ಪಡಿತರ ಅಕ್ಕಿ ಕಳ್ಳಸಾಗಣೆ: ಐವರ ಬಂಧನ

20

ಪಡಿತರ ಅಕ್ಕಿ ಕಳ್ಳಸಾಗಣೆ: ಐವರ ಬಂಧನ

ಮಂಗಳೂರು: ನಗರದ ವ್ಯಾಪ್ತಿಯಲ್ಲಿ ಪಡಿತರ ಚೀಟಿದಾರರಿಗೆ ವಿತರಿಸಬೇಕಾಗಿದ್ದ ಅಕ್ಕಿಯನ್ನು ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣವೊಂದನ್ನು ಶುಕ್ರವಾರ ರಾತ್ರಿ ಸಾರ್ವಜನಿಕರೇ ಪತ್ತೆ ಮಾಡಿದ್ದು, ನ್ಯಾಯಬೆಲೆ ಅಂಗಡಿ ಗುತ್ತಿಗೆದಾರ ಸೇರಿದಂತೆ ಐವರನ್ನು ಬಂಧಿಸಲಾಗಿದೆ.

ನ್ಯಾಯಬೆಲೆ ಅಂಗಡಿ ಗುತ್ತಿಗೆದಾರ ಪೌಲ್‌ ಮೆಂಡೋನ್ಸಾ, ಲಾರಿಯಲ್ಲಿದ್ದ ಕಾರ್ಮಿಕರಾದ ಶಿಬುದತ್ತ ಗುಡಿಯಾ, ಕಿರಣ ಗುಡಿಯಾ, ಬೀಮಲ್‌ ಹಜ್ದಾ ಮತ್ತು ರೋಹಿತ್‌ಕುಮಾರ್‌ ಬಂಧಿತರು. ಲಾರಿ ಚಾಲಕ ಪರಾರಿಯಾಗಿದ್ದಾನೆ. ಆರೋಪಿಗಳ ವಿರುದ್ಧ ಕಂಕನಾಡಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಲಿಸಲಾಗಿದೆ. 65 ಕ್ವಿಂಟಲ್‌ ಪಡಿತರ ಅಕ್ಕಿ, 10 ಕ್ವಿಂಟಲ್‌ ಕೋಳಿ ಆಹಾರದ ಅಕ್ಕಿ, ಎಲೆಕ್ಟ್ರಾನಿಕ್‌ ತೂಕದ ಯಂತ್ರ ಹಾಗೂ ಲಾರಿ ಸೇರಿದಂತೆ ₹ 12.20 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಲಕ್ಷ್ಮೀಗಣೇಶ್‌ ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ಲಾರಿ ಚಾಲಕ ಮತ್ತು ಕಾರ್ಮಿಕರು ಪಡಿತರ ಅಕ್ಕಿಯನ್ನು ತುಂಬಿಕೊಂಡು ಮೂಡುಬಿದಿರೆ ಕಡೆಗೆ ಹೊರಟಿದ್ದರು. ಆಗ ಸಾರ್ವಜನಿಕರು ಲಾರಿ ತಡೆದು ನಿಲ್ಲಿಸಿದ್ದರು. ಅಷ್ಟರಲ್ಲಿ ಚಾಲಕ ಪರಾರಿಯಾಗಿದ್ದ. ಪೊಲೀಸರು ಸ್ಥಳಕ್ಕೆ ಬಂದು ಲಾರಿ ಮತ್ತು ಕಾರ್ಮಿಕರನ್ನು ವಶಕ್ಕೆ ಪಡೆದರು. ಆಹಾರ ನಿರೀಕ್ಷಕರು ಸ್ಥಳಕ್ಕೆ ಬಂದ ಬಳಿಕ ಮಹಜರು ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು. ಶನಿವಾರ ಬೆಳಿಗ್ಗೆ ನ್ಯಾಯಬೆಲೆ ಅಂಗಡಿ ಮಾಲೀಕನನ್ನು ಬಂಧಿಸಲಾಗಿದೆ.

Leave a Reply

Please enter your comment!
Please enter your name here