ಪಿಣರಾಯಿ ಭೇಟಿ : ಸೂಕ್ತ ಭದ್ರತೆ ಕೋರಿ ಅಭಿಮತ ಸಂಘಟನೆಯಿಂದ ಮನವಿ

Spread the love

ಪಿಣರಾಯಿ ಭೇಟಿ : ಸೂಕ್ತ ಭದ್ರತೆ ಕೋರಿ ಅಭಿಮತ ಸಂಘಟನೆಯಿಂದ ಮನವಿ

ಮಂಗಳೂರು: ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಮಂಗಳೂರಿಗೆ ಆಗಮಿಸುವುದನ್ನು ವಿರೋಧಿಸಿ ಬಂದ್ ಮತ್ತಿತತರ ಕಿಡಿಗೇಡಿ ಕೃತ್ಯ ನಡೆಸುತ್ತಿರುವ ಸಂಘಪರಿವಾರದ ಸಹ ಸಂಘಟನೆಗಳ ವಿರುದ್ಧ ಕ್ರಮ ಜರುಗಿಸಲು ಕೋರಿ ಅಭಿಮತ ಸಂಘಟನೆ ನಗರ ಪೋಲಿಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು,

ಮಂಗಳೂರಿನಲ್ಲಿ ಫೆಬ್ರವರಿ 25 ರಂದು ಸಿಪಿಐಎಂ ಪಕ್ಷದ ವತಿಯಿಂದ ಐಕ್ಯತಾ ರ್ಯಾಲಿಯನ್ನು ಆಯೋಜಿಸಲಾಗಿದೆ. ಈ ಐಕ್ಯತಾ ರ್ಯಾಲಿ ಸಿಪಿಐಎಂ ಪಕ್ಷದಿಂದ ನಡೆಯುತ್ತದೆಯಾದರೂ ಇದು ಇಡೀ ರಾಜ್ಯದ ಬುದ್ದಿಜೀವಿ ವಲಯ, ಮಾನವ ಹಕ್ಕುಗಳ ಪರ ಇರುವ ಕಾರ್ಯಕರ್ತರ, ಜನಪರ ಕಾರ್ಯಕರ್ತರ, ಜೀವಪ್ರೇಮಿಗಳ ರ್ಯಾಲಿಯಾಗಿದೆ. ಹಿಂದುತ್ವವಾದಿ ತೀವ್ರಗಾಮಿಗಳು ಕರಾವಳಿಯಲ್ಲಿ ನಡೆಸುತ್ತಿರುವ ಭಯೋತ್ಪಾಧನೆಯನ್ನು ವಿರೋಧಿಸಿ ಈ ರ್ಯಾಲಿಯನ್ನು ನಡೆಸಲಾಗುತ್ತಿದೆ. ಈ ರ್ಯಾಲಿಯನ್ನು ಕೇರಳದ ಮುಖ್ಯಮಂತ್ರಿಯಾಗಿರುವ ಪಿನರಾಯಿ ವಿಜಯನ್ ಉದ್ಘಾಟಣೆ ಮಾಡಲಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಸರಕಾರ ಕೇರಳದಲ್ಲಿ ಸಂಘಪರಿವಾರದ ಭಯೋತ್ಪಾಧನೆಗೆ ಅವಕಾಶ ಕೊಡುತ್ತಿಲ್ಲ. ಸಣ್ಣ ಕೋಮುಗಲಭೆಯಾದರೂ ಕೇರಳ ಸರಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತದೆ. ಇದು ಅಲ್ಲಿನ ವಿಛ್ಛಿದ್ರಕಾರಿ ಶಕ್ತಿಯಾಗಿರುವ ಸಂಘಪರಿವಾರಕ್ಕೆ ನುಂಗಲಾರದ ತುತ್ತಾಗಿದೆ. ಈ ಕಾರಣಕ್ಕಾಗಿ ಐಕ್ಯತಾ ರ್ಯಾಲಿಗೆ ಆಗಮಿಸುತ್ತಿರುವ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಗೆ ವಿರೋಧ ವ್ಯಕ್ತಪಡಿಸಿರುವ ಸಂಘಪರಿವಾರ ದಕ್ಷಿಣಕನ್ನಡ ಜಿಲ್ಲಾ ಬಂದ್ ಗೆ ಕರೆ ನೀಡಿದೆ.

