ಫಲ ನೀಡಿದ ಹೋರಾಟ – ಬೀಜಾಡಿ ಸರ್ವಿಸ್ ರಸ್ತೆಗೆ ಡಾಂಬರೀಕರಣದ ಭಾಗ್ಯ

ಫಲ ನೀಡಿದ ಹೋರಾಟ – ಬೀಜಾಡಿ ಸರ್ವಿಸ್ ರಸ್ತೆಗೆ ಡಾಂಬರೀಕರಣದ ಭಾಗ್ಯ

ಕುಂದಾಪುರ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬೀಜಾಡಿ ಸರ್ವಿಸ್ ರಸ್ತೆಗೆ ನವಯುಗ ಕಂಪೆನಿಯೀಂದ ಡಾಂಬರೀಕರಣದ ಭಾಗ್ಯ ದೂರಕಿದೆ.

ಬೀಜಾಡಿ ಸರ್ವಿಸ್ ರಸ್ತೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅನೇಕ ಪ್ರತಿಭಟನೆಗಳು ನಡೆದಿದ್ದವು. ಇದಾದ ಕೆಲವು ದಿನಗಳ ನಂತರ ರಸ್ತೆಯನ್ನು ಅಗೆದು ಹಾಕಿ ಹಾಗೇ ಬಿಟ್ಟು ನವಯುಗ ಕಂಪನಿ ನಾಪತ್ತೆಯಾಗಿತ್ತು. ಪುನಃ ಹೋರಾಟ ಆರಂಭಿಸಿದ ಹೋರಾಟ ಸಮಿತಿ ಜಿಲ್ಲಾಧಿಕಾರಿ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳಿಗೆ ಪುನಃ ಮನವಿಯನ್ನು ನೀಡುವುದರ ಮೂಲಕ ಸಾರ್ವಜನಿಕರ ಅಹವಾಲನ್ನು ನೀಡಿತ್ತು.

ಇದಾದ ಕೆಲವು ದಿನಗಳ ನಂತರ ಲೋಕಸಭಾ ಚುನಾವಣೆ ಬಂದಿದ್ದರಿಂದ ಪುನಃ ರಸ್ತೆ ಕಾಮಗಾರಿ ನೆನೆಗುದಿಗೆ ಬಿತ್ತು. ಚುನಾವಣೆಯ ಸಂದರ್ಭದಲ್ಲಿ ಮತದಾನ ಬಹಿಷ್ಕಾರಕ್ಕೆ ಮುಂದಾದಾಗ ಹಿರಿಯ ಅಧಿಕಾರಿಗಳು ಹಾಗೂ ಹಿರಿಯ ಸ್ಥಳೀಯ ಮುಖಂಡರ ಮನವೊಲಿಕೆಯಿಂದ ಮತದಾನ ಬಹಿಷ್ಕಾರ ಹಿಂಪಡಿಯಲಾಯಿತು. ಚುನಾವಣೆ ಮುಗಿದ ಬಳಿಕ ರಸ್ತೆಯ ಕಾಮಗಾರಿಯನ್ನು ಮುಗಿಸಿ ಕೊಡುವಂತೆ ಅಧಿಕಾರಿಗಳು ಭರವಸೆಯನ್ನು ನೀಡಿದ್ದರು. ಚುನಾವಣೆ ಫಲಿತಾಂಶದ ಬಳಿಕ ಸಂಸದರ ಬಳಿ ಮತ್ತೊಮ್ಮೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಭೇಟಿಯಾಗಿ ಮಳೆಗಾಲದ ಸಂದರ್ಭದಲ್ಲಿ ಸರ್ವಿಸ್ ರಸ್ತೆಗಳ ಮೇಲೆ ಆಗುವಂತಹ ತೊಂದರೆಗಳನ್ನು ಮನಮುಟ್ಟುವಂತೆ ಹೇಳಲಾಯಿತು.

