ಲಾವಣ್ಯ ಹತ್ಯೆ ಪ್ರಕರಣ; ಆಸ್ಪತ್ರೆಯಿಂದ ಡಿಸ್ಚಾರ್ಜ್ ಬೆನ್ನಲ್ಲೇ ಆರೋಪಿ ಚೇತನ್ ಪೊಲೀಸ್ ವಶಕ್ಕೆ

Spread the love

ಲಾವಣ್ಯ ಹತ್ಯೆ ಪ್ರಕರಣ; ಆಸ್ಪತ್ರೆಯಿಂದ ಡಿಸ್ಚಾರ್ಜ್ ಬೆನ್ನಲ್ಲೇ ಆರೋಪಿ ಚೇತನ್ ಪೊಲೀಸ್ ವಶಕ್ಕೆ

ಮಂಗಳೂರು: ಬಿ.ಸಿ.ರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಜುಲೈ 16ರಂದು ನಡೆದ ಲಾವಣ್ಯ ಹತ್ಯೆ ಪ್ರಕರಣದ ಆರೋಪಿ, ಬೆಳ್ತಂಗಡಿ ಓಡಿಲ್ನಾಳ ನಿವಾಸಿ ಚೇತನ್ ನನ್ನು ಬಂಟ್ವಾಳ ನಗರ ಪೊಲೀಸರು ಸೋಮವಾರ (ಜುಲೈ 27) ಅಧಿಕೃತವಾಗಿ ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತನ ಆರೋಗ್ಯ ಸ್ಥಿರಗೊಂಡ ಹಿನ್ನೆಲೆಯಲ್ಲಿ 11 ದಿನಗಳ ಬಳಿಕ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಕಕ್ಯಪದವು ನಿವಾಸಿ ಲಾವಣ್ಯ ಎಂಬ ಯುವತಿಯನ್ನು ಆರೋಪಿ ಚೇತನ್ ಸಾರ್ವಜನಿಕ ಸ್ಥಳದಲ್ಲೇ ಮಾರಕಾಸ್ತ್ರದಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದ. ಕೃತ್ಯ ಎಸಗಿದ ಬಳಿಕ ಕಾರಿನಲ್ಲಿ ಪರಾರಿಯಾಗಿದ್ದ ಆರೋಪಿಯನ್ನು ಘಟನೆ ನಡೆದ ಮರುದಿನವೇ ಪೊಲೀಸರು ಮಂಗಳೂರಿನಲ್ಲಿ ವಶಕ್ಕೆ ಪಡೆದಿದ್ದರು. ಆದರೆ, ಕೃತ್ಯದ ಬಳಿಕ ಆರೋಪಿ ಇಲಿಪಾಷಾಣ ಸೇವಿಸಿದ್ದ ಎನ್ನಲಾದ ಹಿನ್ನೆಲೆಯಲ್ಲಿ ಆತನನ್ನು ಮೊದಲು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಹಾಗೂ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವೆನ್ಲಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದ ಚೇತನ್ ಚೇತರಿಸಿಕೊಂಡ ನಂತರ ಆತನನ್ನು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಸಂಪೂರ್ಣವಾಗಿ ಗುಣಮುಖನಾದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳ ಎಎಸ್‌ಪಿ ಯಶ್ ಕುಮಾರ್ ಶರ್ಮ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಠಾಣೆಯ ಇನ್ಸ್‌ಪೆಕ್ಟರ್ ಆನಂತಪದ್ಮನಾಭ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ಆರೋಪಿಯನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.


Spread the love
Subscribe
Notify of

0 Comments