ನಿವೇಶನರಹಿತರ ಮನೆ ಹಂಚಿಕೆಯಲ್ಲಿ ಅರ್ಹ ಫಲಾನುಭವಿಗಳು ತಪ್ಪಿಹೋಗದಂತೆ ಎಚ್ಚರ ವಹಿಸಿ –ಪ್ರಮೋದ್ ಮಧ್ವರಾಜ್

Spread the love

ನಿವೇಶನರಹಿತರ ಮನೆ ಹಂಚಿಕೆಯಲ್ಲಿ ಅರ್ಹ ಫಲಾನುಭವಿಗಳು ತಪ್ಪಿಹೋಗದಂತೆ ಎಚ್ಚರ ವಹಿಸಿ –ಪ್ರಮೋದ್ ಮಧ್ವರಾಜ್

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿರುವ ನಿವೇಶನರಹಿತರಿಗೆ ಸ್ವಂತ ಸೂರನ್ನು ನಿರ್ಮಿಸಲು ಉದ್ದೇಶಿಸಿರುವ ಯೋಜನೆಯನ್ನು ತಾನು ಸ್ವಾಗತಿಸುವುದಾಗಿ, ನಿಜವಾದ ಆರ್ಹ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗದಂತೆ ಮಾಡಬೇಕು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರು ಸೋಮವಾರ ಉಡುಪಿ ಪ್ರೆಸ್ ಕ್ಲಬ್ಬಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಉಡುಪಿ ನಗರಸಭಾ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿರುವ ನಿವೇಶನ ರಹಿತರಿಗೆ ಸ್ವಂತ ಸೂರನ್ನು ನಿರ್ಮಿಸಲು ಉಡುಪಿ ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗ ತನ್ನ ಪ್ರಯತ್ನದಿಂದ ಸರಳೆಬೆಟ್ಟುವಿನ ಹೆರ್ಗಗ್ರಾಮದಲ್ಲಿ ಹಾಗೂ ಶಿವಳ್ಳಿ ಗ್ರಾಮದ ಸಣ್ಣಕ್ಕಿಬೆಟ್ಟುವಿನಲ್ಲಿ ಸರಕಾರಿ ಜಮೀನನ್ನು ಗುರುತಿಸಿ ತನ್ನ ಅಧ್ಯಕ್ಷೆತೆಯಲ್ಲಿ ನಡೆದ ನಗರ ಆಶ್ರಯ ಸಮಿತಿ ಸಭೆಯಲ್ಲಿ ಆಯ್ಕೆಗೊಂಡ ಎಲ್ಲಾ ಅರ್ಹ 679 ಫಲಾನುಭವಿಗಳಿಗೆ ಮನೆ ನಿವೇಶನಗಳನ್ನು ನೀಡಲು ನಿರ್ಧರಿಸಿ ವಸತಿ ಸಮುಚ್ಚಯ ನಿರ್ಮಿಸಲು ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮ ಬೆಂಗಳೂರು ಇವರಿಗೆ ಮನವಿ ಸಲ್ಲಿಸಲಾಗಿತ್ತು. ಪ್ರಸ್ತುತ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ಮನೆಗಳ ನಿರ್ಮಾಣ ಯೋಜನೆಯನ್ನು ಆರಂಭಿಸಲು ನಿರ್ಧರಿಸಿರುವುದು ಸ್ವಾಗತಾರ್ಹ ಎಂದರು.

