ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಖಚಿತ – ಸಚಿವ ಯು.ಟಿ.ಖಾದರ್
ಮಂಗಳೂರು: ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಪ್ರತಿಯೊಬ್ಬ ನಿಷ್ಠಾವಂತ ಕಾರ್ಯಕರ್ತರಿಗೂ ಒಂದಲ್ಲಾ ಒಂದು ದಿನ ಉತ್ತಮ ಅವಕಾಶ ದೊರೆಯುವುದು ಖಚಿತ. ಹೀಗಾಗಿ ಪ್ರತಿಯೊಬ್ಬರು ಪಕ್ಷದ ಹಿತಕ್ಕಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೊದಲ ಬಾರಿ ಶುಕ್ರವಾರ ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ ಹಾಗೂ ಪಕ್ಷದ ಹಿರಿಯ ನಾಯಕರ ಬೆಂಬಲದಿಂದ ತಾವು ಈ ಹಂತ ತಲುಪಲು ಸಾಧ್ಯವಾಗಿದೆ. ಪಕ್ಷವು ತಾನು ಸಲ್ಲಿಸಿದ ಸೇವೆ ಮತ್ತು ಜನಪರ ಕೆಲಸಗಳನ್ನು ಪರಿಗಣಿಸಿ ಈ ಜವಾಬ್ದಾರಿಯನ್ನು ನೀಡಿದೆ. ಎಂದು ಹೇಳಿದರು.
ಪಕ್ಷದ ಕಾರ್ಯಕರ್ತರೇ ಕಾಂಗ್ರೆಸ್ ಸಂಘಟನೆಯ ಶಕ್ತಿಯಾಗಿದ್ದು, ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಪಕ್ಷದ ತತ್ವ, ಸಿದ್ಧಾಂತಗಳು ಹಾಗೂ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್‌ನ ಹಿರಿಯ ನಾಯಕ, ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಜೂ.21ರಂದು ಅಧಿಕಾರ ಸ್ವೀಕರಿಸಲಿದ್ದು. ಅವರಿಗೆ ಈ ಸ್ಥಾನ ಸಿಕ್ಕಿರುವುದು ಇದು ದ.ಕ ಜಿಲ್ಲೆಗೆ ದೊರೆತಿರುವ ಗೌರವ. ಹೀಗಾಗಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ಜನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಖಾದರ್ ಮನವಿ ಮಾಡಿದರು.
ಈ ಸಂದರ್ಭ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಶಾಸಕ ಐವನ್ ಡಿಸೋಜ, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರುಗಳಾದ ಮಮತಾ ಗಟ್ಟಿ, ಶಾಲೆಟ್ ಪಿಂಟೊ, ವಿಶ್ವಾಸ್ ಕುಮಾರ್ ದಾಸ್, ಲಾವಣ್ಯ ಬಳ್ಳಾಲ್, ಸದಾಶಿವ ಉಳ್ಳಾಲ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಭಾಸ್ಕರ್.ಕೆ, ಬ್ಲಾಕ್ ಅಧ್ಯಕ್ಷರಾದ ಮೋಹನ್ ಕೋಟ್ಯಾನ್, ಪ್ರಕಾಶ್ ಸಾಲ್ಯಾನ್, ಪದ್ಮನಾಭ ಕೋಟ್ಯಾನ್, ತೌಸೀಫ್ ಉಪ್ಪಿನಂಗಡಿ, ಮುಖಂಡರಾದ ಅಬ್ದುಲ್ ರವೂಫ್, ಲಾರೆನ್ಸ್ ಡಿಸೋಜಾ, ಅಪ್ಪಿ.ಎಸ್, ಇಬ್ರಾಹೀಂ ನವಾಝ್, ಅಬ್ಬಾಸ್ ಅಲಿ, ವಸಂತ್ ಬೆರ್ನಾಡ್, ವಿಕಾಸ್ ಶೆಟ್ಟಿ, ದಿನೇಶ್ ಮುಳೂರು, ಡೆನ್ನಿಸ್ ಡಿಸಿಲ್ವ, ಪ್ರೇಮ್ ನಾಥ್ ಬಳ್ಳಾಲ್ ಭಾಗ್, ಚೇತನ್ ಬೆಂಗ್ರೆ, ಜೋಕಿಂ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
ರಝಾಕ್ ಕುಕ್ಕಾಜೆ ನಿರೂಪಿಸಿದರು. ಶುಭೋದಯ ಆಳ್ವ ವಂದಿಸಿದರು.













