ಪಲಿಮಾರು ಸ್ವಾಮೀಜಿ ಉತ್ತರಾಧಿಕಾರಿಯಾಗಿ ಶೈಲೇಶ್ ಉಪಾಧ್ಯಾಯ

Spread the love

ಪಲಿಮಾರು ಸ್ವಾಮೀಜಿ ಉತ್ತರಾಧಿಕಾರಿಯಾಗಿ ಶೈಲೇಶ್ ಉಪಾಧ್ಯಾಯ

ಉಡುಪಿ: ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಶಿಷ್ಯ ಸ್ವೀಕಾರಕ್ಕೆ ನಿರ್ಧರಿಸಿದ್ದು, ಪಲಿಮಾರು ಮೂಲ ಮಠದಲ್ಲಿರುವ ಯೋಗ ದೀಪಿಕಾ ಗುರುಕುಲದ ವಿದ್ಯಾರ್ಥಿ ಶೈಲೇಶ್ ಉಪಾಧ್ಯಾಯ ಅವರು ಮಠದ ಉತ್ತರಾಧಿಕಾರಿಯಾಗಿ ನೇಮಕವಾಗಲಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.

ಈ ಕುರಿತು ಬುಧವಾರ ಶ್ರೀಕೃಷ್ಣ ಮಠದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಲಿಮಾರು ಸ್ವಾಮೀಜಿ ನಮಗೆ ಗುರುಗಳು ನೀಡಿದ ಭಾಗ್ಯ ಎರಡು ಒಂದು ಸನ್ಯಾಸ ಮತ್ತೊಂದು ಶ್ರೀ ಕೃಷ್ಣ ದೇವರ,ಶ್ರೀ ರಾಮ ದೇವರ ಪೂಜೆಯೊಂದಿಗೆ ಪಾಠಪ್ರವಚನ.ಇದು ನಿರಂತರವಾಗಿ ಬೆಳೆಯ ಬೇಕು ಮತ್ತು ಬೆಳಸಬೇಕು.ಸನ್ಯಾಸ ಎಂದರೆ ಕೇವಲ ಕಾಷಾಯ ವಸ್ತ್ರ ಬದಲಾವಣೆಯಲ್ಲ ಮಾನಸಿಕವಾದ ಪಕ್ವಾತೆಯೊಂದಿಗೆ ಪೂರ್ಣ ವಿರಕ್ತಿ ಭಾವ. ಅದು ಇದ್ದಲ್ಲಿ ಮಾತ್ರ ಸನ್ಯಾಸಕ್ಕೆ ಅರ್ಥವಿದೆ.ಇಂತಹ ಸನ್ಯಾಸದಿಂದಲೇ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯ.
ಈ ನಿಟ್ಟಿನಲ್ಲಿ ನಮ್ಮ ಗುರುಗಳು ಹಾಗೂ ಪೂರ್ವಾಚಾರ್ಯರು ನೀಡಿದ ಈ ಜ್ಞಾನ ಸಂತತಿಯನ್ನು ಬೆಳೆಸುವ ದೃಷ್ಟಿಯಿಂದ ಯೋಗ್ಯ ವಟುವಿನ ನಿರೀಕ್ಷೆಯಲ್ಲಿದ್ದಾಗ ಶ್ರೀ ರಾಮ ಕೃಷ್ಣ ದೇವರ,ಅನಂತಾಸನ ದೇವರ ಅನುಗ್ರಹದಿಂದ ಶ್ರೀ ಮುಖ್ಯಪ್ರಾಣ ದೇವರ ಶ್ರೀ ಮಧ್ವಾಚಾರ್ಯರ ದಯೆಯಿಂದ ಪಲಿಮಾರಿನ ನಮ್ಮ ಯೋಗದೀಪಿಕಾ ವಿದ್ಯಾಪೀಠದಲ್ಲಿ ಅಧ್ಯಯನ ಮಾಡುತ್ತಿರುವ ವಟು ದೊರಕಿದ್ದಾನೆ. ಮೊದಲಿನಿಂದಲೂ ಆಧ್ಯಾತ್ಮಿಕ ಸಾಧನೆಯಲ್ಲಿ ನಿಷ್ಠೆ ಶುದ್ಧ ಸದಾಚಾರದಿಂದ ಕೂಡಿದ ಹಾಗೂ ವಿಶೇಷವಾಗಿ ಸಹಜವಾಗಿ ಸನ್ಯಾಸದ ಬಗ್ಗೆ ಆಸಕ್ತಿಯಿದ್ದ ಶೈಲೇಶ ಉಪಾಧ್ಯಾಯ ಎಂಬ ವಿದ್ಯಾರ್ಥಿಯನ್ನು ಗುರುತಿಸಿ ಅವನ ತಂದೆ ತಾಯಿಗಳಾದ ಕೊಡವೂರು ಕಂಬ್ಲಕಟ್ಟ ನಿವಾಸಿಗಳಾದ ವೇದಮೂರ್ತಿ ಶ್ರೀ ಸುರೇಂದ್ರ ಉಪಾಧ್ಯಾಯ ಹಾಗೂ ಲಕ್ಷ್ಮೀ ಸುರೇಂದ್ರ ಉಪಾಧ್ಯಾಯ ದಂಪತಿಗಳನ್ನು ಸಂಪರ್ಕಿಸಿ ,ಸಿದ್ಧ ಜ್ಯೋತಿಷಿಗಳ ಬಳಿ ವಟುವಿನ ಜಾತಕದ ಚಿಂತನೆಯನ್ನು ನಡೆಸಿ ಅವರ ಕುಟುಂಬದ ಸದಸ್ಯರ ಪೂರ್ಣ ಸಮ್ಮತಿಯೊಂದಿಗೆ ಶೈಲೇಶ ಉಪಾಧ್ಯಾಯ ಎಂಬ ವಟುವನ್ನು ನಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಲು ನಿರ್ಣಯಿಸಿದ್ದೇವೆ ಎಂದರು.

