ನೇತ್ರಾವತಿ ನದಿಯಲ್ಲಿ ಕೊಲೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Spread the love

ನೇತ್ರಾವತಿ ನದಿಯಲ್ಲಿ ಕೊಲೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಮಂಗಳೂರು : ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುವ ನೆಪದಲ್ಲಿ ಸ್ನೇಹಿತ ಸುರೇಶ್‌ನನ್ನು ಕರೆ ತಂದು ಕತ್ತು ಹಿಸುಕಿ ಕೊಲೆ ಮಾಡಿದವರ ಪೈಕಿ ಇಬ್ಬರ ಕೃತ್ಯ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.

ಬಂಟ್ವಾಳದ ನಾವೂರು ನಿವಾಸಿ ಹರೀಶ್ ಯಾನೆ ಕೋಟಿ ಪೂಜಾರಿ (48) ಹಾಗೂ ಹೇಮಚಂದ್ರ ಯಾನೆ ಗುರು (24) ಶಿಕ್ಷೆಗೊಳಗಾದ ಅಪರಾಧಿಗಳು.

ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ ನೀಲಪ್ಪ ಪೂಜಾರಿ (56), ವಸಂತ (40) ಹಾಗೂ ರಮೇಶ್ (29) ಸಾಕ್ಷಾಧಾರದ ಕೊರತೆಯಿಂದ ಖುಲಾಸೆಗೊಂಡಿದ್ದಾರೆ.

ಕೊಲೆ ಪ್ರಕರಣಕ್ಕೆ ಜೀವಾವಧಿ ಶಿಕ್ಷೆ, ಸಾಕ್ಷ ನಾಶಕ್ಕೆ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಕೊಲೆಯಾದವರ ಪತ್ನಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆಯಲು ಅವಕಾಶವಿದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.
ಪ್ರಕರಣದ ಹಿನ್ನೆಲೆ: ಕೊಲೆಯಾದ ಸುರೇಶ್ ಮತ್ತು ಪ್ರಮುಖ ಆರೋಪಿ ಹರೀಶ್ ವೈಯುಕ್ತಿಕ ದ್ವೇಷ ಹೊಂದಿದ್ದರು. 2015 ಅ.10ರಂದು ನಾವೂರು ಬಳಿ ಕಲ್ಲುರ್ಟಿ ಅಗೇಲು ಕಾರ್ಯಕ್ರಮವಿತ್ತು. ಅದಕ್ಕಾಗಿ ಸ್ನೇಹಿತರೆಲ್ಲರೂ ಜತೆಯಾಗಿ ಹೋಗಿದ್ದರು. ಈ ಸಂದರ್ಭ ಸುರೇಶ್‌ನನ್ನು ನೇತ್ರಾವತಿ ನದಿ ಹರಿಯುವ ಗೋವಿನ ಪಾಡಿ ಎಂಬಲ್ಲಿಗೆ ಕರೆದೊಯ್ದು ಎಲ್ಲರೂ ಜತೆಯಾಗಿ ಸ್ನಾನ ಮಾಡಿದ್ದರು. ಬಳಿಕ ಸುರೇಶ್‌ನನ್ನು ಎಲ್ಲರೂ ಸೇರಿಕೊಂಡು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದರು.

ನಂತರ ಸುರೇಶ್‌ ಪತ್ನಿ ಸುನಂದ ಅವರಿಗೆ ಕರೆ ಮಾಡಿ ಸುರೇಶ್ ನೇತ್ರಾವತಿ ನದಿಗೆ ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ಸುದ್ದಿ ಮುಟ್ಟಿಸಿದ್ದರು. ಬಂಟ್ವಾಳ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಪೊಲೀಸರು ಆರಂಭದಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು.

ಸುನಂದ ಅವರು ಆಗಮಿಸಿ ಮೃತ ದೇಹವನ್ನು ನೋಡಿದಾಗ ಅವರಿಗೆ ಕೊಲೆ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲೂ ಕುತ್ತಿಗೆಯ ಎಲುಬು ತುಂಡಾಗಿರುವುದು ದೃಢಪಟ್ಟಿತ್ತು. ನೀರಿನಲ್ಲಿ ಮುಳುಗಿ ಸತ್ತರೆ ಕುತ್ತಿಗೆ ಎಲುಬು ಮುರಿಯಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದರು. ಪೊಲೀಸರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬಯಲಿಗೆ ಬಂದಿತ್ತು.

23 ಸಾಕ್ಷಿ, 33 ದಾಖಲೆ

ಪ್ರಕರಣಕ್ಕೆ ಸಂಬಂಧಿಸಿ 23 ಸಾಕ್ಷಿ ಹಾಗೂ 33 ದಾಖಲೆಗಳನ್ನು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ವೈದ್ಯರ ಸಾಕ್ಷಿ ಹಾಗೂ ವರದಿ ಶಿಕ್ಷೆಯಾಗಲು ಪ್ರಮುಖ ಸಾಕ್ಷಿಯಾಗಿದೆ.

ನ್ಯಾಯಾಧೀಶರಾದ ನೇರಳೆ ವೀರಭದ್ರಯ್ಯ ಭವಾನಿ ಸಾಕ್ಷಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ. ಬಂಟ್ವಾಳ ಅಂದಿನ ವೃತ್ತ ನಿರೀಕ್ಷಕ ಕೆ.ಯು. ಬೆಳ್ಳಿಯಪ್ಪ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ ವಾದಿಸಿದ್ದರು.


Spread the love