ನಾಲ್ವರು ಅಂತರರಾಜ್ಯ ಕಳ್ಳರ ಬಂಧನ; ರೂ 7 ಲಕ್ಷ ಮೌಲ್ಯದ ಸ್ವತ್ತುಗಳ ವಶ

Spread the love

ನಾಲ್ವರು ಅಂತರರಾಜ್ಯ ಕಳ್ಳರ ಬಂಧನ; ರೂ 7 ಲಕ್ಷ ಮೌಲ್ಯದ ಸ್ವತ್ತುಗಳ ವಶ

ಉಡುಪಿ: ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆದು ಚಿನ್ನಾಭರಣ, ನಗದು ದೋಚಿ ಪರಾರಿಯಾಗುತ್ತಿದ್ದ ಇರಾನಿ ಗ್ಯಾಂಗ್‌ನ ನಾಲ್ವರು ವಂಚಕರನ್ನು ಪೊಲೀಸರು ಬಂಧಿಸಿದ್ದಾರೆ.

ಈಚೆಗೆ ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ಆರೋಪಿಗಳು ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉಡುಪಿ ಡಿಸಿಐಬಿ ಇನ್‌ಸ್ಪೆಕ್ಟರ್ ಡಿ.ಆರ್. ಮಂಜಪ್ಪ ನೇತೃತ್ವದ ತಂಡ ದಾಳಿ ನಡೆಸಿ ಅಂತರರಾಜ್ಯ ಕಳ್ಳರನ್ನು ಬಂಧಿಸಿದೆ.

ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ಇರಾನಿ ಮೊಹಲ್ಲಾದ ಜಾಕೀರ್ ಹುಸೇನ್‌, ಶ್ರೀರಾಮಪುರದ ಕಂಬರ್, ಸಂಜಯ್ ನಗರದ ಅಕ್ಷಯ್ ಗೋಸಾವಿ, ಸೈನಿಕ್‌ ನಗರದ ಶಾರುಖ್‌ ಬಂಧಿತರು. ಎಲ್ಲರೂ ಮಹಾರಾಷ್ಟ್ರದವರಾಗಿದ್ದು, ದೆಹಲಿ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಹಲವೆಡೆ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಂಚನೆ ಹೇಗೆ: ಒಂಟಿ ವೃದ್ಧ ಮಹಿಳೆಯರು ಅಥವಾ ಪುರುಷರು ರಸ್ತೆಯಲ್ಲಿ ಹೋಗುವಾಗ ಅವರ ಬಳಿ ಹೋಗಿ ಪೊಲೀಸರು ಎಂದು ಪರಿಚಯಿಸಿಕೊಳ್ಳುತ್ತಿದ್ದ ವಂಚಕರು, ಮುಂದೆ ಗಲಾಟೆ ನಡೆದಿದ್ದು, ಚಿನ್ನಾಭರಣ ಧರಿಸಿ ಓಡಾಡುವುದು ಸುರಕ್ಷಿತವಲ್ಲ. ಆಭರಣವನ್ನು ಬ್ಯಾಗ್‌ನಲ್ಲಿ ಇಟ್ಟುಕೊಳ್ಳಿ ಎಂದು ನಂಬಿಸಿ ಅವರಿಂದ ಚಿನ್ನಾಭರಣ ಎಗರಿಸಿ ಪರಾರಿಯಾಗುತ್ತಿದ್ದರು.

ತನಿಖೆಯ ವೇಳೆ ಆರೋಪಿಗಳ ವಿರುದ್ಧ ನಗರ ಠಾಣೆ, ಕುಂದಾಪುರ ಠಾಣೆಯಲ್ಲಿ ತಲಾ 1, ವಿಜಯಪುರದಲ್ಲಿ 4, ಚಿಕ್ಕಮಗಳೂರಿನಲ್ಲಿ 1, ಬಂಟ್ವಾಳದಲ್ಲಿ 1, ಮಂಗಳೂರು ಉರ್ವ ಠಾಣೆ ವ್ಯಾಪ್ತಿಯಲ್ಲಿ 1 ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ. ಆರೋಪಿಗಳು ಹಲವು ಕಡೆಗಳಲ್ಲಿ ಕಳವು ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ಮಂಗಳೂರಿನಲ್ಲಿ 12 ಗ್ರಾಂ ಚಿನ್ನದ ಚೈನ್ ಕದ್ದಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಬೈಕ್‌, ₹ 5,100 ವಶಕ್ಕೆ ಪಡೆಯಲಾಗಿದೆ. ಕದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದ ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಶ್ರೀರಾಂಪುರದ ಚಿನ್ನದ ಅಂಗಡಿಯಿಂದ 65 ಗ್ರಾಂ ಚಿನ್ನವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಒಟ್ಟು ₹ 7 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಳಾಗಿದೆ ಎಂದು ಪೊಲೀಸರು ತಿಳಿಸಿದರು

ಕಾರ್ಯಾಚರಣೆಯಲ್ಲಿ ಉಡುಪಿ ನಗರ ಸರ್ಕಲ್ ಇನ್‌ಸ್ಪೆಕ್ಟರ್ ಮಂಜುನಾಥ, ಡಿಸಿಐಬಿ ಇನ್‌ಸ್ಪೆಕ್ಟರ್ ಡಿ.ಆರ್.ಮಂಜಪ್ಪ, ಉಡುಪಿ ನಗರ ಠಾಣೆ ಪಿಎಸ್‌‌ಐ ಶಕ್ತಿವೇಲು, ಕುಂದಾಪುರ ಪಿಎಸ್‌ಐ ಸದಾಶಿವ ಗವರೋಜಿ, ಎಎಸ್‌ಐ ಸುಧಾಕರ, ಲೋಕೇಶ್, ರಿಯಾಝ್, ಅಹ್ಮದ್, ಮಂಜುನಾಥ, ಸಂತೋಷ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love