ನಾಡಾ : ಐಟಿಐ ಕಾಲೇಜಿನಲ್ಲಿ ಓರಿಯಂಟೇಶನ್ ಕಾರ್ಯಕ್ರಮ

Spread the love

ನಾಡಾ : ಐಟಿಐ ಕಾಲೇಜಿನಲ್ಲಿ ಓರಿಯಂಟೇಶನ್ ಕಾರ್ಯಕ್ರಮ

ಕುಂದಾಪುರ: ಜೀವನದಲ್ಲಿ ಅಪಘಾತ ಹಾಗೂ ಆಘಾತಗಳು ಸಹಜ. ಆದರೆ ಈ ರೀತಿಯ ದುರ್ಘಟನೆಗಳು ಅಥವಾ ಸನ್ನಿವೇಶಗಳು ನಿರ್ಮಾಣವಾದಾಗ, ಜೀವನೋತ್ಸಾಹವನ್ನು ಕಳೆದುಕೊಳ್ಳದೆ, ಮುಂದಿನ ಜೀವನದ ಗುರಿಯನ್ನು ತಲುಪುವ ನಿರ್ಧಾರಗಳೇ ಇತರರಿಗೆ ಮಾದರಿಯಾಗುತ್ತದೆ. ಅಂತರಾಷ್ಟ್ರೀಯ ಖ್ಯಾತಿ ಪಡೆದುಕೊಂಡಿರುವ ನಟ ಕ್ರಿಸ್ಟೋಫರ್ ಅವರ ಜೀವನಗಾಥೆಯೇ ಇದಕ್ಕೊಂದು ಒಳ್ಳೆಯ ನಿದರ್ಶನ ಎಂದು ರೇ.ಫಾ.ರಾಬರ್ಟ್ ಝಡ್ ಎಂ ಡಿಸೋಜಾ ಸೊಸೈಟಿಯ ಕಾರ್ಯದರ್ಶಿ ನವೀನ್ ಲೋಬೊ ಅಭಿಪ್ರಾಯ ಪಟ್ಟರು.

