ಬಸ್ ಮಾಲಕರಿಂದ ಪ್ರಯಾಣಿಕರ ಮೇಲೆ ಟೋಲ್ ಸೆಸ್ ಹೇರಿಕೆ, ಹೋರಾಟ ಸಮಿತಿ ವಿರೋಧ

Spread the love

ಬಸ್ ಮಾಲಕರಿಂದ ಪ್ರಯಾಣಿಕರ ಮೇಲೆ ಟೋಲ್ ಸೆಸ್ ಹೇರಿಕೆ, ಹೋರಾಟ ಸಮಿತಿ ವಿರೋಧ

ಫಾಸ್ಟ್ ಟಾಗ್ ಕಡ್ಡಾಯ, ಟೋಲ್ ದರಗಳ ಹೆಚ್ಚಳವನ್ನು ಮುಂದಿಟ್ಟು ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಬಸ್ ಮಾಲಕರು ಪ್ರತಿ ಸ್ಟೇಜ್ ಗೆ ಟಿಕೇಟ್ ಮೇಲೆ ತಲಾ ಒಂದು ರೂಪಾಯಿ ಪ್ರಯಾಣ ದರ ಹೆಚ್ಚಳ ಮಾಡಿರುವುದು ಖಂಡನೀಯ. ಜಿಲ್ಲಾಡಳಿತ, ಆರ್ ಟಿ ಎ ಅನುಮತಿ ಪಡೆಯದೆ ಈ ರೀತಿ ಏಕಪಕ್ಷೀಯ, ನಿಯಮ ಬಾಹಿರ ಏರಿಕೆ ಮಾಡುವುದನ್ನು ಒಪ್ಪಲಾಗದು, ಉಭಯ ಜಿಲ್ಲಾಡಳಿತಗಳು ತಕ್ಷಣ ಮಧ್ಯ ಪ್ರವೇಶಿಸಿ ದರ ಏರಿಕೆಯನ್ನು ತಡೆ ಹಿಡಿದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್ ಆಗ್ರಹಿಸಿದೆ.

ಟೋಲ್ ದರ ಹೆಚ್ಚಳ, ಫಾಸ್ಟ್ ಟಾಗ್ ಹೆಸರಿನ ಸುಲಿಗೆ, ಸುರತ್ಕಲ್ ನಲ್ಲಿ ಅಕ್ರಮ ಟೋಲ್ ವಸೂಲಿಯನ್ನು ಸಂಘಟಿತ ವಿಭಾಗವಾದ ಬಸ್ ಮಾಲಕರ ಒಕ್ಕೂಟಗಳು ಪ್ರತಿಭಟಿಸಬೇಕು. ಅದರ ಹೊರತಾಗಿ ಟೋಲ್ ದರ ಹೆಚ್ಚಳವನ್ನೇ ನೆಪವಾಗಿಸಿ ಪ್ರಯಾಣಿಕರ ಮೇಲೆ ಯದ್ವಾ ತದ್ವ ದರ ವಿಧಿಸುವುದು ಖಂಡನೀಯ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಟೋಲ್ ಗೇಟ್ ಗಳಲ್ಲಿ ವಿಪರೀತ ದರ ವಸೂಲಿ, ಅಕ್ರಮ ಟೋಲ್ ಗೇಟ್ ಗಳ ವಿರುದ್ದ ನಾಗರಿಕ ಸಂಘಟನೆಗಳು ಹೋರಾಟಗಳನ್ನು ಹಮ್ಮಿಕೊಂಡಾಗ ಬಸ್ ಮಾಲಕರ ಸಂಘಗಳು ಪ್ರತಿಭಟನೆಗಳ ಜೊತೆಗೆ ನಿಲ್ಲಲಿಲ್ಲ. ನಿಯಮಗಳ ವಿರುದ್ದವಾಗಿ ಕಿರು ಅಂತರದ ಟೋಲ್ ಕೇಂದ್ರಗಳ ವಿರುದ್ದ ಸ್ವತಂತ್ರ ಹೋರಾಟವನ್ನೂ ಮಾಡಲಿಲ್ಲ‌. ಅದರಲ್ಲೂ ಹೆದ್ದಾರಿ ಪ್ರಾಧಿಕಾರವೇ ಸ್ವತಹ ಮುಚ್ಚಲು ನಿರ್ಧರಿಸಿರುವ ಸುರತ್ಕಲ್ ನ ತಾತ್ಕಾಲಿಕ ಟೋಲ್ ಕೇಂದ್ರದಲ್ಲಿ ಅಕ್ರಮ ಟೋಲ್ ಸಂಗ್ರಹದ ವಿರುದ್ದ ಟೋಲ್ ವಿರೋಧಿ ಹೋರಾಟ ಸಮಿತಿ ಸತತವಾದ ಹೋರಾಟ ನಡೆಸಿದಾಗಲೂ ಬಸ್ ಮಾಲಕರ ಸಂಘ ಹೋರಾಟ ಬೆಂಬಲಿಸಿ ಬೀದಿಗಿಳಿಯಲಿಲ್ಲ. ಅದರ ಬದಲಿಗೆ ಅಕ್ರಮ ಟೋಲ್ ಸಂಗ್ರಹದ ಹೊರೆಯನ್ನು ಪ್ರಯಾಣಿಕರ ತಲೆಗೆ ವರ್ಗಾಯಿಸಿ ದುಪ್ಪಟ್ಟು ಲಾಭ ಪಡೆಯಿತು. ಅವಳಿ ಜಿಲ್ಲೆಗಳ ಜೀವನಾಡಿಯಾಗಿರುವ, ಸಂಘಟಿತ, ಪ್ರಬಲ ವಿಭಾಗವಾಗಿರುವ ಖಾಸಾಗಿ ಬಸ್ ಗಳು ಸುರತ್ಕಲ್ ಅಕ್ರಮ ಟೋಲ್ ಕೇಂದ್ರದ ವಿರುದ್ದದ ಹೋರಾಟದಲ್ಲಿ ಕೈ ಜೋಡಿಸಿದ್ದರೆ ಸುರತ್ಕಲ್ ಟೋಲ್ ಮುಚ್ಚದೆ ಸರ್ಕಾರಕ್ಕೆ ಬೇರೆ ದಾರಿ ಇರಲಿಲ್ಲ.

