರಿಗೆ 2223 ಹಾಗೂ ಸ್ನಾತಕೋತ್ತರ ಪದವೀಧದರಿಗೆ 937 ಉದ್ಯೋಗಗಳು ಲಭ್ಯವಿವೆ. ಇದರಲ್ಲಿ 26 ಮಂಗಳೂರು ಮೂಲದ ಕಂಪೆನಿಗಳಾಗಿದ್ದು, 24 ಹೊರ ಜಿಲ್ಲೆಗಳು ಹಾಗೂ 6 ಹೊರ ರಾಜ್ಯಗಳ ಕಂಪೆನಿಗಳಾಗಿವೆ ಎಂದರು.

ಅಭ್ಯರ್ಥಿಗಳಿಗೆ ಉದ್ಯೋಗ ಪರ್ವದ ಮಾಹಿತಿ ನೀಡಲು ಓರಿಯಂಟೇಶನ್ ಕಾರ್ಯಕ್ರಮವನ್ನು ಫೆ. 10 ರಂದು ಕದ್ರಿ ಪಾಲಿಟೆಕ್ನಿಕ್ ನಲ್ಲಿ ಬೆಳಿಗ್ಗೆ 9 ರಿಂದ 5 ರವರೆಗೆ ನಡೆಯಲಿದೆ.

ಉದ್ಯೋಗ ಪರ್ವದ ದಿನದಂದು ಅಭ್ಯರ್ಥಿಗಳು ಬೆಳಿಗ್ಗೆ 8 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ಹಾಜರಿತಕ್ಕದ್ದು. ಮಾತ್ರವಲ್ಲದೆ ತಮ್ಮ ಜತೆ 10 ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಇತ್ತೀಚಿನ ಸ್ವವಿವರ ಮಾಹಿತಿ/ಬಯೋಡೆಟಾ, ಎಲ್ಲಾ ಅಂಕಪಟ್ಟಿಯ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಿರರಬೇಕು.

ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಹತೆ ಹೊಂದಿದವರು ಮತ್ತು ಪದವಿ, ಸ್ನಾತಕೋತ್ತರ ಮತ್ತು ಇತರ ವಿದ್ಯಾರ್ಹತೆ ಹೊಂದಿದವರು ವೆಬ್ ಸೈಟಿಗೆ ಭೇಟಿ ನೀಡುವ ಮೂಲಕ ಕಂಪೆನಿಗಳ ವಿವರ, ಹುದ್ದೆಗಳು ಮತ್ತು ಇತರ ಮಾಹಿತಿಯನ್ನು ಪಡೆಯಬಹುದು.

ಸುದ್ದಿಗೋಷ್ಟಿಯಲ್ಲಿ ದಿಶಾ ಉದ್ಯೋಗ ಪರ್ವದ ಉಸ್ತುವಾರಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿವೇಕ್ ಆಳ್ವಾ, ಅಪರ ಜಿಲ್ಲಾಧಿಕಾರಿ ಕುಮಾರ್, ಮನಾಪಾ ಆಯುಕ್ತ ಮಹ್ಮದ್ ನಝೀರ್, ಜಂಟಿ ಆಯುಕ್ತ ಗೋಕುಲ್ ದಾಸ್ ನಾಯಕ್, ಸಿ ಇಒಎಲ್ ಅಧಿಖಾರಿ ಪ್ರದೀಪ್, ಡಾ ಇಫ್ತಿಕಾರ್ ಆಲಿ ಮೊದಲಾದವರು ಉಪಸ್ತಿತರಿದ್ದರು.


Spread the love