ಫೋಕಸ್ ರಾಘು ಅವರ ಛಾಯಾ ಚಿತ್ರ ಪ್ರದರ್ಶನ ‘ಸ್ಪೆಕ್ಟ್ರಮ್’ಚಾಲನೆ

ಫೋಕಸ್ ರಾಘು ಅವರ ಛಾಯಾ ಚಿತ್ರ ಪ್ರದರ್ಶನ ‘ಸ್ಪೆಕ್ಟ್ರಮ್’ಚಾಲನೆ

ಉಡುಪಿ: ಉಡುಪಿ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಫೋಕಸ್ ರಾಘು ಅವರ ಛಾಯಾ ಚಿತ್ರ ಪ್ರದರ್ಶನ ‘ಸ್ಪೆಕ್ಟ್ರಮ್’ ಇದೇ 28ರಿಂದ ಸೆ.1ರವರೆಗೆ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಬುಧವಾರ ಉದ್ಘಾಟನೆಗೊಂಡಿತು.

ಛಾಯಾ ಚಿತ್ರ ಪ್ರದರ್ಶನ ‘ಸ್ಪೆಕ್ಟ್ರಮ್’ಇದರ ಉದ್ಘಾಟನೆಯನ್ನು ಫೋಕಸ್ ರಾಘು ಅವರ ತಾಯಿ ರತ್ನಾವತಿ ಪ್ರದರ್ಶನಕ್ಕೆ ಫೋಟೊ ಕ್ಲಿಕ್ಕಿಸುವುದರ ಮೂಲಕ ಚಾಲನೆ ನೀಡಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಛಾಯಾಚಿತ್ರಗ್ರಹಣ ಕೇವಲ ಒಂದು ಕಲೆಯಲ್ಲ ಬದಲಾಗಿ ಅದು ಮನಸ್ಸಿಗೆ ಸಮಾಧಾನಕೊಡುವ ಸಾಧನವೂ ಹೌದು. ಅದರೆ ಅದನ್ನು ಕೇವಲ ಛಾಯಾಚಿತ್ರಗ್ರಹಣವನ್ನು ನೋಡಲು ಉಪಯೋಗಿಸಿಕೊಳ್ಳದೆ ಕ್ಯಾಮಾರಾ ಹಿಂದಿನ ಕಣ್ಣಿನ ಸೂಕ್ಷ್ಮತೆಯನ್ನು ಗಮನಿಸಬೇಕಾಗಿದೆ. ಒರ್ವ ಛಾಯಾಚಿತ್ರಗ್ರಾಹಕ ಸದಾ ವಿಸ್ಮಯವನ್ನು ಹುಡುಕಿಕೊಂಡು ಹೋಗುವ ಕಲೆಯನ್ನು ಕರಗತ ಮಾಡಿಕೊಂಡಿದ್ದು ಸಮಾಜಕ್ಕೆ ಫೋಕಸ್ ರಾಘು ಅವರು ಈ ವರೆಗೆ ಅತ್ಯುತ್ತಮ ಫೋಟೊಗಳನ್ನು ನೀಡಿದ್ದು ಅವರ ಏಕಾಗ್ರತೆ, ಸೂಕ್ಷ್ಮತೆಯ ಕಲೆಯಿಂದ ಇಂದು ಹೆಸರುವಾಸಿಯಾಗಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ. ವಿಜಯ ವಹಿಸಿ ಮಾತನಾಡಿ ಫೋಟೊಗ್ರಾಫಿ ಕೇವಲ ಕಲೆಯಾಗಿ ಕಾಣದೆ ಅದು ಕೂಡ ಒಂದು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಬೇಕಾಗಿದೆ. ಛಾಯಾಗ್ರಹಣ ಬೆಳಕಿನ ಜೊತೆ ಕತ್ತಲೆಯನ್ನು ಕೂಡ ಪ್ರೀತಿಸುವ ಕಲೆಯನ್ನು ಹೊಂದಿದ್ದು, ಛಾಯಾಚಿತ್ರಗಳ ನಿಜವಾದ ಅನುಭವಾಗಬೇಕಾದರೆ ಅದರಲ್ಲಿ ಭಾವನೆಗಳನ್ನು ಕೇಳಿಸಿಕೊಳ್ಳುವಂತಾಗಬೇಕು ಎಂದರು.

ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಎಂ. ಹರಿಶ್ಚಂದ್ರ, ನಿಕೋನ್ ಇಂಡಿಯಾ ಪ್ರೈ. ಲಿಮಿಟೆಡ್ನ ಎನ್. ರಾಜಶೇಖರ್, ಛಾಯಾಗ್ರಾಹಕ ಗುರುದತ್ ಕಾಮತ್ ಅತಿಥಿಗಳಾಗಿ ಆಗಮಿಸಿದ್ದರು.

ಇದು ಫೋಕಸ್ ರಾಘು ಅವರ ಮೂರನೇ ಛಾಯಾಚಿತ್ರ ಪ್ರದರ್ಶನವಾಗಿದ್ದು, ಫೋಕಸ್ ರಾಘು ಅವರು ಕಾಶ್ಮೀರ ಸೇರಿದಂತೆ ದೇಶದ ವಿವಿಧ ಪ್ರದೇಶಗಳಲ್ಲಿ ವನ್ಯಜೀವಿ, ಸಂಸ್ಕೃತಿ ಮತ್ತು ವಿವಿಧ ಆಯಾಮ ಗಳಿಗೆ ಸಂಬಂಧಿಸಿ ಸೆರೆ ಹಿಡಿದ ಒಟ್ಟು 45 ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗುವುದು. ಆ. 28ರಿಂದ ಸೆ. 1ರವರೆಗೆ ಒಟ್ಟು ಐದು ದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪ್ರದರ್ಶನ ನಡೆಯಲಿದೆ.

ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಂಜುನಾಥ್ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಛಾಯಾಗ್ರಾಹಕ ಫೋಕಸ್ ರಾಘು ವಂದಿಸಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸುಚೀತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.