ಪೇಜಾವರ ಸ್ವಾಮೀಜಿಯ ಆರೋಗ್ಯ ವಿಚಾರಿಸಿದ ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ

Spread the love

ಪೇಜಾವರ ಸ್ವಾಮೀಜಿಯ ಆರೋಗ್ಯ ವಿಚಾರಿಸಿದ ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ

ಉಡುಪಿ: ಶ್ವಾಸಕೋಶ ತೊಂದರೆ, ನ್ಯುಮೋನಿಯಾ ಸಮಸ್ಯೆಯಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುವ ಉಡುಪಿ ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಲು ಅವರ ಶಿಷ್ಯೆ, ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿದರು.

ರೈಲಿನ ಮೂಲಕ ಉಡುಪಿಗೆ ಆಗಮಿಸಿದ ಅವರು ಮಣಿಪಾಲ ಆಸ್ಪತ್ರೆಗೆ ಝಡ್ಪ್ಲಸ್ ಭದ್ರತೆಯಲ್ಲಿ ಆಗಮಿಸಿ ಕಾರಿನಿಂದ ಇಳಿದು ವ್ಹೀಲ್ ಚೇರ್ ಮೂಲಕ ಆಸ್ಪತ್ರೆ ಒಳಗೆ ಸಾಗಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನನ್ನ ಗುರುಗಳ ಆರೋಗ್ಯ ಸ್ಥಿರವಾಗಿದ್ದು, ಅವರಿಗೆ ಮಣಿಪಾಲ ಆಸ್ಪತ್ರೆ ಯಲ್ಲಿ ಉತ್ತಮ ಚಿಕಿತ್ಸೆ ದೊರಕುತ್ತಿದೆ. ದಕ್ಷಿಣ ಮತ್ತು ಉತ್ತರ ಭಾರತದಲ್ಲಿ ಸ್ವಾಮೀಜಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಎಲ್ಲರೂ ಸ್ವಾಮೀಜಿಯ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿ, ಅವರು ಶೀಘ್ರ ಗುಣಮುಖರಾಗುವ ವಿಶ್ವಾಸವಿದೆ.

ಸ್ವಾಮೀಜಿಯವರ ಆರೋಗ್ಯದ ಬಗ್ಗೆ ಭಾರತ ಸರ್ಕಾರದ ಆರೋಗ್ಯ ಸಚಿವ ಹರ್ಷವರ್ಧನ್ ವಿಶೇಷ ಮುತುವರ್ಜಿವಹಿಸಿದ್ದಾರೆ. ಪ್ರತೀ ಎರಡು ತಾಸಿಗೊಮ್ಮೆ ಆರೋಗ್ಯ ವಿಚಾರಿಸುತ್ತಿದ್ದು, ಏಮ್ಸ್ ನ ವೈದ್ಯರು ಮಣಿಪಾಲ ಆಸ್ಪತ್ರೆ ಯ ಸಂಪರ್ಕದಲ್ಲಿ ಇದ್ದಾರೆ ಎಂದರು.

ಯಡ್ಯೂರಪ್ಪ ಪೇಜಾವರ ಸ್ವಾಮೀಜಿಯ ಮಗನಿದ್ದಂತೆ, ಯಡ್ಯೂರಪ್ಪ ಕೂಡಾ ವಿಶೇಷ ಕಾಳಜಿ ತೋರಿದ್ದಾರೆ. ಸರ್ವಧರ್ಮೀಯರೂ ಗುರುಗಳ ಆರೋಗ್ಯಕ್ಕೆ ಪ್ರಾರ್ಥಿಸುತ್ತಿದ್ದಾರೆ ಗುರುಗಳ ಉತ್ತಮ ಆರೋಗ್ಯಕ್ಕಾಗಿ ಎಲ್ಲರೂ ಪ್ರಾರ್ಥಿಸಿ ಎಂದರು.

ಪೇಜಾವರ ವಿಶ್ವೇಶ ತೀರ್ಥ ಶ್ರೀಗಳಿಗೆ ಚಿಕಿತ್ಸೆ ನೀಡಲು ದೆಹಲಿ ಏಮ್ಸ್ ವೈದ್ಯರ ನೆರವು ಪಡೆಯಲಾಗಿದೆ ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಶ್ರೀಗಳ ಆರೋಗ್ಯಸ್ಥಿತಿ ಗಂಭೀರವಾಗಿಯೇ ಇದೆ. ಶ್ರೀಗಳ ದೇಹದ ರಕ್ತ ಸಂಚಾರ ಸಹಜವಾಗಿದೆ ಐಸಿಯುವಿನಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ. ಭಾನುವಾರ ಬೆಂಗಳೂರಿನಿಂದ ತಜ್ಞ ವೈದ್ಯರ ತಂಡ ಇಲ್ಲಿಗೆ ಆಗಮಿಸಿದೆ ಎಂದು ಹೇಳಿದ್ದಾರೆ.


Spread the love