ದೇಶದ ಅಭಿವೃದ್ಧಿಗೆ ಪೂರಕ ಕೇಂದ್ರ ಬಜೆಟ್ – ಶಾಸಕ ರಘುಪತಿ ಭಟ್

ದೇಶದ ಅಭಿವೃದ್ಧಿಗೆ ಪೂರಕ ಕೇಂದ್ರ ಬಜೆಟ್ – ಶಾಸಕ ರಘುಪತಿ ಭಟ್

ಉಡುಪಿ: ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಭಾರತದ ಮುಂದಿನ ಭವಿಷ್ಯಕ್ಕೆ ಪರಿಣಾಮ ಬೀರುವ ಬಜೆಟ್ ಆಗಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಎರಡನೇ ಸರ್ಕಾರದ ಮೊದಲ ಬಜೆಟ್’ನ್ನು ಕೇಂದ್ರದ ಎರಡನೇ ಮಹಿಳಾ ವಿತ್ತ ಸಚಿವೆ ಶ್ರೀಮತೀ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು ದೇಶದ ಅಭಿವೃದ್ಧಿ ಹಾಗೂ ಬಡಜನರ ಏಳಿಗೆಯನ್ನು ಮನಗಂಡಿದೆ. ಅದರಲ್ಲೂ ಕರಾವಳಿ ಭಾಗದ ಜನತೆಗೆ ಅಂದರೆ ಮೀನುಗಾರರ ಸುಧಾರಣೆಯ ಕ್ರಮ ಹಾಗೂ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಜಾರಿಗೊಳಿಸಿ ಪಶುಸಂಗೋಪನೆ ಸಹಿತವಾಗಿ 3737 ಕೋಟಿ ವಿಶೇಷ ಅನುದಾನ ನೀಡಿರುವುದು ಕರಾವಳಿ ಭಾಗದ ಜನತೆಗೆ ಸಂತಸವನ್ನು ತಂದಿದೆ.

5 ಲಕ್ಷಕ್ಕಿಂತ ಕಡಿಮೆ ಆದಾಯದಾರರ ತೆರಿಗೆಯನ್ನು ಸಂಪೂರ್ಣವಾಗಿ ತೆಗೆದು ಹಾಕಿದ್ದು ಮಧ್ಯಮ ವರ್ಗದ ಜನರಿಗೆ ನೀಡಿರುವ ಅತೀದೊಡ್ಡ ಉಡುಗೊರೆಯಾಗಿದೆ. ವಿದ್ಯುತ್ ಚಾಲಿತ ವಾಹನಗಳಿಗೆ 1.50ಲಕ್ಷ ಪ್ರೋತ್ಸಾಹಧನ ಹಾಗೂ 12%ರಷ್ಟಿದ್ದ ಜಿ.ಎಸ್.ಟಿ.ಯನ್ನು 5%ಕ್ಕೆ ಇಳಿಸಿದ್ದು, ಗೃಹ ಸಾಲಕ್ಕೆ ಪ್ರಾಶಸ್ತ್ಯ, ಕುಡಿಯುವ ನೀರಿನ ಯೋಜನೆಗೆ ಹರ್ ಘರ್ ಜಲ್ ಯೋಜನೆ ಹೀಗೆ ಅನೇಕ ಯೋಜನೆಗಳು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಉತ್ತಮ ಕೊಡುಗೆಯಾಗಿದೆ. ಇನ್ನು ಈ ಬಜೆಟ್ ಗ್ರಾಮಾಂತರ ಭಾಗದ ಮೂಲಭೂತ ಸೌಕರ್ಯಗಳ ಸವಾಂಗೀಣ ಅಭಿವೃದ್ಧಿಯ ಚಿಂತನೆ ಹಾಗೂ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ಧೇಶವನ್ನು ಹೊಂದಿದೆ.

ಬಜೆಟ್ನಲ್ಲಿ ಮಹಿಳೆಯರ ಅಭಿವೃದ್ಧಿಗೆ ಉತ್ತೇಜನ ನೀಡಿದ್ದು ಮುದ್ರಾ ಯೋಜನೆಯಡಿ ಮಹಿಳೆಯರಿಗೆ ಒಂದು ಲಕ್ಷದವರೆಗಿನ ಸಾಲವನ್ನು ಸರಳ ರೀತಿಯಲ್ಲಿ ನೀಡುವುದು, ಸ್ತ್ರೀಶಕ್ತಿ, ಸ್ವ-ಸಹಾಯ ಸಂಘಗಳಿಗೆ ಹೆಚ್ಚಿನ ಅನುದಾನ ನೀಡುವ ಯೋಜನೆಯನ್ನು ಜಾರಿಗೊಳಿಸುವುದರ ಮೂಲಕ ಮಹಿಳೆಯರನ್ನು ಉದ್ದಿಮೆಗಳತ್ತ ಆಕರ್ಷಿಶಿಸುವ ಉದ್ದೇಶವನ್ನು ಮೋದಿ ಸರ್ಕಾರ ಹೊಂದಿರುವುದು ಸ್ಪಷ್ಟವಾಗಿದೆ. ಪ್ರಸ್ತುತ ಮಾತ್ರವಲ್ಲದೆ ಭಾರತದ ಮುಂದಿನ ಭವಿಷ್ಯಕ್ಕೆ ಈ ಬಜೆಟ್ ಹೆಚ್ಚಿನ ಪರಿಣಾಮ ಬೀರುವ ಬಜೆಟ್ ಆಗಿದೆ. ಇಂತಹಾ ಉತ್ತಮ ಬಜೆಟ್ ಮಂಡಿಸಿದ ಕರ್ನಾಟಕದ ಸಂಸದೆಯೂ ಆಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