ಧರ್ಮಸ್ಥಳ ಲಕ್ಷದೀಪೋತ್ಸವ: ‘ಭಗವಂತನೆಡೆಗಿನ ಭಕ್ತರ ನಡಿಗೆ’ಯೊಂದಿಗೆ ಚಾಲನೆ

ಧರ್ಮಸ್ಥಳ ಲಕ್ಷದೀಪೋತ್ಸವ: ‘ಭಗವಂತನೆಡೆಗಿನ ಭಕ್ತರ ನಡಿಗೆ’ಯೊಂದಿಗೆ ಚಾಲನೆ

ಉಜಿರೆ : ಗುರುವಾರ ಎಂದಿನಂತಿರಲಿಲ್ಲ. ಉಜಿರೆ-ಧರ್ಮಸ್ಥಳದ ರಸ್ತೆಯುದ್ದಕ್ಕೂ ಭಕ್ತಿ-ಭಾವಗಳ ಅಪೂರ್ವ ಸಂಗಮ. ಶ್ರೀ ಮಂಜುನಾಥ ಸ್ವಾಮಿ ದೇಗುಲದೆಡೆಗಿನ ಶ್ರದ್ಧಾಪೂರ್ವಕ ನಡಿಗೆ ಕಂಗೊಳಿಸುತ್ತಿತ್ತು. ಧರ್ಮಸ್ಥಳದ ಲಕ್ಷದೀಪೋತ್ಸವದ ಸಂಭ್ರಮದ ಆರಂಭಿಕ ಉತ್ಸಾಹ ಅನಾವರಣಗೊಂಡಿತ್ತು.

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಲಕ್ಷದೀಪೋತ್ಸವ ಪ್ರಯುಕ್ತ ಉಜಿರೆಯಿಂದ ಧರ್ಮಸ್ಥಳದವರೆಗೆ ನಡೆದ ‘ಭಗವಂತನೆಡೆಗೆ ನಮ್ಮ ನಡಿಗೆ’ ಪಾದಯಾತ್ರೆಯ ದೃಶ್ಯವಿವರಗಳಿವು. ಈ ಮೂಲಕ ಕಾರ್ತಿಕ ಮಾಸದ ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು.
ಉಜಿರೆ ಜನಾರ್ದನ ದೇವಾಸ್ಥಾನದ ಪ್ರಾಂಗಣದಲ್ಲಿ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ನಾಲ್ಕನೇ ವರ್ಷದ ಪಾದಯಾತ್ರೆಗೆ ಮಧ್ಯಾಹ್ನ ಮೂರು ಗಂಟೆಗೆ ಚಾಲನೆ ನೀಡಿದರು. ಬೆಳ್ತಂಗಡಿಯ ಸತ್ಯಸಾಯಿ ಭಜನಾಮಂಡಳಿಯ ಭಜನೆಯೊಂದಿಗೆ ಶುಭಾರಂಭಗೊಂಡ ಭಗವಂತನೆಡಗಿನ ಈ ನಡಿಗೆಯಲ್ಲಿ ಹತ್ತುಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು.

padayatre-1 padayatre-2 padayatre-3 padayatre-4 padayatre-5

ಬೆಳ್ತಂಗಡಿ ತಾಲೂಕಿನ ವಿವಿಧ ಹೋಬಳಿಗಳ ವ್ಯಾಪ್ತಿಯ ಅನೇಕ ಹಳ್ಳಿಗಳ ಭಕ್ತಸಮೂಹ ರಸ್ತೆಯುದ್ದಕ್ಕೂ ಆರಾಧನೆಯ ಅಲೆಯನ್ನುಂಟುಮಾಡಿತ್ತು. ಎಸ್‍ಡಿಎಂ ಶಿಕ್ಷಣ ಸಂಸ್ಥೆಗಳ ಬೋಧಕ-ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.

ಪಾನಕ ವ್ಯವಸ್ಥೆ ದಾರಿಯಲ್ಲಿ ಭಕ್ತರು ಭಜನೆಯನ್ನು ಮಾಡುತ್ತಾ ಭಕ್ತಿಭಾವದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ವೇಳೆ ದಾರಿ ಬದಿಯಲ್ಲಿ ಪಾನಕದ ವ್ಯವಸ್ಥೆ ಮಾಡಲಾಗಿತ್ತು.

ವಿಶೇಷ ಮೆರವಣಿಗೆ: ಶ್ರೀ ಮಂಜುನಾಥ ಸ್ವಾಮಿ ಮೂರ್ತಿಯ ಪೋಟೋದೊಂದಿಗೆ ಪಾದಯಾತ್ರೆ ಹೊರಟಿತು. ಯಕ್ಷಗಾನ ವೇಷದಾರಿಗಳು, ಗೊಂಬೆಯ ವೇಷಧಾರಿಗಳು ಈ ಸಂದರ್ಭದಲ್ಲಿ ಗಮನ ಸೆಳೆದರು.

“ನಾವು ಕಳೆದ ಎರಡು ವರ್ಷಗಳಿಂದ ಪಾದಯಾತ್ರೆಯಲ್ಲಿ ಪಾಲ್ಗೋಳ್ಳುತ್ತಿದ್ದೇನೆ. ತುಂಬಾ ಖುಷಿಯಾಗುತ್ತಿದೆ” ಎಂದು ಗ್ರಾಮಾಭಿವೃದ್ದಿ ಸಂಘದ ಸದಸ್ಯೆ ಯಶೊದಾ ಪ್ರತಿಕ್ರಿಯಿಸಿದರು.

ವರದಿ: ಪೂರ್ವಗೌಡ ಕರಿಯನೆಲ, ಚಿತ್ರಗಳು: ಚೈತನ್ಯ ಕುಡಿನಲ್ಲಿ