ಸಂಘಪರಿವಾರ ಅಧಿಕೃತವಾಗಿ ಸಂಘನಿಕೇತನದಲ್ಲಿ ಸಭೆ ನಡೆಸಿ , ಮಾಧ್ಯಮಗಳ ಮೂಲಕ ಬಂದ್ ಕರೆ ನೀಡಿದೆ. ರಾಜ್ಯದ ಜನರ ಜನಜೀವನವನ್ನು ಅಸ್ತವ್ಯಸ್ಥಗೊಳಿಸುವುದು ಭಾರತ ದಂಢಸಂಹಿತೆ ಪ್ರಕಾರ ಅಪರಾಧವಾಗುತ್ತದೆ. ಇದಲ್ಲದೆ ಬಂದ್ ನಲ್ಲಿ ಹಿಂಸಾಚಾರ ನಡೆಸಲಾಗುತ್ತದೆ ಎಂದು ಫುರ್ವಭಾವಿ ಸೂಚನೆಗಳನ್ನೂ ಕೂಡಾ ಸಂಘಪರಿವಾರ ನೀಡಿದೆ. ಮಂಗಳೂರಿನ ತೊಕ್ಕೊಟ್ಟು ಎಂಬಲ್ಲಿರುವ ಸಿಪಿಐಎಂ ಕಚೇರಿಗೆ ನಿನ್ನೆ ತಡೆ ರಾತ್ರಿ ಸಂಘಪರಿವಾರಿಗಳು ಬೆಂಕಿ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಪಿನರಾಯಿ ವಿಜಯನ್ ಸ್ವಾಗತಕ್ಕೆ ಹಾಕಲಾದ ಬ್ಯಾನರ್, ಫ್ಲೆಕ್ಸ್, ಕಟೌಟ್ ಗಳು, ಕಮಾನುಗಳನ್ನು ಅಪಹರಣ ಮಾಡಲಾಗಿದೆ. ಇವೆಲ್ಲವೂ ಕೂಡಾ ಫೆಬ್ರವರಿ 23 ರಂದು ಸಂಘಪರಿವಾರ ಹಿಂಸಾಚಾರ ನಡೆಸಲು ನಡೆಸಿರುವ ಸಿದ್ದತೆ ಎಂದು ನಾವು ಅಂದುಕೊಂಡಿದ್ದೇವೆ.

ಸಂಘಪರಿವಾರ ಮಂಗಳೂರಿನಲ್ಲಿ ನಡೆಸಿರುವ ಭಯೋತ್ಪಾಧಕ ಕೃತ್ಯಗಳು ಒಂದೆರಡಲ್ಲ. ಹಿಂದುಳಿದ ವರ್ಗಗಳ ಅಮಾಯಕ ಯುವಕರಿಗೆ ಧರ್ಮದ ಅಫೀಮು ತುಂಬಿ ಕೋಮುಗಲಭೆಗಳನ್ನು, ನೈತಿಕ ಪೊಲೀಸ್ ಗಿರಿಗಳನ್ನು ಸಂಘಪರಿವಾರ ಮಾಡುತ್ತಲೇ ಬಂದಿದೆ. ಆದರೂ ಪೊಲೀಸ್ ಇಲಾಖೆ ಸಂಘಪರಿವಾರವನ್ನಾಗಲೀ, ಅದರ ಸಹ ಸಂಘಟನೆಗಳಾದ ಭಜರಂಗದಳ, ವಿಶ್ವಹಿಂದೂಪರಿಷತ್ತನಾಗಲೀ, ಹಿಂದೂ ಜಾಗರಣಾ ವೇದಿಕೆಯನ್ನಾಗಲೀ ನಿಷೇದಿಸುವ ಗೋಜಿಗೆ ಹೋಗಿಲ್ಲ. ಇಂದು ಹತ್ತಾರು ಹಿಂದುಳಿದ ವರ್ಗದ ಹಿಂದುತ್ವವಾದಿ ಯುವಕರೇ ಕೋಮುಗಲಭೆಗಳಿಗೆ ಬಲಿಯಾಗಿದ್ದಾರೆ.ಹಿಂದುತ್ವವಾದಿಗಳ ದಾಳಿಯಿಂದ ನೂರಾರು ಮುಸ್ಲಿಂ ಕುಟುಂಬಗಳು ಬೀದಿಗೆ ಬಿದ್ದಿದೆ. ಪೊಲೀಸ್ ವೈಫಲ್ಯದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಪರಿಸ್ಥಿತಿ ಮುಂದುವರೆಯುತ್ತಲೇ ಇದೆ. ಈ ಕಾರಣಕ್ಕಾಗಿಯೇ ಜನರ ಮಧ್ಯೆ ಸಂಬಂಧಗಳನ್ನು ಬೆಸೆಯಲು ಐಕ್ಯತಾ ರ್ಯಾಲಿಯನ್ನು ಹಮ್ಮಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.

