ಬಡತನ ಮತ್ತು ವಾತಾವರಣ ಬದಲಾವಣೆಯ ಬಗ್ಗೆ ಗಂಭೀರ ಚಿಂತನೆ ಅಗತ್ಯ : ಡಾ. ಹರೀಶ್ ಹಂದೆ

Spread the love

ಬಡತನ ಮತ್ತು ವಾತಾವರಣ ಬದಲಾವಣೆಯ ಬಗ್ಗೆ ಗಂಭೀರ ಚಿಂತನೆ ಅಗತ್ಯ : ಡಾ. ಹರೀಶ್ ಹಂದೆ

ಸೆಲ್ಕೋ ಸಂಸ್ಥೆಯ 2018-19 ನೇ ಸಾಲಿನ ರಾಷ್ಟ್ರೀಯ ಸೂರ್ಯ ಮಿತ್ರ ಪ್ರಶಸ್ತಿಗೆ ಕುಂದಾಪುರ ತಾಲೂಕು ಅಮಾಸೆಬೈಲಿನ ಎಜಿ ಕೊಡ್ಗಿ ಮತ್ತು ಅಹ್ಮದಾಬಾದಿನ ಮಹಿಳಾ ಹೌಸಿಂಗ್ ಸೇವಾ ಟ್ರಸ್ಟಿನ ಬಿಜಲ್ ಬ್ರಹ್ಮ ಭಟ್ ಇವರು ಆಯ್ಕೆಯಾಗಿದ್ದು ಶನಿವಾರ ಮೈಸೂರಿನ ಹೋಟೆಲ್ ಗ್ರ್ಯಾಂಡ್ ಮೌರ್ಯದಲ್ಲಿ ನಡೆದ ಸಂಸ್ಥೆಯ ವಾರ್ಷಿಕ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ವೈವಿದ್ಯಮಯ ಕೃಷಿಕ, ರಾಜಕೀಯ ಮುತ್ಸದ್ದಿ ಎಜಿ ಕೊಡ್ಗಿಯವರು ಅಮಾಸೆಬೈಲು ಗ್ರಾಮದ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ 2008ರಲ್ಲಿ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟನ್ನು ಹುಟ್ಟು ಹಾಕಿ ಭಗೀರಥ ಪ್ರಯತ್ನ ನಡೆಸಿ ಅಮಾಸೆಬೈಲನ್ನು ದೇಶದ ಮೊದಲ ಸಂಪೂರ್ಣ ಸೋಲಾರ್ ಗ್ರಾಮವನ್ನಾಗಿ ಮಾಡಿ, ಇಂದನ ಸ್ವಾವಲಂಬನೆಗೆ ಒಂದು ಮಾದರಿ ಗ್ರಾಮವನ್ನಾಗಿ ರೂಪಿಸಿದ್ದಾರೆ.

ಬಿಜಲ್ ಬ್ರಹ್ಮಭಟ್ ರವರು ಸಮುದಾಯ ಅಭಿವೃದ್ಧಿ ಕ್ಷೇತ್ರದಲ್ಲಿ ಅದರಲ್ಲೂ ಮುಖ್ಯವಾಗಿ ನಗರ ಪ್ರದೇಶಗಳ ಕೊಳಗೇರಿಗಳಲ್ಲಿ ಒಂದು ಕೈಗೆಟುಕುವ ವೆಚ್ಚದಲ್ಲಿ ಮನೆ ನಿರ್ಮಾಣ, ಬೆಳಕಿನ ವ್ಯವಸ್ಥೆಯ ಮಾದರಿಗಳು, ಸೋಲಾರ್ ಫ್ಯಾನ್ ಗಳು ಹಾಗೂ ಮಹಿಳಾ ಸಬಲೀಕರಣ, ಉದ್ಯಮಶೀಲತೆಯ ತರಬೇತಿ, ನೀರು ಮತ್ತು ಸ್ವಚ್ಚತೆ ಇಂತಹ ಅತೀ ಮೂಲಭೂತ ಅವಶ್ಯಕತೆಗಳಿಗೆ ಪರಿಹಾರವನ್ನು ನೀಡಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ ಹರೀಶ್ ಹಂದೆಯವರು ಬಡತನ ಮತ್ತು ವಾತಾವರಣದ ಬದಲಾವಣೆಯ ಬಗ್ಗೆ ನಾವು ಗಂಭೀರವಾದ ಚಿಂತನೆ ನಡೆಸುವ ಅವಶ್ಯಕತೆ ಇದೆ ಎಂದು ಒತ್ತಿ ಹೇಳಿದರು.

ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದ ವಿಶ್ವವಾಣಿ ದಿನ ಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಮಾತನಾಡಿ ಇಂದು ಸಮಾಜದಲ್ಲಿ ಸೋಲಾರ್ ಇಂಧನದ ಅವಶ್ಯಕತೆಯನ್ನು ತಿಳಿಸಿದರು.

ಸೆಲ್ಕೋ ಸಂಸ್ಥೆಯ ನಿರ್ದೇಶಕರಾದ ಥೋಮಸ್ ಪುಲೇನ್ ಕವ್, ಟ್ರಸ್ಟೀ ಶ್ರೀನಿವಾಸ್, ಸಿಇಒ ಮೋಹನ್ ಭಾಸ್ಕರ್ ಹೆಗಡೆ, ಮಹಾ ಪ್ರಬಂಧಕರಾದ ಜಗದೀಶ್ ಪೈ, ಸೆಲ್ಕೋ ಸಂಸ್ಥೆಯ ಅಧಿಕಾರಿ ವರ್ಗದವರು ಸಿಬಂದಿಗಳೂ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.


Spread the love