ಶಿಬರೂರಿನಲ್ಲಿ 1956ರಲ್ಲಿ ಜನಿಸಿದ ಪಲಿಮಾರು ಸ್ವಾಮೀಜಿಯವರಿಗೆ ಪ್ರಸಕ್ತ 63 ವರ್ಷವಾಗಿದ್ದು, ತಮ್ಮ ಎರಡನೇ ಪರ್ಯಾಯ ಅವಧಿಯಲ್ಲಿ ಶಿಷ್ಯ ಸ್ವೀಕಾರ ಮಾಡುತ್ತಿದ್ದಾರೆ. 1974ರಲ್ಲಿ ವಿದ್ಯಾಮಾನ್ಯ ತೀರ್ಥರ ಉತ್ತರಾಧಿಕಾರಿಯಾಗಿ ಸನ್ಯಾಸ ಸ್ವೀಕರಿಸಿದ ಶ್ರೀ ವಿದ್ಯಾಧೀಶ ಸ್ವಾಮೀಜಿಯವರು ಅನೇಕ ಜನಪರ ಯೋಜನೆಗಳ ಮೂಲಕ ಹೆಸರು ಮಾಡಿದ್ದಾರೆ.

ಕೊಡವೂರು ಕಂಬಳಕಟ್ಟ ಮೂಲದ ವಿದ್ಯಾರ್ಥಿ ಶೈಲೇಶ್ ಉಪಾಧ್ಯಾಯ ಅವರು ಪಲಿಮಾರು ಯೋಗ ದೀಪಿಕಾ ಗುರುಕುಲದಲ್ಲಿ ನಾಲ್ಕನೇ ವರ್ಷದ ವೇದಾಧ್ಯಯನ ಮಾಡುತ್ತಿದ್ದು, ಸನ್ಯಾಸ ಸ್ವೀಕಾರದ ಬಳಿಕ ಪಲಿಮಾರು ಶ್ರೀಗಳಲ್ಲಿ ಉನ್ನತ ಅಧ್ಯಯನ ಮುಂದುವರಿಸಲಿದ್ದಾರೆ.


Spread the love