ಧರ್ಮಸ್ಥಳದಲ್ಲಿ 47ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ : 131 ಜೊತೆ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ

Spread the love

ಧರ್ಮಸ್ಥಳದಲ್ಲಿ 47ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ : 131 ಜೊತೆ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ

ಉಜಿರೆ: ಧರ್ಮಸ್ಥಳದಲ್ಲಿ ಭಾನುವಾರ ದಿನವಿಡಿ ಮದುವೆ ಮನೆಯ ಸಂಭ್ರಮ – ಸಡಗರ. ಸಂಜೆ ಗಂಟೆ 6.40ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಮಂಗಳವಾದ್ಯ, ವೇz ಘೋಷ ಮೊಳಗುತ್ತಿದ್ದಂತೆ 131 ಜೊತೆ ವಧೂ-ವರರು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು.
ಭಾನುವಾರ ಮುಂಜಾನೆಯಿಂದಲೇ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬೀಡಿನಲ್ಲಿ ವಧುವಿಗೆ ಸೀರೆ ಮತ್ತು ರವಿಕೆ ಕಣ ಹಾಗೂ ವರನಿಗೆ ಧೋತಿ, ಶಾಲು ಮತ್ತು ಅಂಗಿ ವಿತರಿಸಿದರು. ವಧೂ-ವರರು ಸಂಜೆ 5 ಗಂಟೆಗೆ ಭವ್ಯ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾ ಭವನಕ್ಕೆ ತೆರಳಿದರು. ಅಲ್ಲಿ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಚಲನಚಿತ್ರ ನಟ ಸುದೀಪ್ ಹಾಗೂ ಗಣ್ಯ ಅತಿಥಿಗಳು ಮಂಗಳಸೂತ್ರ ನೀಡಿದರು.

ವಧೂ-ವರರ ಪ್ರಮಾಣ ವಚನ : ಧರ್ಮಸ್ಥಳದಲ್ಲಿ ಮಂಗಲ ಮುಹೂರ್ತದಲ್ಲಿ ಸತಿ – ಪತಿಗಳಾಗಿ ಪವಿತ್ರ ಬಾಂಧವ್ಯ ಹೊಂದಿರುವ ನಾವು ಮುಂದೆ ಜೀವನದುದ್ದಕ್ಕೂ ಧರ್ಮ, ಅರ್ಥ ಮತ್ತು ಕಾಮಗಳದಲ್ಲಿ ಸಹಚರರಾಗಿ ಪರಸ್ಪರ ಪ್ರೀತಿ – ವಿಶ್ವಾಸದಿಂದ ಒಬ್ಬರಿಗೊಬ್ಬರು ವಂಚನೆ ಮಾಡದೆ ಹಾಗೂ ಯಾವುದೇ ದುರಭ್ಯಾಸಗಳಿಗೆ ಬಲಿಯಾಗದೆ ಬದುಕುತ್ತೇವೆ ಎಂದು ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಮತ್ತು ಪೂಜ್ಯ ಹೆಗ್ಗಡೆಯವರ ಸಮಕ್ಷಮದಲ್ಲಿ ಪ್ರಮಾಣ ವಚನ ಬದ್ಧರಾಗುತ್ತಿದ್ದೇವೆ.

ಮದುವೆ ಬಳಿಕ ದೇವರ ದರ್ಶನ ಮಾಡಿ ಅನ್ನಪೂರ್ಣ ಛತ್ರದಲ್ಲಿ ಔತಣ ಸ್ವೀಕರಿಸಿ ನೂತನ ದಂಪತಿಗಳು ಊರಿಗೆ ಪ್ರಯಾಣ ಬೆಳೆಸಿದರು.

ಸುಖೀ ದಾಂಪತ್ಯ ಜೀವನಕ್ಕೆ ಹೊಂದಾಣಿಕೆ ಅಗತ್ಯ : ನೂತನ ದಂಪತಿಗಳಿಗೆ ಶುಭ ಹಾರೈಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಜಾತಿ-ಮತ, ಸಂಪ್ರದಾಯದ ಎಲ್ಲೆಯನ್ನು ಮೀರಿ 23 ಜೊತೆ ಅಂತರ್ಜಾತಿಯ ವಿವಾಹವಾಗಿರುವುದು ಶ್ಲಾಘನೀಯವಾಗಿದೆ. ಹಲವು ಕಾರಣಗಳಿಂದ ಹೆಚ್ಚು ಪ್ರಾಯವಾದ ಬಳಿಕ ಮದುವೆ ಆಗುವುದು ದೊಡ್ಡ ಸಮಸ್ಯೆ ಆಗಿದೆ. ಪರಸ್ಪರ ಪ್ರೀತಿ-ವಿಶ್ವಾಸ, ನಂಬಿಕೆಯಿಂದ ಸತಿ-ಪತಿ ಹೊಂದಿಕೊಂಡು ನೆಮ್ಮದಿ ಜೀವನ ನಡೆಸಬೇಕು. ವಿಚ್ಛೇದನವೇ ಸಮಸ್ಯೆಗೆ ಪರಿಹಾರವಲ್ಲ ಎಂದು ಕಿವಿ ಮಾತು ಹೇಳಿದರು. ವಿವಾಹದ ಪಾವಿತ್ರ್ಯತೆ ಮತ್ತು ಜೀವನದ ಗೌರವ ಕಾಪಾಡಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.
ಚಲನಚಿತ್ರ ನಟ ಸುದೀಪ್ “ಎಲ್ಲರಿಗೂ ನನ್ನ ನವiಸ್ಕಾರ” ಎಂದು ಭಾಷಣ ಪ್ರಾರಂಭಿಸಿ ಕನ್ನಡಿಗರ ಪ್ರೀತಿ-ವಿಶ್ವಾಸ, ಅಭಿಮಾನವೇ ತನ್ನ ಅಮೂಲ್ಯ ಆಸ್ತಿಯಾಗಿದೆ. ಕಲಾಭಿಮಾನಿಗಳು ಕಲಾವಿದನನ್ನು ಮರೆತರೆ ಆತ ಸತ್ತ ಹಾಗೆ ಎಂದು ಹೇಳಿದರು. ಹೆಗ್ಗಡೆಯವರೇ ತನ್ನ ಚಲನಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವುದು ತನಗೆ ದೊರೆತ ದೊಡ್ಡ ಗೌರರವಾಗಿದೆ ಎಂದರು.

ಮದುವೆಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವುದನ್ನು ಪ್ರಥಮ ಬಾರಿಗೆ ತಾನು ನೋಡಿರುವುದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿರ್ಲಾ ಕಂಪೆನಿಯ ಜಂಟಿ ಅಧ್ಯಕ್ಷ ಮನೋಜ್ ಕುಮಾರ್ ಮೆಹತಾ ಶುಭಾಶಂಸನೆ ಮಾಡಿದರು.

ಹೇಮಾವತಿ ವಿ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಪ್ರಿಯಾ ಸುದೀಪ್ ಮತ್ತು ಶಾಸಕ ಕೆ. ವಸಂತ ಬಂಗೇರ ಉಪಸ್ಥಿತರಿದ್ದರು.

ಶುಭಚಂದ್ರರಾಜ ಸ್ವಾಗತಿಸಿದರು. ವಸಂತ ಭಟ್ ಧನ್ಯವಾದವಿತ್ತರು. ಶೃತಿ ಜೈನ್ ಉಜಿರೆ ಮತ್ತು ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.


Spread the love