ದರೋಡೆಗೆ ಹೊಂಚು: ಮಹಿಳೆ ಸಹಿತ ಮೂವರ ಸೆರೆ

Spread the love

ಉಡುಪಿ: ಪೆರಂಪಳ್ಳಿ -ಮಣಿಪಾಲ ರಸ್ತೆಯಲ್ಲಿರುವ ಕುಕ್ಕುಂಜೆ ಸಮೀಪ ಇಂದು ಬೆಳಗಿನ ಜಾವ 4ಗಂಟೆ ಸುಮಾರಿಗೆ ಕಾರಿನಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಮಹಿಳೆ ಸಹಿತ ಮೂವರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ರಾಜಸ್ಥಾನದ ನಿವಾಸಿಗಳಾದ ಸುರೇಶ್‌ ಚೌಧರಿ ಮತ್ತು ಪ್ರೇಮಲಾಲ್‌ ಜಾಟ್‌, ದುರ್ಗಾ ಯಾನೆ ದಿವ್ಯಾ ಎಂದು ಗುರುತಿಸಲಾಗಿದೆ. ಇವರ ಜೊತೆಯಲ್ಲಿದ್ದ ನಾಥೂರಾಮ್‌ ಹಾಗೂ ಓಂಪ್ರಕಾಶ್‌ ಎಂಬವರು ಕಾರ್ಯಾಚರಣೆ ವೇಳೆ ಪರಾರಿಯಾಗಿದ್ದಾರೆ. ಇವರ ವಶದಲ್ಲಿದ್ದ ಸುತ್ತಿಗೆ, ಚೂಪಾದ ಆಯುಧ, ಮೊಬೈಲ್‌, ಟಾಟಾ ಇಂಡಿಕಾ ಕಾರು ಹಾಗೂ ಬ್ಯಾಗ್‌ನಲ್ಲಿದ್ದ ಸ್ಕೂಡ್ರೆವರ್‌, ಬ್ಲೇಡ್‌, ಗರಗಸ, ಹ್ಯಾಂಡ್‌ಗ್ಲೌಸ್‌, ಟಾರ್ಚ್‌ ಲೈಟ್‌, ಖಾರದ ಪುಡಿ, ಹಾರೆ, ಚಾಕು, ಆಧಾರ್‌ ಕಾರ್ಡ್‌, 2 ಸಾವಿರ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಹಿಳೆಯರನ್ನು ಬಳಸಿ, ರಸ್ತೆಯಲ್ಲಿ ನಡೆದುಕೊಂಡು ಹೋಗುವವರನ್ನು ಅಡ್ಡಗಟ್ಟಿ ಚಿನ್ನಾಭರಣ ಹಾಗೂ ಹಣವನ್ನು ದರೋಡೆ ಮಾಡುವ ಉದ್ದೇಶದಿಂದ ಆಯುಧಗಳೊಂದಿಗೆ ಕಾರಿನಲ್ಲಿ ಕುಳಿತು ಹೊಂಚು ಹಾಕುತ್ತಿ ದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಉಡುಪಿ ವೃತ್ತ ನಿರೀಕ್ಷಕ ಶ್ರೀಕಾಂತ್‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಈ ವೇಳೆ ಇಬ್ಬರು ತಮ್ಮಲ್ಲಿದ್ದ ಆಯುಧ ಎಸೆದು ಪರಾರಿಯಾಗಿದ್ದಾರೆ. ಉಳಿದ ಮೂವರನ್ನು ಬಂಧಿಸಲಾಗಿದೆ.
ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love