ನಿವೇಶನಕ್ಕೆ ಜಮೀನು ಗುರುತಿಸಲು ಕುಮ್ಕಿ ಭೂಮಿಯ ಸಮಸ್ಯೆಯನ್ನು ಪರಿಹರಿಸಲು ಹಾಗೂ ಅರ್ಹ ಫಲಾನುಭವಿಗಳ ಆಯ್ಕೆ ಮಾಡಲು ಒಟ್ಟು ಸುಮಾರು 20 ಕ್ಕೂ ಅಧಿಕ ಅಧಿಕಾರಿಗಳ ಹಾಗೂ ಫಲಾನುಭವಿಗಳ ಸಭೆಗಳನ್ನು ನಡೆಸಿ ಚರ್ಚಿಸಿ ನಿವೇಶನ ರಹಿತರ ಕುಟುಂಬದ ಒಬ್ಬರಿಗೆ ಮಾತ್ರ ನೀವೇಶನ ಕೊಡುವ ಸೂತ್ರದಲ್ಲಿ ಫಲಾನುಭವಿಗಳ ವಿಚಾರಣೆ ಮಾಡಿ ಖಾತ್ರಿಗೊಳಿಸಿ ನಂತರ ಆಯ್ಕೆಗೊಂಡ ಅಂತಿಮ 679 ಫಲಾನುಭವಿಗಳಿಗೆ ಲಾಟರಿ ಎತ್ತುವ ಮೂಲಕ ಬಹಿರಂಗವಾಗಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು.

2018 ರಲ್ಲಿ ಆಯ್ಕೆಗೊಂಡ ಎಲ್ಲಾ 679 ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಿ ಮನೆ ನಿರ್ಮಿಸಲು ಎಲ್ಲಾ ಸಹಕಾರವನ್ನು ನೀಡುವುದು ಉಡುಪಿ ಜಿಲ್ಲಾಧಿಕಾರಿಗಳ ಜವಾಬ್ದಾರಿಯಾಗಿದೆ. ಪ್ರಸ್ತುತ ಫಲಾನುಭವಿಗಳಿಗೆ ಪ.ಜಾತಿ/ಪಂಗಡದವರು ರೂ60000 ಹಾಗೂ ಇತರರು ರೂ90000 ತಮ್ಮ ಪಾಲಿನ ವಂತಿಗೆ ಕಟ್ಟಲು ನಗರಸಭೆ ಆಡಳಿತ ನಿರ್ದೇಶನ ನೀಡಿದ್ದು ಆ ಮೊತ್ತವನ್ನು ಏಕಗಂಟಿನಲ್ಲಿ ಕಟ್ಟಲು ಆಗದ ಕಡುಬಡವರಿಗೆ ಕಂತಿನ ರೂಪದಲ್ಲಿ ಹಣಕಟ್ಟಲು ಅವಕಾಶ ನೀಡಬೇಕಾಗಿ ಅವರು ವಿನಂತಿಸಿದರು.

ಉಡುಪಿ ತಾಲೂಕಿನ ಮಿನಿವಿಧಾನಸೌಧ ನಿರ್ಮಿಸಲು ಸುಮಾರು 10 ಕೋಟಿ ರೂಪಾಯಿ ಅನುದಾನ ತನ್ನ ಅವಧಿಯಲ್ಲಿ ಮಂಜೂರುಗೊಂಡು ಕಾಮಾಗಾರಿ ಪ್ರಾರಂಭಗೊಂಡು ಇದೀಗ ಉದ್ಘಾಟನೆಗೊಳ್ಳುತ್ತಿದೆ ಎಂದರು
ಬ್ರಹ್ಮಾವರ ತಾಲೂಕು ಆಗಲು ಸತತ ಹಾಗೂ ಸಕಲ ಪ್ರಯತ್ನವನ್ನು ತಾನು ಮಾಡಿದ್ದು ಬ್ರಹ್ಮಾವರ ತಾಲೂಕಿನ ಮಿನಿ ವಿಧಾನಸೌಧ ನಿರ್ಮಿಸಲು ಬ್ರಹ್ಮಾವರದ ಹಳೆಯ ಐಬಿಯ ಬಳಿ 3 ಎಕರೆ ಸರಕಾರಿ ಜಮೀನನ್ನು ತನ್ನು ಅವಧಿಯಲ್ಲಿ ಗುರುತಿಸಿ ಕಾಯ್ದಿರಿಸಲಾಗಿತ್ತು ಎಂದರು.

ಸುದ್ದಿಗೋಷ್ಠೀಯಲ್ಲಿ ರಮೇಶ್ ಕಾಂಚನ್, ಸತೀಶ್ ಅಮೀನ್, ಜನಾರ್ದನ ಭಂಡಾರ್ಕರ್ ಉಪಸ್ಥಿತರಿದ್ದರು.


Spread the love