ಫೆ.3-4 ಕೊಲ್ಯದಲ್ಲಿ ಅಬ್ಬಕ್ಕ ಉತ್ಸವ ; ರಮಾನಾಥ ರೈ 

Spread the love

ಫೆ.3-4 ಕೊಲ್ಯದಲ್ಲಿ ಅಬ್ಬಕ್ಕ ಉತ್ಸವ ; ರಮಾನಾಥ ರೈ 

ಮಂಗಳೂರು ಡಿ:ವೀರರಾಣಿ ಅಬ್ಬಕ್ಕ ಉತ್ಸವವನ್ನು ಫೆಬ್ರವರಿ 3 ಮತ್ತು 4ರಂದು ಕೊಲ್ಯದಲ್ಲಿ ಆಚರಿಸಲು ನಿರ್ಧರಿಸಲಾಗಿದೆ.

ಈ ಸಂಬಂಧ ಅರಣ್ಯ ಹಾಗು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಿತು. ಸಚಿವರು ಮಾತನಾಡಿ, ವೀರರಾಣಿ ಅಬ್ಬಕ್ಕ ಆಡಳಿತವು ಇಂದಿಗೆ ಪ್ರಸ್ತುತವಾಗಿದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಬ್ರಿಟೀಷರ ವಿರುದ್ಧ ಹೋರಾಡಿದ ಅಬ್ಬಕ್ಕ ರಾಣಿಯ ಚರಿತ್ರೆಯು ಇಂದಿನ ಜನತೆಗೆ ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಏರ್ಪಡಿಸುವಂತೆ ಸೂಚಿಸಿದರು. ಈ ಸಾಲಿನ ಅಬ್ಬಕ್ಕ ಉತ್ಸವಕ್ಕೆ 50 ಲಕ್ಷ ರೂ. ಬಿಡುಗಡೆಯಾಗಿದ್ದು, ಈ ನಿಟ್ಟಿನಲ್ಲಿ ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಸಲು ಸಚಿವರು ತಿಳಿಸಿದರು. ಅಬ್ಬಕ್ಕ ಉತ್ಸವವನ್ನು ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿಯೂ ಕೂಡ ನಡೆಸುವಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚಿಸಿದರು.

ಆಹಾರ ಸಚಿವ ಯು.ಟಿ. ಖಾದರ್ ಮಾತನಾಡಿ, ಅಬ್ಬಕ್ಕ ಉತ್ಸವ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯವಿದೆ. ಸರಕಾರದ ಅನುದಾನದಲ್ಲಿ 30 ಲಕ್ಷ ರೂ.ಗಳನ್ನು ಜಿಲ್ಲೆಯಲ್ಲಿ ನಡೆಯುವ ಅಬ್ಬಕ್ಕ ಉತ್ಸವಕ್ಕೆ ವಿನಿಯೋಜಿಸಲಾಗುವುದು. ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ರೂ. 8 ಲಕ್ಷ ಹಾಗೂ ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ 12 ಲಕ್ಷ ರೂ. ಕಾದಿರಿಸಲಾಗಿದೆ ಎಂದು ಹೇಳಿದರು.

ರೂ. 8 ಕೋಟಿ ವೆಚ್ಚದಲ್ಲಿ ಅಬ್ಬಕ್ಕ ಭವನ ನಿರ್ಮಿಸಲು ಈಗಾಗಲೇ ರಾಜ್ಯ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಲು ಅವರು ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು.

ಸಭೆಯಲ್ಲಿ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ, ದಿನಕರ ಉಳ್ಳಾಲ ಮತ್ತಿತರರು ಇದ್ದರು.


Spread the love