ನಿವೃತ್ತ ಅಧಿಕಾರಿಯನ್ನು ಪುನರ್ ಪ್ರತಿಷ್ಠಾಪಿಸುವ ಪ್ರಯತ್ನಕ್ಕೆ ಆಕ್ಷೇಪ
- ಯುವಕರ ಪರಿಗಣನೆ ಆಗದೆ ಇದ್ದಲ್ಲಿ ಸಿಎಂ ಗಮನಕ್ಕೆ ತರುವ ಎಚ್ಚರಿಕೆ
 
ಉಡುಪಿ: ಇತ್ತೀಚೆಗಷ್ಟೆ ನಿವೃತ್ತರಾಗಿರುವ ಸರ್ಕಾರಿ ಅಧಿಕಾರಿಯೊಬ್ಬರಿಗೆ ಪುನರ್ ವಸತಿ ಕಲ್ಪಿಸುವ ಉದ್ದೇಶವನ್ನುನಿರಿಸಿಕೊಂಡು ಸರ್ಕಾರಿ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡಿರುವ ಸಹಕಾರಿ ಸಂಘವೊಂದನ್ನು ಪ್ರಾರಂಭಿಸಿ, ನಿವೃತ್ತರಾಗಿರುವ ಆ ಅಧಿಕಾರಿಯನ್ನು ಅಲ್ಲಿ ಪ್ರತಿಷ್ಠಾಪಿಸುವ ಪ್ರಯತ್ನವೊಂದು ಸದ್ದಿಲ್ಲದೆ ನಡೆಯುತ್ತಿರುವುದಕ್ಕೆ ಇದೀಗ ವಿರೋಧ ವ್ಯಕ್ತವಾಗುತ್ತಿದೆ.
ಹಲವು ವಿವಾದಗಳ ಕೇಂದ್ರ ಬಿಂದುವಾಗಿದ್ದ ಹಾಗೂ ನಿವೃತ್ತ ದಿನಗಳಲ್ಲಿ 4-5 ಇಲಾಖಾ ಜವಾಬ್ದಾರಿಗಳನ್ನು ವಹಿಸಿಕೊಂಡು ಅಧಿಕಾರದ ಸ್ವರ್ಗ ಸುಖವನ್ನು ಅನುಭವಿಸಿದ್ದ ಸ್ವಯಂ ಘೋಷಿತ ಪ್ರಮಾಣಿಕ ಅಧಿಕಾರಿಯೊಬ್ಬರು, ಸರ್ಕಾರಿ ಸೇವೆಯನ್ನು ಮುಗಿಸಿದ ಬಳಿಕವೂ, ತಾನು ಬಕೇಟ್ ಹಿಡಿದ ಗಿರಾಕಿಗಳನ್ನು ಓಲೈಸಿಕೊಂಡು ಮತ್ತೆ ಸಾರ್ವಜನಿಕ ಹಣದಲ್ಲಿ ರಾಜಾತೀಥ್ಯ ಪಡೆಯುವ ಆಲೋಚನೆಯನ್ನು ಮಾಡಿದ್ದಾರೆ. ಅಧಿಕಾರದ ದಿನಗಳಲ್ಲಿ ಖಾಸಗಿ ಸಂಸ್ಥೆಯೊಂದರ ಪರವಾಗಿ ಪರೋಕ್ಷ ಲಾಭ ನಡೆಸಿ, ಕೋಟ್ಯಾಂತರ ರೂ. ಸಾರ್ವಜನಿಕ ಹಣವನ್ನು ಪೋಲು ಮಾಡಲು ಮುತುವರ್ಜಿ ವಹಿಸಿ, ಇದೇ ಕಾರಣದಿಂದ ಜಿಲ್ಲೆಯ ಆಯಕಟ್ಟಿನ ಹುದ್ದೆಯಿಂದ ವರ್ಗಾವಣೆಯಾಗಿದ್ದ ಈ ಅಧಿಕಾರಿ, ನಿವೃತ್ತಿ ಅಂಚಿನಲ್ಲಿದ್ದಾರೆ ಎನ್ನುವ ಮಾನವೀಯ ಕಾರಣಕ್ಕಾಗಿ ಆರೋಪಗಳಿದ್ದರೂ, ಸರ್ಕಾರದ ಬೇರೆ ಇಲಾಖೆಯಡಿ ಜಿಲ್ಲೆಯಲ್ಲಿಯೇ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ತನ್ನ ಮೇಲೆ ಅನಗತ್ಯ ಆರೋಪ ಹೊರಿಸಿ, ಗುರಿ ಮಾಡಲಾಗುತ್ತಿದೆ ಎಂದು ಸುಳ್ಳು ಮಾತುಗಳೊಂದಿಗೆ, ನಿವೃತ್ತಿ ಪೂರ್ವ ದಿನಗಳಲ್ಲಿಯೇ ಜಿಲ್ಲೆಯ ಹಿರಿಯ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ, ಅವರ ಸಹಾನುಭೂತಿಯನ್ನು ಪಡೆದುಕೊಂಡು, ನಿವೃತ್ತಿ ನಂತರ ಸ್ಥಾನ ಗಿಟ್ಟಿಸುವ ಯೋಜನಾ ತಂತ್ರ ಫಲಪ್ರದವಾಗುವಂತೆ ಯೋಜಿತ ಕಾರ್ಯಸೂಚಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದರು. ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಸೊಸೈಟಿಯೊಂದನ್ನು ಸ್ಥಾಪನೆ ಮಾಡಿ, ಸರ್ಕಾರಿ ವ್ಯವಸ್ಥೆಯಡಿಯಲ್ಲಿ ವಿವಿಧ ಇಲಾಖೆಗಳಿಗೆ ನೀಡುವ ಹೊರ ಗುತ್ತಿಗೆಯನ್ನು ಈ ಸೊಸೈಟಿಯ ಮೂಲಕ ನಿರ್ವಹಿಸುವುದು ಹಾಗೂ ಈ ಸಂಸ್ಥೆಗೆ ಈ ನಿವೃತ್ತ ಅಧಿಕಾರಿಯನ್ನು ಪ್ರತಿಷ್ಠಾಪಿಸುವುದು ಎನ್ನುವ ಸೂಕ್ಷ್ಮ ಕಾರ್ಯಯೋಜನೆಯೊಂದು ಸದ್ದಿಲ್ಲದೆ ಸಿದ್ದವಾಗುತ್ತಿದೆ. ಈ ಕುರಿತಂತೆ ಯಾವುದೇ ಅಧಿಕಾರಿಗಳು ಬಾಯಿ ಬಿಡುತ್ತಿಲ್ಲ.
