ಪ್ರತಿ ಶನಿವಾರ ಸ್ವಚ್ಛತಾ ಶನಿವಾರ

Spread the love

ಪ್ರತಿ ಶನಿವಾರ ಸ್ವಚ್ಛತಾ ಶನಿವಾರ

ಮಂಗಳೂರು :ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ 2017-18 ನೇ ಸಾಲನ್ನು “ಸ್ವಚ್ಛತಾ ವರ್ಷಾಚರಣೆ”ಯ ಹಿನ್ನೆಲೆಯಲ್ಲಿ ಶಾಲೆ ಮತ್ತು ಅಂಗನವಾಡಿಗಳಲ್ಲಿ ಪ್ರತಿ ಶನಿವಾರ “ಸ್ವಚ್ಛತಾ ಶನಿವಾರ” ವನ್ನಾಗಿ ಆಚರಿಸಲಾಗುತ್ತಿದೆ. ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿ ಶನಿವಾರ ತಾಯಂದಿರಿಗೆ ಹಾಗೂ ಸ್ವ-ಸಹಾಯ ಸಂಘದ ಸದಸ್ಯರಿಗೆ ಸ್ವಚ್ಛತೆಯ ಕುರಿತು ಮಾಹಿತಿಯನ್ನು ನೀಡಲಾಗುತ್ತಿದೆ.

ಸ್ವಚ್ಛತೆ, ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕಾಂಶ ಆಹಾರದ ಬಗ್ಗೆ ತಜ್ಞರಿಂದ ಮಾಹಿತಿ ನೀಡುವ ನಿಟ್ಟಿನಲ್ಲಿ ಜನವರಿ 20 ರಿಂದ “ಸ್ವಚ್ಛ ಸೌರಭ” ರೇಡಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. 12.30 ರಿಂದ 1 ಗಂಟೆಯವರೆಗೆ ಮಂಗಳೂರು ಆಕಾಶವಾಣಿಯಿಂದ ಅಂಗನವಾಡಿ ಕೇಂದ್ರಗಳಲ್ಲಿ ಮಹಿಳೆಯರು ಮತ್ತು ತಾಯಂದಿರು ಒಟ್ಟಾಗಿ ಕುಳಿತು ರೇಡಿಯೋ ಕೇಳುವ ಜಾಗೃತಿಯನ್ನು ಮೂಡಿಸುವ ನೂತನ ಕಾರ್ಯಕ್ರಮ ಇದಾಗಿದೆ.

ನಮ್ಮ ಜಿಲ್ಲೆಯಲ್ಲಿ ಒಟ್ಟು 3,901 ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳಲ್ಲಿ 57,448 ಮಹಿಳಾ ಸದಸ್ಯರು ಮತ್ತು ಅಂದಾಜು 15-20,000 ತಾಯಂದಿರು ಅಂಗನವಾಡಿ ಕೇಂದ್ರಗಳಲ್ಲಿ ನಡೆಯುವ ತಾಯಂದಿರ ಸಭೆ/ಸ್ವಸಹಾಯ ಸಂಘದ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಈ ದೊಡ್ಡ ಪ್ರಮಾಣದ ಮಾನವ ಸಂಪನ್ಮೂಲವನ್ನು ಸದುಪಯೋಗಪಡಿಸಿಕೊಂಡು ಗ್ರಾಮೀಣ ಭಾಗದ ಮಹಿಳೆಯರಲ್ಲಿ ಸ್ವಚ್ಛತೆಯ ಸಾಂಸ್ಕ್ರತಿಕ ಮೌಲ್ಯವನ್ನು ಬೆಳೆಸಿ ಪರಿಸರ ಸ್ನೇಹಿ ವಿಧಾನದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ಉತ್ತಮ ಆರೋಗ್ಯವನ್ನು ಪಡೆಯುವಂತಾಗಬೇಕು.

ಮಕ್ಕಳ ತಾಯಂದಿರು ಗ್ರಾಮ ಪಂಚಾಯತ್ ಸದಸ್ಯರು, ವಿದ್ಯಾ ಸಂಸ್ಥೆ ಸೇರಿದಂತೆ ಸ್ಥಳೀಯ ದಾನಿಗಳಿಂದ ಅಂಗನವಾಡಿ ಕೇಂದ್ರಗಳಿಗೆ ರೇಡಿಯೋ ನೀಡಲು ಮುಂದಾಗಿದ್ದು, ಇಲ್ಲಿಯವರೆಗೆ ಸುಮಾರು 900 ಅಂಗನವಾಡಿ ಕೇಂದ್ರಗಳಿಗೆ ರೇಡಿಯೋ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.


Spread the love