ನಕಲಿ ಪ್ರವೇಶ ಪತ್ರ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನಿಸಿದ ಯುವಕನ ಬಂಧನ

Spread the love

ನಕಲಿ ಪ್ರವೇಶ ಪತ್ರ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನಿಸಿದ ಯುವಕನ ಬಂಧನ

ಕಡಬ: ಪೊಲೀಸ್‌ ಇಲಾಖೆಯ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ (CPC) ನೇಮಕಾತಿಯ ದೈಹಿಕ ಪರೀಕ್ಷೆಗೆ ಹಾಜರಾಗಲು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ದುರ್ಬಳಕೆ ಮಾಡಿಕೊಂಡು ನಕಲಿ ಪ್ರವೇಶ ಪತ್ರ ಸೃಷ್ಟಿಸಿ ವಂಚಿಸಲು ಯತ್ನಿಸಿದ ಕಡಬ ಮೂಲದ ಯುವಕನನ್ನು ಮಂಗಳೂರು ನಗರದ ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಬೆದ್ರಾಜೆ ಮನೆ ನಿವಾಸಿ ಯಜೇಶ್ ಬಿ.ಜೆ. ರೈ (22) ಬಂಧಿತ ಆರೋಪಿ.

ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ-2026ರ ಸಹಿಷ್ಣುತೆ ಮತ್ತು ದೇಹದಾರ್ಡ್ಯತೆ (ET & PST) ಪರೀಕ್ಷೆ ಸೆಪ್ಟೆಂಬರ್ 28 ರಂದು ಮಂಗಳೂರು ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿತ್ತು.

ನೋಂದಣಿ ಡೆಸ್ಕ್‌ನಲ್ಲಿ ಕರ್ತವ್ಯದಲ್ಲಿದ್ದ. ಸಿಬ್ಬಂದಿಗೆ ಆರೋಪಿ ಯಜೇಶ್ ರೈ ಹಾಲ್ ಟಿಕೆಟ್ (ಸಂಖ್ಯೆ: CPC5225446) ಹಾಜರುಪಡಿಸಿದ್ದಾನೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಒದಗಿಸಿದ್ದ ತಂತ್ರಾಂಶದಲ್ಲಿ ಪರಿಶೀಲಿಸಿದಾಗ, 1:5 ಅರ್ಹತಾ ಪಟ್ಟಿಯಲ್ಲಿ ಈತನ ಹೆಸರಾಗಲಿ, ಅರ್ಜಿ ಸಂಖ್ಯೆಯಾಗಲಿ ಕಂಡುಬಂದಿಲ್ಲ. ಇದರಿಂದ ಅನುಮಾನಗೊಂಡ ಅಧಿಕಾರಿಗಳು ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅದು ಮೇಲ್ನೋಟಕ್ಕೆ ನಕಲಿ ಎಂಬುದು ಬೆಳಕಿಗೆ ಬಂದಿದೆ.

ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಸತ್ಯ ಬಯಲಾಗಿದೆ. ಆರೋಪಿ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಲಿಲ್ಲ. ಆದರೂ ದೈಹಿಕ ಪರೀಕ್ಷೆಗೆ ಹಾಜರಾಗುವ ದುರುದ್ದೇಶದಿಂದ, ಅರ್ಹತೆ ಪಡೆದಿದ್ದ ಮತ್ತೊಬ್ಬ ಅಭ್ಯರ್ಥಿಯ ಅಸಲಿ ಹಾಲ್ ಟಿಕೆಟ್ ಪಡೆದುಕೊಂಡು, ಎಐ (Artificial Intelligence) ತಂತ್ರಜ್ಞಾನ ಬಳಸಿ ಅದರಲ್ಲಿ ತನ್ನ ಹೆಸರು ಹಾಗೂ ವಿವರಗಳನ್ನು ಎಡಿಟ್ ಮಾಡಿ ನಕಲಿ ಪ್ರವೇಶಪತ್ರ ಸೃಷ್ಟಿಸಿಕೊಂಡಿದ್ದನು.

ಆರೋಪಿಯ ಮೊಬೈಲ್ ಫೋನ್ ಪರಿಶೀಲಿಸಿದಾಗ, ಆ ನಕಲಿ ಹಾಲ್ ಟಿಕೆಟ್ ಎಡಿಟ್ ಮಾಡಿ ರಚಿಸಿರುವುದಕ್ಕೆ ಸಂಬಂಧಿಸಿದ ನೇರ ಡಿಜಿಟಲ್ ಪುರಾವೆಗಳು ಪತ್ತೆಯಾಗಿವೆ.

ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಪ್ರಕಾಶ್ ರುದ್ರಪ್ಪ ಹೂವಿನ ಅವರು ನೀಡಿದ ದೂರಿನ ಮೇರೆಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 87/2026, ಕಲಂ 336(1), 336(3) (ನಕಲಿ ದಾಖಲೆ ಸೃಷ್ಟಿ) ಹಾಗೊ 318(4) (ವಂಚನೆ) ಭಾರತೀಯ ನ್ಯಾಯ ಸಂಹಿತೆ (BNS) 2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.


Spread the love
Subscribe
Notify of

0 Comments