ಪ್ರಾಕೃತಿಕ ವಿಕೋಪ: ತ್ವರಿತ ಪರಿಹಾರ ವಿತರಿಸಲು ಸಚಿವ ಯು.ಟಿ ಖಾದರ್ ಸೂಚನೆ

Spread the love

ಪ್ರಾಕೃತಿಕ ವಿಕೋಪ: ತ್ವರಿತ ಪರಿಹಾರ ವಿತರಿಸಲು ಸಚಿವ ಯು.ಟಿ ಖಾದರ್ ಸೂಚನೆ

ಮಂಗಳೂರು: ಭೂ ಕುಸಿತ ಮತ್ತು ಮಳೆಹಾನಿ ಸೇರಿದಂತೆ ಪ್ರಾಕೃತಿಕ ವಿಕೋಪಗಳ ಸಂತ್ರಸ್ತರಿಗೆ ಪರಿಹಾರ ಮೊತ್ತವನ್ನು ತ್ವರಿತವಾಗಿ ಮಂಜೂರು ಮಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ ಖಾದರ್ ಸೂಚಿಸಿದ್ದಾರೆ.

ಅವರು ಬುಧವಾರ ಬೆಳ್ತಂಗಡಿ ತಾಲೂಕಿನಲ್ಲಿ ವಿವಿಧ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಸಿ ಮಾತನಾಡಿದರು.

ಮಳೆಯಿಂದ ಮನೆಕುಸಿತ ಹಾಗೂ ಜೀವಹಾನಿ ನಡೆದ ಘಟನೆಗಳಿಗೆ ಸರಕಾರದ ನಿಯಮಾನುಸಾರ ಪರಿಹಾರ ಮಂಜೂರು ಮಾಡಬೇಕು. ಮನೆಯೊಳಗೆ ನೀರು ನುಗ್ಗಿದ ಪ್ರಕರಣಗಳ ಸಂತ್ರಸ್ತರಿಗೂ ತುರ್ತು ಪರಿಹಾರವನ್ನು ಮಂಜೂರು ಮಾಡಬೇಕು. ಈ ವಿಷಯದಲ್ಲಿ ವಿಳಂಬವನ್ನು ಸಹಿಸಲಾಗುವುದಿಲ್ಲ ಎಂದು ಸಚಿವರು ತಿಳಿಸಿದರು.
ಮಳೆಯಿಂದ ಹಾನಿಗೊಳಗಾದ ಶಾಲೆ ಮತ್ತು ಅಂಗನವಾಡಿಗಳಿಗೆ ಲಭ್ಯ ಅನುದಾನದಲ್ಲಿ ಪ್ರಗತಿ ಕಾರ್ಯನಿರ್ವಹಿಸಬೇಕು. ಅರಣ್ಯ ಇಲಾಖೆ, ಮೆಸ್ಕಾಂ ಹಾಗೂ ಸ್ಥಳೀಯ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಸಂಭಾವ್ಯ ದುರ್ಘಟನೆಗಳನ್ನು ತಪ್ಪಿಸಬೇಕು ಎಂದು ಯು.ಟಿ ಖಾದರ್ ಸೂಚಿಸಿದರು.

ಮಳೆಗಾಲದಲ್ಲಿ ಅಧಿಕಾರಿಗಳು ಪೂರ್ತಿ ಸನ್ನದ್ಧರಾಗಿ ಕಾರ್ಯನಿರ್ವಹಿಸಬೇಕು. 24 ಗಂಟೆಯೂ ಸಾರ್ವಜನಿಕರ ಸೇವೆಗೆ ಲಭ್ಯರಾಗಬೇಕು. ಕಂಟ್ರೋಲ್ ರೂಂ ಸದಾ ಸನ್ನದ್ದ ಸ್ಥಿತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸಚಿವರು ತಿಳಿಸಿದರು.

ಬೆಳ್ತಂಗಡಿ ತಾಲೂಕಿನ ಪೂಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಅಲ್ಲಲ್ಲಿ ನೀರು ನಿಲ್ಲುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದಿವೆ. ಈ ಹೆದ್ದಾರಿ ಸಮಸ್ಯೆಗಳನ್ನು ಪಟ್ಟಿ ಮಾಡಿ ಹಂತ ಹಂತವಾಗಿ ಬಗೆಹರಿಸಲು ಅವರು ತಿಳಿಸಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆ ರೈತರಿಗೆ ಬೆಳೆ ವಿಮೆಯನ್ನು ತ್ವರಿತವಾಗಿ ಮಂಜೂರು ಮಾಡಬೇಕು ಎಂದು ಯು.ಟಿ ಖಾದರ್ ತಿಳಿಸಿದರು.

ಗುರುವಾಯನಕೆರೆ – ಉಪ್ಪಿನಂಗಡಿ ರಸ್ತೆ ಅಭಿವೃದ್ಧಿಗೆ 12 ಕೋಟಿ ರೂ. ಅನುಮೋದನೆಯಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಪಿಡಬ್ಲ್ಯೂಡಿ ಅಧಿಕಾರಿಗಳು ಸಭೆಗೆ ತಿಳಿಸಿದರು.

ಬೆಳ್ತಂಗಡಿ ನಗರ ಯೋಜನಾ ಪ್ರಾಧಿಕಾರ ಸ್ಥಾಪನೆ ಮಾಡುವ ಸಂಬಂಧ ಪರಿಶೀಲಿಸಲಾಗುವುದು. ಗ್ರಾಮ ಪಂಚಾಯತ್‍ಗಳಲ್ಲಿ ಸಾರ್ವಜನಿಕರ ಕೆಲಸಕ್ಕೆ ಆದ್ಯತೆ ನೀಡಬೇಕು ಎಂದು ಸಚಿವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಚಿವ ಯು.ಟಿ ಖಾದರ್ ನೆಲ್ಯಾಡಿ ರೆಖ್ಯಾ ಕಾಡಾನೆ ದಾಳಿಯಲ್ಲಿ ಸಾವನ್ನಪ್ಪಿದ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ಮಂಜೂರಾತಿ ಪತ್ರ ನೀಡಿದರು.

ಸಭೆಯಲ್ಲಿ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ, ಡಿಸಿಪಿ ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಸಚಿವ ಯು.ಟಿ ಖಾದರ್ ಮಳೆಯಿಂದ ಹಾನಿಗೊಳಗಾದ ಬೆಳ್ತಂಗಡಿ ತಾಲೂಕಿನ ಗುರಿಂಗಾನ, ಪುತ್ರಬೈಲು, ಲಾಯಿಲ ಮತ್ತಿತರ ಕಡೆಗೆ ಭೇಟಿ ನೀಡಿ ಮಳೆ ಅನಾಹುತ ವೀಕ್ಷಿಸಿದರು. ಸಾರ್ವಜನಿಕರನ್ನು ಭೇಟಿಯಾಗಿ ಅವರ ಅಹವಾಲುಗಳನ್ನು ಆಲಿಸಿದರು.


Spread the love
Subscribe
Notify of

0 Comments