ಪೇಜಾವರ ಶ್ರೀಗಳಿಗೆ ಅನಾರೋಗ್ಯ; ಶನಿವಾರ ಉಡುಪಿಗೆ ಮುಖ್ಯಮಂತ್ರಿ ಯಡ್ಯೂರಪ್ಪ

Spread the love

ಪೇಜಾವರ ಶ್ರೀಗಳಿಗೆ ಅನಾರೋಗ್ಯ; ಶನಿವಾರ ಉಡುಪಿಗೆ ಮುಖ್ಯಮಂತ್ರಿ ಯಡ್ಯೂರಪ್ಪ

ಉಡುಪಿ : ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ಸೇರಿರುವ ಉಡುಪಿ ಪೇಜಾವರ ಮಠದ ಮಠಾಧೀಶ ವಿಶ್ವೇಶತೀರ್ಥ ಶ್ರೀ ಆರೋಗ್ಯದ ಸ್ಥಿತಿ ಗಂಭೀರಗೊಂಡಿದ್ದು, ಅವರ ಶೀಘ್ರಗುಣಮುಖರಾಗಲಿ ಎಂದು ಎಲ್ಲೆಡೆ ಹಾರೈಕೆ ಕೇಳಿ ಬರುತ್ತಿದೆ

ಕಫ ಹಾಗೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಅವರು, ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯದ ಕುರಿತು ಮೋದಿ ಕೂಡ ಕಳವಳ ವ್ಯಕ್ತಪಡಿಸಿದ್ದು, ಈ ಕುರಿತು ರಾಜ್ಯದಿಂದ ಮಾಹಿತಿ ಪಡೆದಿದ್ದಾರೆ. ಶ್ರೀಗಳ ಆಪ್ತಕಾರ್ಯದರ್ಶಿ ಟಿಪಿ ಅನಂತ್ಗೆ ಕರೆ ಮಾಡಿ ಅವರ ಆರೋಗ್ಯ ವಿಚಾರಿಸಿದ್ದಾರೆ.

ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಆರ್ ಎಸ್ ಎಸ್ ಮುಖಂಡ ಪ್ರಭಾಕರ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ರಘುಪತಿ ಭಟ್, ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿ, ಪುತ್ತಿಗೆ ಮಠದ ಯತಿ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಎಸ್ಪಿನಿಶಾ ಜೇಮ್ಸ್, ಸಚಿವ ಈಶ್ವರಪ್ಪ ಹಾಗೂ ಇತರ ಹಲವಾರು ಮುಖಂಡರು ಭೇಟಿ ಮಾಡಿ ಪೇಜಾವರ ಸ್ವಾಮೀಜಿಗಳ ಆರೋಗ್ಯ ವಿಚಾರಿಸಿದ್ದಾರೆ.

ಇದಲ್ಲದೆ ಶನಿವಾರ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪ ಅವರು ಶ್ರೀಗಳ ಆರೋಗ್ಯದ ಕುರಿತು ಮಾಹಿತಿ ಪಡೆಯಲಿದ್ದಾರೆ. ಶನಿವಾರ ಮಧ್ಯಾಹ್ನ 1:15 ಕ್ಕೆ ಮಂಗಳೂರು ಬಜ್ಪೆ ವಿಮಾನ ನಿಲ್ದಾಣದ ಮೂಲಕ ಹೆಲಿಕಾಪ್ಟರ್ ಉಡುಪಿಗೆ ಪ್ರಯಾಣಿಸಲಿರುವ ಮುಖ್ಯಮಂತ್ರಿ ಬಿ ಎಸ್ ವೈ ಅವರು 2 ಗಂಟೆ ಸುಮಾರಿಗೆ ಆದಿ ಉಡುಪಿ ಹೆಲಿಪ್ಯಾಡ್ ಗೆ ಆಗಮಿಸಿ ಆದಿ ಉಡುಪಿಯಿಂದ ರಸ್ತೆ ಮೂಲಕ ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ.


Spread the love