ನಾಯಕನಾದವನು ಪ್ರೀತಿ, ಕ್ಷಮಾಗುಣದಿಂದ ಸಮಾಜದಲ್ಲಿ ಬದಲಾವಣೆ ತರಬಲ್ಲ – ವಂ| ವಲೇರಿಯನ್ ಮೆಂಡೊನ್ಸಾ

Spread the love

ನಾಯಕನಾದವನು ಪ್ರೀತಿ, ಕ್ಷಮಾಗುಣದಿಂದ ಸಮಾಜದಲ್ಲಿ ಬದಲಾವಣೆ ತರಬಲ್ಲ – ವಂ| ವಲೇರಿಯನ್ ಮೆಂಡೊನ್ಸಾ

ಉಡುಪಿ: ಆಧ್ಯಾತ್ಮಿಕ ವಿಚಾರದಿಂದ ದೂರ ಹೋಗುತ್ತಿರುವ ಯುವಜನರನ್ನು ಧಾರ್ಮಿಕ ವಿಚಾರಗಳತ್ತ ಸೆಳೆಯುವ ನಿಟ್ಟಿನಲ್ಲಿ ಕಲ್ಯಾಣಪುರ ವಲಯದ ಕ್ರೈಸ್ತ ಯುವಸಮುದಾಯಕ್ಕೆ ತೊಟ್ಟಂ ಸಂತ ಅನ್ನಮ್ಮ ದೇವಾಲಯದ ಭಾರತೀಯ ಕಥೊಲಿಕ ಯುವ ಸಂಚಾಲನ ಇದರ ನೇತೃತ್ವದಲ್ಲಿ ಒಂದು ದಿನದ ಗೊಸ್ಪೆಲ್ ಗಾಲಾ (ಸುವಾರ್ತೆಯ ಸಂಭ್ರಮ) ಎಂಬ ವಿಶಿಷ್ಠ ಕಾರ್ಯಕ್ರಮವನ್ನು ಭಾನುವಾರ ಚರ್ಚಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಬೈಬಲ್ ಶ್ರೀ ಗ್ರಂಥಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗುವುದರ ಮೂಲಕ ಕಲ್ಯಾಣಪುರ ವಲಯ ಪ್ರಧಾನ ಧರ್ಮಗುರು ವಂ|ವಲೇರಿಯನ್ ಮೆಂಡೊನ್ಸಾ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು ಪ್ರೀತಿ ಮತ್ತು ಕ್ಷಮೆಯ ಗುಣಗಳ ಮೂಲಕ ಒರ್ವ ಉತ್ತಮ ನಾಯಕ ಸಮಾಜದಲ್ಲಿ ಬದಲಾವಣೆಯನ್ನು ತರಲು ಸಾಧ್ಯವಿದೆ. ಯೇಸು ಸ್ವಾಮಿಯು ತನ್ನ ಜೀವನದಲ್ಲಿ ಕ್ಷಮೆ ಮತ್ತು ಪ್ರೀತಿಯ ಮೂಲಕ ಇಡೀ ವಿಶ್ವದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ಮಾಡಿ ತೋರಿಸಿರುವುದು ನಮಗೆಲ್ಲರಿಗೂ ಮಾದರಿಯಾಗಿದೆ. ಯೇಸು ಸ್ವಾಮಿಯವರು ತೋರಿಸಿಕೊಟ್ಟ ಮೌಲ್ಯಗಳೊಂದಿಗೆ ನಾವು ಬದುಕಿದಾಗ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಒರ್ವ ಮಾದರಿ ನಾಯಕನಾಗಲು ಸಾಧ್ಯವಿದೆ ಎಂದರು.

ತೊಟ್ಟಂ ಸಂತ ಅನ್ನಮ್ಮ ದೇವಾಲಯದ ಧರ್ಮಗುರು ವಂ|ಡೆನಿಸ್ ಡೆಸಾ ಮಾತನಾಡಿ 2025 ಯೇಸು ಸ್ವಾಮಿಯ ಹುಟ್ಟಿನ ಜುಬಿಲಿ ಆಚರಣೆಯಿದ್ದು ಇದಕ್ಕೆ ಪೂರಕವಾಗಿ ಈ ವರ್ಷವನ್ನು ಪ್ರಾರ್ಥನೆಯ ವರ್ಷವಾಗಿ ಘೋಷಿಸಲಾಗಿದೆ. ಯುವ ಜನರು ಹೇಗೆ ಆಟೋಟ, ಸಾಂಸ್ಕೃತಿಕ ವಿಚಾರಗಳಲ್ಲಿ ತೊಡಗಿಸಿಕೊಳ್ಳುತ್ತಾರೋ ಅದೇ ರೀತಿ ಆಧ್ಯಾತ್ಮಿಕ ವಿಚಾರಗಳಿಗೂ ಕೂಡ ಅವರುಗಳು ಆಸಕ್ತಿ ತೋರಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಲ್ಯಾಣಪುರ ವಲಯ 9 ಚರ್ಚುಗಳ ಸುಮಾರು 175 ಯುವಜನರು ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಯುವಜನರ ಪರಿಚಯವನ್ನು ವಿಶಿಷ್ಠ ವಿಧಾನದಲ್ಲಿ ಮಾಡಲಾಯಿತು ಬಳಿಕ ಯುವಜನರೊಂದಿಗೆ ಆಧ್ಯಾತ್ಮಿಕ ಸಂವಾದ ಮತ್ತು ಸಂಭಾಷಣೆ, ಬೈಬಲ್ ಕ್ವಿಜ್, ಬೈಬಲ್ ರೀಲ್ಸ್ ಮಾಡುವ ಸ್ಪರ್ಧೆ, ಕೊಲಾಜ್ ಮಾಡುವುದು ಹಾಗೂ ಆಧ್ಯಾತ್ಮಿಕ ಗಾಯನ ಕಾರ್ಯಕ್ರಮಗಳಲ್ಲಿ ವಲಯದ ಯುವಜನರು ವಿಶಿಷ್ಠ ಆಸಕ್ತಿಯಿಂದ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ತೊಟ್ಟಮ್ ಸಂತ ಅನ್ನಮ್ಮ ಕಾನ್ವೆಂಟ್ ನ ಮುಖ್ಯಸ್ಥರಾದ ಸಿಸ್ಟರ್ ಸುಷ್ಮಾ, ಉಡುಪಿ ಧರ್ಮಪ್ರಾಂತ್ಯದ ಐಸಿವೈಎಮ್ ಅಧ್ಯಕ್ಷರಾದ ಗೊಡ್ವಿನ್ ಮಸ್ಕರೇನ್ಹಸ್, ವಲಯ ಅಧ್ಯಕ್ಷರಾದ ಲೊಯ್ಡ್ ಕರ್ನೆಲಿಯೊ, ತೊಟ್ಟಂ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಸುನಿಲ್ ಫೆರ್ನಾಂಡಿಸ್, ಐಸಿವೈಎಮ್ ಸಚೇತಕರಾದ ಲೆಸ್ಲಿ ಆರೋಝಾ, ಆಲಿಸ್ ಮಿನೇಜಸ್ ಉಪಸ್ಥಿತರಿದ್ದರು.

ತೊಟ್ಟಂ ಐಸಿವೈಎಮ್ ಅಧ್ಯಕ್ಷರಾದ ಸ್ಯಾಮುವೆಲ್ ಫೆರ್ನಾಂಡಿಸ್ ಸ್ವಾಗತಿಸಿ, ಪ್ರಿಯಾಂಕ ಮಾರ್ಟಿಸ್ ವಂದಿಸಿದರು.


Spread the love

Leave a Reply