ನೂತನ ಸಂಸದರಾಗಿ 2ನೇ ಬಾರಿಗೆ ಶೋಭ ಕರಂದ್ಲಾಜೆ ಆಯ್ಕೆಗೊಂಡ ಬಳಿಕ ನವಯುಗ ಹಿರಿಯ ಅಧಿಕಾರಿಗಳ ಜೊತೆಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಚರ್ಚಿಸಿ ಮಳೆಗಾಲದ ಒಳಗೆ ಸರ್ವಿಸ್ ರಸ್ತೆಯನ್ನು ಮುಗಿಸುವಂತೆ ಸೂಚಿಸಿದ್ದರು. ಇದೇ ಪ್ರಕಾರ ಶುಕ್ರವಾರ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು ಸಾರ್ವಜನಿಕರಿಗೆ ಸಂತೋಷವನ್ನು ಉಂಟುಮಾಡಿದೆ.

ಬೀಜಾಡಿ ಸರ್ವಿಸ್ ರೋಡ್ ಅರೆಬರೆ ಕಾಮಗಾರಿಯಿಂದ ಈ ಭಾಗದಲ್ಲಿ ಹಲವು ಕಡೆ ಹಲವು ಸಂಖ್ಯೆಗಳಲ್ಲಿ ಅಪಘಾತಗಳಾಗಿ ಕೆಲವರು ಮೃತಪಟ್ಟಿದ್ದ ಘಟನೆಯೂ ನಡೆದಿದೆ. ಅದರಲ್ಲಿಯೂ ಕೂಡ ಗಂಭೀರ ಗಾಯಾಳುಗಳಾದ ಘಟನೆಯೂ ನಡೆದಿತ್ತು

ಬೀಜಾಡಿ ಸರ್ವಿಸ್ ರಸ್ತೆ ಹೋರಾಟ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಯೊಂದು ಹೋರಾಟದಲ್ಲಿಯೂ ಕೂಡ ತಮ್ಮೆಲ್ಲಾ ಕೆಲಸವನ್ನು ಬದಿಗಿಟ್ಟು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಸ್ಪಂದಿಸುವ ಹಲವಾರು ಮನಸ್ಸುಗಳು ನಮ್ಮ ಮನವಿಗೆ ಸ್ಪಂದಿಸಿ ಕೈಜೋಡಿಸಿವೆ.

ಹೋರಾಟ ಸಮಿತಿ ನೇತೃತ್ವದಲ್ಲಿ ಸತತ ಬೀಜಾಡಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಹಲವು ರೀತಿಯ ಹೋರಾಟಗಳು ನಡೆಯುತ್ತಿದ್ದರೂ ಕೂಡ ಇವನ್ನೆಲ್ಲ ಕಂಡು ಕಾಣದಂತೆ ಕುರುಡಾಗಿತ್ತು ನವಯುಗ ಕಂಪನಿ. ಸ್ಥಳೀಯರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ ಕೂಡ ತಮ್ಮ ಕೈಲಾಗದೆ ಏನೂ ಮಾಡಲಾಗದ ಪರಿಸ್ಥಿತಿ ಕಂಪನಿಯ ಅಧಿಕಾರಿಗಳಿಗೆ ಆಗಿತ್ತು. ಕಾರಣ ಕಂಪೆನಿಯ ಬಳಿ ಹಣವಿಲ್ಲ ಎಂಬ ನೆಪ. ಇವೆಲ್ಲದರ ನಡುವೆ ನವಯುಗ ಆದಷ್ಟು ಬೇಗನೆ ಸರ್ವಿಸ್ ರಸ್ತೆಯನ್ನು ಮಾಡಿಸುವ ಕೆಲಸ ಇವರಿಂದಾಗಿದೆ. ಕೋಟೇಶ್ವರ ಒಳಪೇಟೆಯಿಂದ ಬರುವ ಯಾವುದೇ ವಾಹನಗಳು ಕೂಡ ರಾಷ್ಟ್ರೀಯ ಹೆದ್ದಾರಿಯ ವಿರುದ್ಧ ದಿಕ್ಕಿನಲ್ಲಿ ಚಲಾಯಿಸುವಂತಿಲ್ಲ. ಎಲ್ಲಾ ವಾಹನಗಳು ಸರ್ವಿಸ್ ರಸ್ತೆಯನ್ನು ಬಳಕೆ ಮಾಡುವಂತೆ ನವಯುಗ ಕಂಪನಿ ತಿಳಿಸಿದೆ.