ನಾಡಾ ರೇ.ಫಾ.ರೋಬರ್ಟ್ ಝಡ್ ಎಂ ಡಿಸೋಜಾ ಸ್ಮಾರಕ ಐಟಿಐ ಕಾಲೇಜಿನ 2024 ನೇ ಸಾಲಿನ ಪ್ರವೇಶಾರ್ಥಿಗಳು ಹಾಗೂ ಪೋಷಕರಿಗಾಗಿ ನಡೆದ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾಚಾರ್ಯ ಮನೋಹರ್ ಆರ್ ಕಾಮತ್ ಮಾತನಾಡಿ, ಶಿಸ್ತುಬದ್ಧವಾದ ಜೀವನ ಹಾಗೂ ಅಭ್ಯಾಸಗಳು ನಮ್ಮ ಬದುಕನ್ನು ಆದರ್ಶಮಯವಾಗಿ ರೂಪಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳುವ ಸಮಯಪಾಲನೆ, ಶಿಸ್ತು ಹಾಗೂ ಆರೋಗ್ಯಕರ ಚಟುವಟಿಕೆಗಳಿ ಭವಿಷ್ಯದ ಉದ್ಯೋಗದ ಹಾಗೂ ವ್ಯವಹಾರದ ಜೀವನವನ್ನು ಭದ್ರಗೊಳಿಸುತ್ತದೆ. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಕಡಿಮೆ ಅವಧಿಯಲ್ಲಿ ತಾಂತ್ರಿಕ ತರಬೇತಿಯನ್ನು ಪಡೆದುಕೊಂಡು ಕೇಂದ್ರ ಸರ್ಕಾರದ ಪ್ರಮಾಣಪತ್ರಗಳನ್ನು ಪಡೆದುಕೊಳ್ಳುವ ಐಟಿಐ ಶಿಕ್ಷಣಾರ್ಥಿಗಳಿಗೆ ದೇಶ-ವಿದೇಶದಲ್ಲಿ ಒಳ್ಳೆಯ ಉದ್ಯೋಗಾವಕಾಶಗಳು ಹುಡುಕಿಕೊಂಡು ಬರುತ್ತಿದೆ. ಕೇವಲ ಆಶ್ರಿತ ಉದ್ಯೋಗಗಳಲ್ಲದೆ ಸ್ವಂತ ವ್ಯವಹಾರ ಹಾಗೂ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸುವವರಿಗೆ ಅವಕಾಶಗಳು ಇದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ರೇ.ಫಾ.ರಾಬರ್ಟ್ ಝಡ್ ಎಂ ಡಿಸೋಜಾ ಸೊಸೈಟಿಯ ಅಧ್ಯಕ್ಷ ಕಿರಣ್ ಲೋಬೊ ಅವರು, ಈ ಸಂಸ್ಥೆಯ ಸ್ಥಾಪನೆ ಮಾಡಿದ್ದ ದಿ.ಆಲ್ಫೋನ್ಸ್ ಲೋಬೊ ಅವರು, ಗ್ರಾಮೀಣ ಭಾಗದಲ್ಲಿನ ಮಕ್ಕಳಿಗೆ ಒಳ್ಳೆಯ ಶಿಕ್ಷಣಾವಕಾಶ ದೊರಕಬೇಕು ಎನ್ನುವ ಕಾರಣದಿಂದ ನಾಡಾದಂತಹ ಗ್ರಾಮೀಣ ಭಾಗದಲ್ಲಿ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಇಲ್ಲಿ ಶಿಕ್ಷಣ ಪಡೆದುಕೊಂಡಿರುವ ಸಾವಿರಾರು ವಿದ್ಯಾರ್ಥಿಗಳು ದೇಶ-ವಿದೇಶದಲ್ಲಿ ಒಳ್ಳೆಯ ಜೀವನವನ್ನು ನಡೆಸುವ ಮೂಲಕ ಸಂಸ್ಥಾಪಕ ಆದರ್ಶಗಳಿಗೆ ಸಾರ್ಥಕತೆ ತಂದಿದ್ದಾರೆ ಎಂದರು.

ಕಾಲೇಜಿನ ಪ್ಲೇಸ್ಮೆಂಟ್ ಅಧಿಕಾರಿ ರಾಜೇಶ್ ಕೆ.ಸಿ ಹಾಗೂ ಕಿರಿಯ ತರಬೇತಿ ಅಧಿಕಾರಿ ಯೋಗೀಶ್ ಬಂಕೇಶ್ವರ ಮಾತನಾಡಿದರು. ಕಿರಿಯ ತರಬೇತಿ ಅಧಿಕಾರಿಗಳಾದ ಮೋಹನ್‌ಚಂದ್ರ ಪಿ ನಾಯಕ್, ಪ್ರೇಮರಾಜ್ ಶೆಟ್ಟಿ, ಡೆಬ್ರಿಯಲ್ ಪಿ ಫೆರ್ನಾಂಡಿಸ್, ಶ್ರೀಕಾಂತ್ ನಾಯಕ್, ಸಿಬ್ಬಂದಿಗಳಾದ ಶಂಕರನಾರಾಯಣ ಭಟ್, ವಿನಾಯಕ ಕಾಮತ್, ಅಂತೋನಿ ಕ್ರಾಸ್ತಾ ಇದ್ದರು.

ಕಿರಿಯ ತರಬೇತಿ ಅಧಿಕಾರಿಗಳಾದ ರಾಘವೇಂದ್ರ ಆಚಾರ್ ಸ್ವಾಗತಿಸಿದರು, ದಿನೇಶ್ ಕೆ ಬೈಂದೂರು ವಂದಿಸಿದರು, ಕಿಶೋರ್ ಸಸಿಹಿತ್ಲು ನಿರೂಪಿಸಿದರು.


Spread the love
Subscribe
Notify of

0 Comments
Inline Feedbacks
View all comments