ನಾಪತ್ತೆಯಾದ ಮೀನುಗಾರರನ್ನು ಹುಡುಕಲು ವಿಫಲವಾದ ಸಚಿವರು ರಾಜೀನಾಮೆ ನೀಡಲಿ – ಯಶ್ಪಾಲ್ ಸುವರ್ಣ

Spread the love

ನಾಪತ್ತೆಯಾದ ಮೀನುಗಾರರನ್ನು ಹುಡುಕಲು ವಿಫಲವಾದ ಸಚಿವರು ರಾಜೀನಾಮೆ ನೀಡಲಿ – ಯಶ್ಪಾಲ್ ಸುವರ್ಣ

ಉಡುಪಿ: ಮೀನುಗಾರರ ಹಿತವನ್ನು ಕಾಪಾಡಲು ಸಾಧ್ಯವಾಗದ ಮೀನುಗಾರಿಕಾ ಸಚಿವರು ಕೂಡಲೇ ನೈತಿಕ ಹೊಣೆ ಹೊತ್ತು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ಮೀನುಗಾರರ ಬಗ್ಗೆ ಅನುಭವ ಹೊಂದಿರುವ ವ್ಯಕ್ತಿಯನ್ನು ಮೀನುಗಾರಿಕಾ ಸಚಿವರನ್ನು ಸರಕಾರ ನೇಮಿಸಬೇಕು ಎಂದು ದಕ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೇಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

ಅವರು ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿ ಸುವರ್ಣ ತ್ರಿಭುಜ ಬೋಟ್ ಮತ್ತು ಅದರಲ್ಲಿನ ಮೀನುಗಾರರು ನಾಪತ್ತೆಯಾಗಿ ಒಂದು ತಿಂಗಳು ಕಳೆದಿದ್ದು ರಾಜ್ಯ ಸರಕಾರ ಅದನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಸಂಪೂರ್ಣ ವಿಫಲವಾಗಿದೆ. ಮೀನುಗಾರ ಸಚಿವರ ಉಡುಪಿಗೆ ಭೇಟಿ ನೀಡಿದಾಗ ಕೂಡಲೇ ಗೋವಾ ಮತ್ತು ಮಹಾರಾಷ್ಟ್ರ ಸರಕಾರದ ಜೊತೆ ಮಾತುಕತೆಗೆ ಸಭೆ ಕರೆಯಲು ಅಗ್ರಹಿಸಲಾಗಿತ್ತು. ಆದರೆ ಈ ವರೆಗೆ ಸರಕಾರ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಅಲ್ಲದೆ ಕಾರ್ಯಾಚರಣೆಯ ವೇಳೆ ಮೀನುಗಾರಿಕಾ ಸಚಿವರು ಖುದ್ದಾಗಿ ಉಡುಪಿಯಲ್ಲಿ ವಾಸ್ತವ್ಯ ಹೂಡಿ ಪತ್ತೆ ಕಾರ್ಯದಲ್ಲಿ ಅದಿಕಾರಿಗಳೊಂದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದೇವು. ಆದರೆ ಸಚಿವರು ಕೇವಲ ಕಾಟಾಚಾರಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ಮಾಡಿ ತೆರಳಿದ್ದಾರೆ. ಇವರು ನಡೆಸಿದ ಸಭೆಯಿಂದ ಯಾವುದೇ ರೀತಿಯ ಪ್ರಯೋಜನವಾಗಿಲ್ಲ.

ಕರಾವಳಿಯ ಮೀನುಗಾರಿಕೆಗೆ ಶಕ್ತಿ ತುಂಬಬೇಕಾದಲ್ಲಿ ಕರಾವಳಿಯ ಮೀನುಗಾರಿಕೆ ಬಗ್ಗೆ ಅನುಭವ ಹೊಂದಿರುವ ವ್ಯಕ್ತಿ ಮೀನುಗಾರಿಕಾ ಸಚಿವರಾಗಬೇಕು. ಈಗಾಗಲೇ ಕರ್ನಾಟಕ ಸರಕಾರ ಕಳೆದ ಬಜೆಟಿನಲ್ಲಿ ಕರಾವಳಿಯ ಮೀನುಗಾರಿಕೆಯನ್ನು ಸಂಪೂರ್ಣ ನಿರ್ಲಕ್ಷ ಮಾಡಿದ್ದು ಅದೇ ರೀತಿ ಮೀನುಗಾರರ ನಾಪತ್ತೆ ಪ್ರಕರಣವನ್ನು ಕೂಡ ನಿರ್ಲಕ್ಷ್ಯ ಮಾಡುತ್ತಿದೆ.  ಇನ್ನಾದರೂ ಕೂಡ ರಾಜ್ಯದ ಗೃಹಸಚಿವರು ಮತ್ತು ಮೀನುಗಾರಿಕಾ ಸಚಿವರು ಮಹಾರಾಷ್ಟ್ರಕ್ಕೆ ತೆರಳಿ ಅಲ್ಲಿ ಖುದ್ದಾಗಿ ವಾಸ್ತವ್ಯ ಹೂಡುವುದರ ಮೂಲಕ ಜಿಲ್ಲಾ ವರಿಷ್ಠಾಧಿಕಾರಿಗಳ ತಂಡಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಾಡಬೇಕಾಗಿದೆ.  ಒಂದು ವೇಳೆ ಇಂತಹ ಕೆಲಸ ಮಾಡಲು ವಿಫಲವಾದರೆ ಕೂಡಲೇ ಸಚಿವರು ರಾಜೀನಾಮೆ ನೀಡಬೇಕು . ಮೀನುಗಾರರ ಕಷ್ಟವನ್ನು ಅರಿಯಲು ಸಾಧ್ಯವಾಗದ ಸಚಿವರು ನಮಗೆ ಅಗತ್ಯವಿಲ್ಲ. ನಿಮ್ಮ ಬದಲು ಸೂಕ್ತ ಒರ್ವ ಶಾಸಕನನ್ನು ಮೀನುಗಾರಿಕಾ ಸಚಿವರನ್ನಾಗಿ ಮಾಡಬೇಕು ಎಂದು ಅವರು ಆಗ್ರಹಿಸಿದರು.


Spread the love