ಸಂಘಪರಿವಾರ ತನ್ನ ದುಷ್ಕೃತ್ಯಗಳಿಗೆ ಬಳಕೆ ಮಾಡುತ್ತಿರುವ ಹಿಂದುಳಿದ ವರ್ಗಗಳ ಮಧ್ಯೆ ಜಾಗೃತಿ ಮೂಡಿಸುವಲ್ಲಿ ಐಕ್ಯತಾ ರ್ಯಾಲಿ ಸಫಲವಾಗುತ್ತದೆ ಎಂದು ತಿಳಿಯುತ್ತಲೇ ಸಂಘಪರಿವಾರ ಕಿಡಿಗೇಡಿ ಕೃತ್ಯಗಳನ್ನು ನಡೆಸಲು ಪ್ರಾರಂಭಿಸಿದೆ. ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಈಳವ/ಬಿಲ್ಲವ ಸಮುದಾಯಕ್ಕೆ ಸೇರಿದವರಾಗಿದ್ದು, ಕರಾವಳಿಯಯ ನೆಲದ ಜೊತೆ ಸಂಬಂಧ ಇದೆ. ಈ ನಿಟ್ಟಿನಲ್ಲಿ ಕರ್ನಾಟಕದ ಕರಾವಳಿಯಲ್ಲಿ ಶಾಂತಿ ಸೌಹಾರ್ಧತೆ ಏರ್ಪಡಲು ಪಿನರಾಯಿ ವಿಜಯನ್ ಮಾತುಗಳು ಇಂದಿನ ತುರ್ತು ಅಗತ್ಯವಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿಯ ಆಗಮನದ ದಿನ ಬಂದ್ ಆಚರಿಸುವುದು ಅಪ್ರಜಾಪ್ರಭುತ್ವ ನೀತಿಯಾಹಿದೆ. ಇಂತಹ ಸಂವಿದಾನ ಬಾಹಿರ ಕೃತ್ಯಗಳಿಗೆ ಪೊಲೀಸ್ ಇಲಾಖೆ ಅವಕಾಶ ನೀಡಬಾರದು. ಬಂದ್ ಘೋಷಣೆ ಮಾಡಿರುವ ವ್ಯಕ್ತಿ/ ಸಂಘಟನೆಯ ಮುಖಂಡರು ಮುಂಜಾಗರೂಕತಾ ಕ್ರಮವಾಗಿ ತಕ್ಷಣ ಬಂಧನ ಮಾಡಬೇಕು ಮತ್ತು ಕಿಡಿಗೇಡಿ ಕೃತ್ಯಗಳಲಲ್ಲಿ ಭಾಗಿಯಾಗಿರುವವರನ್ನೂ ಬಂಧಿಸಬೇಕು ಎಂದು ಆಗ್ರಹಿಸಿದರು.

ಫೆಬ್ರವರಿ 23 ರಂದು ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಮಂಗಳೂರು ಬೇಟಿ ಸಂಧರ್ಭ ಯಾವುದೇ ಬಂದ್ ಇರೋದಿಲ್ಲ ಮತ್ತು ಜನಜೀವನದ ಮೇಲೆ ದುರ್ಷರ್ಮಿಗಳು ಯಾವುದೇ ಪರಿಣಾಮ ಬೀರಲು ಸಾಧ್ಯವಾಗುವುದಿಲ್ಲ ಎಂದು ಪೊಲೀಸ್ ಇಲಾಖೆ ಜನರಿಗೆ ಖಾತ್ರಿಪಡಿಸಬೇಕು ಎಂದು ಒತ್ತಾಯಿಸಿದರು.

ಅನಂತ್ ನಾಯಕ್, ಶಿವಮಾಣಿ, ಶ್ರೀನಿವಾಸ್ ಕರಿಯಪ್ಪ, ಕಾವ್ಯ ಅಚ್ಚುತ್, ಮಂಜುನಾಥ್ ಸಿದ್ದಾಪುರ ಮತ್ತು ಇತರರು ಉಪಸ್ಥಿತರಿದ್ದರು.


Spread the love