ಪಡುಬಿದ್ರಿ: ನಾಪತ್ತೆಯಾದ ವ್ಯಕ್ತಿ ಅಸ್ಥಪಂಜರ ಪತ್ತೆ; ಕೊಲೆ ಶಂಕೆ

Spread the love

ಪಡುಬಿದ್ರಿ: ಇಲ್ಲಿನ ಪಾದೆಬೆಟ್ಟುವಿನ ಸಮೀಪದ ಬಿಕ್ರಿಗುತ್ತು ಎಂಬ ಪ್ರದೇಶದಲ್ಲಿ ಕೊಳೆತು ಛಿದ್ರಗೊಂಡಿರುವ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿರುವ ಬಗ್ಗೆ ಶುಕ್ರವಾರ ಬೆಳಿಗ್ಗೆ ತಿಳಿದು ಬಂದಿದ್ದು ಸ್ಥಳೀಯರಲ್ಲಿ ತೀವ್ರ ಕುತೂಹಲವೆಬ್ಬಿಸಿದೆ.
ಹೆಚ್ಚೇನೂ ನಿರ್ಜನವಲ್ಲದ ಪ್ರದೇಶದಲ್ಲಿ ಸುಮಾರು 20 ಮೀಟರ್ ಸುತ್ತ ಛಿದ್ರಗೊಂಡ ದೇಹದ ಭಾಗಗಳು ಕೊಳೆತು ಹೋದ ಸ್ಥಿತಿಯಯಲ್ಲಿ ಕಂಡು ಬಂದಿದೆ. ಪ್ಯಾಂಟು, ಶರ್ಟು, ಚಪ್ಪಲಿ ಆಧಾರದಲ್ಲಿ ಶವವನ್ನು ಯುಪಿಸಿಎಲ್ ನಲ್ಲಿ ಖಾಸಗಿ ಸಂಸ್ಥೆಯ ಗುತ್ತಿಗೆದಾರ ಕಾರ್ಮಿಕನಾಗಿ ದುಡಿಯುತ್ತಿದ್ದ ಕಲಬುರ್ಗಿ ಜೇವರ್ಗಿಯ ಕಣಮೇಶ್ವರ ವಾಸಿ ರುಕೂರ್ಮ ಪಟೇಲ್ ಎಂಬವರ ಮಗ ರಾಜಾ ಪಟೇಲ್ ನದ್ದು ಎಂದು ಗುರುತಿಸಿದ್ದು ಸಂಬಂಧಿಕರಿಗೆ ವಿಷಯ ಮುಟ್ಟಿಸಲಾಗಿದೆ. ಶವ ಸಂಪೂರ್ಣ ಕೊಳೆತು ಎಲುಬುಗಳಷ್ಟೇ ಕಾಣಸಿಕ್ಕಿದ್ದು ಕಾಡು ಪ್ರಾಣಿಗಳು ಎಳೆದಾಡಿದ ಸ್ಥಿತಿಯಲ್ಲಿದೆ. ಶವದ ರುಂಡಕ್ಕೆ ಪ್ಲಾಸ್ಟಿಕ್ ಸುತ್ತಲಾಗಿದ್ದು ಕುತ್ತಿಗೆಯಲ್ಲಿ ಹಗ್ಗ ಸಿಕ್ಕಿಸಿಕೊಂಡ ಸ್ಥಿತಿಯಲ್ಲಿತ್ತು.
ಶುಕ್ರವಾರ ಬೆಳಿಗ್ಗೆ ಪಾದೆಬೆಟ್ಟುವಿನ ಬಿಕ್ರಿಗುತ್ತು ಹಾಡಿಯಲ್ಲಿ ತೀವ್ರ ದುರ್ವಾಸನೆ ಬರುತ್ತಿದ್ದ ಹಿನ್ನಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಎಪ್ರಿಲ್ 17 ರಂದು ರಾಜಾ ಪಾಟೇಲ್ ಕಾಣೆಯಾಗಿದ್ದ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಶವ ಸಿಕ್ಕಿರುವ ಬೆನ್ನಲ್ಲೇ ಕೊಲೆಯ ಶಂಕೆಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಪೊಲೀಸರು ವಿಧಿವಿಜ್ಞಾನ ತಜ್ಞರನ್ನು ಸ್ಥಳಕ್ಕೆ ದೌಡಾಯಿಸಿ ಕೂಲಂಕುಷ ತಪಾಸಣೆ ನಡೆಸಿದ್ದಾರೆ.
ಯುಪಿಸಿಎಲ್ ನ ಸೀಮರ್ ಎಂಬ ಮೆಕ್ಯಾನಿಕಲ್ ಮತ್ತು ಲೇಬರ್ ಗುತ್ತಿಗೆ ಕಂಪನಿಯ ಕಾರ್ಮಿಕನಾಗಿ 2 ವರ್ಷದಿಂದ ದುಡಿಯುತ್ತಿದ್ದ ರಾಜಾ ಪಟೇಲ್ ತನ್ನ ಚಿಕ್ಕಮ್ಮನ ಮಗಳ ಮದುವೆಗಾಗಿ ಎಪ್ರಿಲ್ 17 ರಂದು ರಜೆ ಹಾಕಿ ಲಿಂಗಪ್ಪಯ್ಯ ಕಾಡಿನ ತನ್ನ ಸಂಬಂಧಿಕರ ಮನೆಗೆ ತೆರಳಿದ್ದನು. ಅಲ್ಲಿಂದ ಊರಿಗೆ ಹೋಗುವುದಾಗಿ ಹೇಳಿ ಹೋಗಿದ್ದ ಆತ ಊರಿಗೂ ಹೋಗದೇ ಮರಳಿ ಪಡುಬಿದ್ರಿಗೂ ಬಾರದೆ ಇದ್ದ ಕಾರಣ ಮನೆಯವರು ಪಡುಬಿದ್ರಿ ಠಾಣೆಗೆ ದೂರು ಸಲ್ಲಿಸಿದ್ದರು.ಪ್ರಕರಣದ ತನಿಖೆ ನಡೆಸುತ್ತಿರುವ ಕಾಪು ನಿರೀಕ್ಷಕ ಸುನೀಲ್ ನಾಯಕ್ 2-3 ದಿನದೊಳಗೆ ಆರೋಪಿಯನ್ನು ಬಂಧಿಸಿ ಪ್ರಕರಣ ಭೇದಿಸುವುದಾಗಿ ಖಚಿತವಾಗಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಕಾರ್ಕಳ ಡಿವೈಎಸ್ಪಿ ವಿನಯ ನಾಯಕ್, ಪಡುಬಿದ್ರಿ ಠಾಣಾಧಿಕಾರಿ ಅಜ್ಮತ್ ಅಲಿ, ಮಣಿಪಾಲ ಫೊರೆನ್ಸಿಕ್ ತಜ್ಞ ಡಾ. ಅಶ್ವಿನ್ ಕುಮಾರ್ ಪರಿಶೀಲನೆ ನಡೆಸಿದ್ದಾರೆ.


Spread the love