ದ್ವಿತೀಯ ಪಿಯುಸಿ ಪರೀಕ್ಷೆ: ದಕ ಜಿಲ್ಲಾಡಳಿತ ಸಕಲ ಸಿದ್ಧತೆ

Spread the love

ದ್ವಿತೀಯ ಪಿಯುಸಿ ಪರೀಕ್ಷೆ: ದಕ ಜಿಲ್ಲಾಡಳಿತ ಸಕಲ ಸಿದ್ಧತೆ

ಮ0ಗಳೂರು: ಸರಕಾರದ ಹಾಗೂ ಇಲಾಖಾ ನಿರ್ದೇಶಕರ ಆದೇಶದಂತೆ ದ್ವಿತೀಯಾ ಪಿಯುಸಿ ಪರೀಕ್ಷೆ – 2017 ನ್ನು ಸುಸೂತ್ರವಾಗಿ ನಡೆಸಲು ಬೇಕಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತದ ಸಹಯೋಗದೊಂದಿಗೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಹಿರಿಯ ಪ್ರಾಂಶುಪಾಲರನ್ನೊಳಗೊಂಡ ಒಂದು ಪರೀಕ್ಷಾ ಸಮಿತಿಯನ್ನು ರಚಿಸಿದೆ.

ಜಿಲ್ಲೆಯಲ್ಲಿ ಒಟ್ಟು 198 ಪದವಿ ಪೂರ್ವ ಕಾಲೇಜುಗಳಿದ್ದು , ಇಲಾಖಾ ನಿರ್ದೇಶನದಂತೆ ಜಿಲ್ಲೆಯಲ್ಲಿ 52 ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಲಾಗಿದೆ. ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಭೆಯನ್ನು ಉಪನಿರ್ದೇಶಕರು 2 ತಿಂಗಳಲ್ಲಿ 3 ಬಾರಿ ಕರೆದಿದ್ದು, ಎಲ್ಲಾ ಪ್ರಾಂಶುಪಾಲರಿಗೆ ಸೂಕ್ತ ಮಾಹಿತಿಯನ್ನು ನೀಡಲಾಗಿದೆ.

ಜಿಲ್ಲಾಧಿಕಾರಿಯವರು ದಿನಾಂಕ ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರ ಸಭೆಯನ್ನು ಕರೆದು ಎಲ್ಲಾ ಮಾಹಿತಿಯನ್ನು ಒದಗಿಸಿರುತ್ತಾರೆ.ಎಲ್ಲಾ ಪರೀಕ್ಷಾ ಕೇಂದ್ರಗಳ 200ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಮಾ.9ರಿಂದ 27ರವರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ ಹಾಗೂ ಪರೀಕ್ಷಾ ಅವಧಿಯವರೆಗೆ ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿರುವ ಜೆರಾಕ್ಸ್ ಅಂಗಡಿಗಳು ಕಾರ್ಯ ನಿರ್ವಹಿಸುವುದನ್ನು ನಿಷೇಧಿಸಿದೆ.

ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ವಸ್ತುಗಳನ್ನು ಉತ್ತರ ಪತ್ರಿಕೆಗಳು ಹಾಗೂ ಇತರ ಲೇಖನ ಸಾಮಗ್ರಿಗಳನ್ನು ಈಗಾಗಲೆ ಒದಗಿಸಲಾಗಿದ್ದು, ಪರೀಕ್ಷೆಗಳು ಸೂಸುತ್ರವಾಗಿ ನಡೆಯಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳಿಗೆ ಈಗಾಗಲೇ ಪ್ರವೇಶ ಪತ್ರ ನೀಡಲಾಗಿದೆ. ಅದರಲ್ಲಿ ಸಂಬಂಧಪಟ್ಟ ಪರೀಕ್ಷಾ ಕೇಂದ್ರವನ್ನು ಸೂಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆಗೆ ಸಂಬಂಧ ಮಾಹಿತಿ ಬೇಕಾದಲ್ಲಿ ಸಹಾಯವಾಣೆ ಸಂಖ್ಯೆ: 080-23083900 ಇದನ್ನು ಬೆಳಿಗ್ಗೆ 9 ರಿಂದ ಸಂಜೆ 8 ರವರೆಗೆ ಸಂಪರ್ಕಿಸಬಹುದು.

ಎಲ್ಲಾ ಕಾಲೇಜುಗಳ 15 ಕಿ.ಮೀ ವ್ಯಾಪ್ತಿಯೊಳಗಿನ ಪರೀಕ್ಷಾ ಕೇಂದ್ರಗಳನ್ನು ನಿಗದಿ ಪಡಿಸಿರುವುದರಿಂದ ವಿದ್ಯಾರ್ಥಿಗಳಿಗೆ ಇದು ಅನುಕೂಲವಾಗಿದೆ. ಈ ಬಾರಿ ಪರೀಕ್ಷೆಗಳು ಬೆಳಿಗ್ಗೆ 10.15 ರಿಂದ ಪ್ರಾರಂಭ ಗೊಳ್ಳುವುದರಿಂದ ವಿದ್ಯಾರ್ಥಿಗಳು ಯಾವುದೇ ಗೊಂದಲ ಗಡಿಬಿಡಿಗಳಿಲ್ಲದೇ ಪರೀಕ್ಷೆ ಬರೆಯಬೇಕು ಎಂದು ಪದವಿಪೂರ್ವ ಶಿಕ್ಷಣ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.


Spread the love