ಅಧುನೀಕ ತಂತ್ರಜ್ಞಾನದ ಅನುಷ್ಠಾನದಿಂದ ಈಗಾಗಲೇ ವಿದ್ಯಾವಂತ ಯುವ ಸಮುದಾಯ ಕೆಲಸವಿಲ್ಲದೆ ಖಾಲಿ ಖಾಲಿಯಾಗಿ ಉಳಿದಿರುವ ಹಾಗೂ ಶಿಕ್ಷಣ ಮುಗಿಸಿ ವರ್ಷಗಳೇ ಕಳೆದಿದ್ದರೂ ಉದ್ಯೋಗವೇ ದೊರಕುತ್ತಿಲ್ಲ ಎನ್ನುವ ಕೊರಗಿನಿಂದ ಆತ್ಮಹತ್ಯೆಗೆ ಶರಣಾಗುತ್ತಿರುವ ಈ ದಿನಗಳಲ್ಲಿ, ಒಂದಿಬ್ಬರು ಅರ್ಹ ವಿದ್ಯಾವಂತರಿಗೆ ಕೆಲಸ ದೊರಕಬಹುದಾದ ಈ ಅವಕಾಶವನ್ನು, ಬರೊಬ್ಬರಿ ಮೂರು ದಶಕಗಳ ಕಾಲ ಸರ್ಕಾರಿ ರಾಜ ಮರ್ಯಾದೆಯನ್ನು ಅನುಭವಿಸಿ ನಿವೃತ್ತರಾಗಿರುವ ನಿವೃತ್ತ ಅಧಿಕಾರಿಯೋಬ್ಬರಿಗೆ ಉಡುಗೊರೆಯ ರೂಪದಲ್ಲಿ ಮರು ಪ್ರತಿಷ್ಠಾಪಿಸುವ ಅಗತ್ಯ ಬೇಕಾ ಎನ್ನುವ ಪ್ರಶ್ನೆಗಳು ಕೇಳಿ ಬರುತ್ತಿದೆ.
ವಿದ್ಯಾವಂತ ಜಿಲ್ಲೆ ಎನ್ನುವ ಹೆಗ್ಗುರುತು ಇರುವ ಉಡುಪಿಯಂತಹ ಜಿಲ್ಲೆಗಳಲ್ಲಿ ಜನರಿಗೆ ಅನುಕೂಲವಾಗುವ ಹೊಸ ಹೊಸ ಯೋಜನೆಯ ಅನುಷ್ಠಾನ ಸ್ವಾಗತಾರ್ಹವಾದರೂ, ಯುವ ಸಮುದಾಯವನ್ನ ಕೇಂದ್ರವಾಗಿರಿಸಿಕೊಂಡು ಯೋಜನೆಗಳು ಕಾರ್ಯಗತವಾಗಬೇಕು ಎನ್ನುವುದು ಜಿಲ್ಲೆಯ ಜನರ ಆಸಕ್ತಿ. ನಿವೃತ್ತ ಅಧಿಕಾರಿಯನ್ನು ಹೊಸ ವ್ಯವಸ್ಥೆಯ ಹೆಸರಿನಲ್ಲಿ ಪ್ರತಿಷ್ಠಾಪಿಸುವ ಕುರಿತು ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿರುವ ಜಿಲ್ಲೆಯ ಪ್ರಭಾವಿ ರಾಜಕೀಯ ಮುಖಂಡರುಗಳು, ತಮ್ಮ ಆಕ್ಷೇಪಗಳನ್ನು ಮೀರಿ, ಆರೋಪಗಳಿರುವ ನಿವೃತ್ತ ಅಧಿಕಾರಿಯನ್ನ ಆಯಾಕಟ್ಟಿನ ಜಾಗದಲ್ಲಿ ಕೂರಿಸುವ ಪ್ರಯತ್ನ ನಡೆದಲ್ಲಿ, ಸರ್ಕಾರದ ಮುಖ್ಯಸ್ಥರ ಗಮನಕ್ಕೆ ತರಲಾಗುವುದು ಹಾಗೂ ಅಗತ್ಯ ಬಿದ್ದಲ್ಲಿ ಕಾನೂನು ಹೋರಾಟವನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ.
            












