ನಾಪತ್ತೆಯಾದ ಮೀನುಗಾರರನ್ನು ಹುಡುಕುವಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿಫಲ – ಪ್ರಮೋದ್

Spread the love

ನಾಪತ್ತೆಯಾದ ಮೀನುಗಾರರನ್ನು ಹುಡುಕುವಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿಫಲ – ಪ್ರಮೋದ್

ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಮತ್ತು ಅದರಲ್ಲಿದ್ದ ಮೀನುಗಾರರು ನಾಪತ್ತೆಯಾಗಿ 3 ತಿಂಗಳುಗಳೇ ಕಳೆದರೂ ಕೂಡ ಯಾವುದೇ ರೀತಿಯ ಸುಳಿವನ್ನು ನೀಡಲು ಕೇಂದ್ರದ ರಕ್ಷಣಾ ಇಲಾಖೆ ಹಾಗೂ ಸ್ಥಳೀಯ ಸಂಸದರಾಗಿದ್ದ ಶೋಭಾ ಕರಂದ್ಲಾಜೆ ಸಂಪೂರ್ಣ ವಿಫಲಾಗಿದ್ದಾರೆ. ಈ ಬೋಟು ನೌಕಾ ಸೇನೆಯ ಹಡಗಿಗೆ ಡಿಕ್ಕಿ ಹೊಡೆದ ಅನುಮಾನವಿದ್ದು ನೌಕಾ ಸೇನೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಎಂದು ಉಡುಪಿ- ಚಿಕ್ಕಮಗಳೂರು ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ ಮಾಡಿದ್ದಾರೆ.

ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತ, ಉಡುಪಿ –ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಸುವಾಗ ದೇಶದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಬರುತ್ತಾರೆ ಎನ್ನುವ ಮಾಹಿತಿ ಇದೆ. ಮೀನುಗಾರರು ನಾಪತ್ತೆಯಾಗಿ ಮೂರು ತಿಂಗಳುಗಳು ಕಳೆದರೂ ಕೂಡ ಯಾವುದೇ ಮಾಹಿತಿ ಅಥವ ಸುಳಿವು ಕೇಂದ್ರ ಸರಕಾರ ನೀಡುವಲ್ಲಿ ವಿಫಲವಾಗಿದೆ. ಅಂದು ಮೀನುಗಾರರು ಕಾಣೆಯಾದ ಪ್ರಕರಣ ಏನಾಯ್ತು ಎಂದು ರಕ್ಷಣಾ ಸಚಿವರೇ ಉತ್ತರಿಸಬೇಕು ಎಂದು ಹೇಳಿದರು.

ನೊಂದ ಮನೆಯವರ ನೋವಿಗೆ ಯಾರು ಉತ್ತರಿಸುತ್ತಾರೆ. ಮೀನುಗಾರರು ಬದುಕಿದ್ದಾರೆಯೋ ಇಲ್ಲವೇ ಗೊತ್ತಿಲ್ಲ. ನಾಪತ್ತೆ ಹಿಂದೆ ನೌಕಾಸೇನೆಯವರ ಕೈವಾಡ ಇದೆ ಅನ್ನೋ ಸಂಶಯ ಇದೆ. ನೌಕಾಸೇನೆಯ ಶಿಪ್ ಬೋಟ್ ಗೆ ಅಪಘಾತ ಮಾಡಿದ ಸಂಶಯ ಇದೆ. ನೌಕಾಸೇನೆ ಸಮುದ್ರದಲ್ಲಿ ಹುಡುಕುವ ನಾಟಕ ಮಾಡಿದೆ. ಚುನಾವಣೆಯವರೆಗೆ ಈ ಸತ್ಯ ಮರೆಮಾಚುವ ಪ್ರಯತ್ನ ಇದು ಎಂದು ಆರೋಪಗಳ ಸುರಿಮಳೆಗೈದರು

ಮೀನುಗಾರ ಸಮುದಾಯಕ್ಕೆ ಕೇಂದ್ರ ಸರ್ಕಾರ ಏನೂ ಮಾಡಿಲ್ಲ. ಮೀನುಗಾರರ ನಾಪತ್ತೆಗೆ ಕೇಂದ್ರ ಸರ್ಕಾರ ಮತ್ತು ನಿರ್ಮಲಾ ಸೀತಾರಾನ್ ವೈಫಲ್ಯವೇ ಇದಕ್ಕೆ ನೇರ ಕಾರಣವಾಗಿದ್ದು, ರಕ್ಷಣಾ ಸಚಿವರೇ ಉತ್ತರಿಸಿ ಎಂದು ಪ್ರಮೋದ್ ಇದೇ ವೇಳೆ ಆಗ್ರಹಿಸಿದರು.


Spread the love