ಈ ಹಿಂದೆ ಟೋಲ್ ಕೇಂದ್ರಗಳು ಆರಂಭಗೊಂಡಾಗ ಪ್ರಯಾಣಿಕರ ಪ್ರತಿ ಟಿಕೆಟ್ ಮೇಲೆ ಬಸ್ ಮಾಲಕರ ಸಂಘ ತಲಾ ಎರಡು ರೂಪಾಯಿ ಟೋಲ್ ಸೆಸ್ ವಿಧಿಸಿತ್ತು. ಈಗ ಮತ್ತೆ ಟೋಲ್ ದರ ಅಲ್ಪ ಹೆಚ್ಚಳವನ್ನು ಮುಂದಿಟ್ಟು ಪ್ರತಿ ಸ್ಟೇಜ್ ಮೇಲೆ ಟಿಕೆಟ್ ಗೆ ಒಂದು ರೂಪಾಯಿ ಸೆಸ್ ಅನ್ನು ಜಿಲ್ಲಾಡಳಿತ, ಆರ್ ಟಿ ಎ ಅನುಮತಿ ಪಡೆಯದೆ ಏಕಪಕ್ಷೀಯವಾಗಿ ಹೆಚ್ಚುವರಿಯಾಗಿ ವಿಧಿಸಿದೆ. ಈ ರೀತಿ ಜಿಲ್ಲಾಡಳಿತದ ಅನುಮತಿ ಇಲ್ಲದೆ, ಸಾರ್ವಜನಿಕ ಅಹವಾಲು ಸ್ವೀಕರಿಸಿ ಆರ್ ಟಿ ಎ ಒಪ್ಪಿಗೆ ಸೂಚಿಸದೆ ಬಸ್ ಮಾಲಕರು ದರ ಹೆಚ್ಚಿಸುವುದು ನಿಯಮಗಳಿಗೆ ವಿರುದ್ದವಾಗಿದೆ. ಈ ಹೆಚ್ಚಳದಿಂದ ಮಂಗಳೂರಿನಿಂದ ಉಡುಪಿ, ಕುಂದಾಪುರದ ಕಡೆಗೆ ಪ್ರಯಾಣಿಸುವ ಪ್ರತಿಯೊಂದು ಟಿಕೇಟ್ ಮೇಲೆ ತಲಾ ಐದು ರೂಪಾಯಿ ಹೆಚ್ಚುವರಿ ಹೊರೆ ಬೀಳುತ್ತದೆ. ಇದು ಬಡ ಪ್ರಯಾಣಿಕರ ನೇರವಾದ ಅಕ್ರಮ ಸುಲಿಗೆಯಾಗಿದ್ದು, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಬಸ್ ಮಾಲಕರ ಸಂಘದ ಈ ಏಕಪಕ್ಷೀಯ ಸುಲಿಗೆ ನೀತಿಯನ್ನು ತೀವ್ರವಾಗಿ ವಿರೋಧಿಸುತ್ತದೆ. ಪ್ರಯಾಣಿಕರು ಹೆಚ್ಚುವರಿ ದರ ಪಾವತಿಸದೆ ಪ್ರತಿಭಟಿಸುವಂತೆ ಮನವಿ ಮಾಡುತ್ತದೆ. ಉಭಯ ಜಿಲ್ಲಾಡಳಿಗಳು ತಕ್ಷಣ ಮಧ್ಯ ಪ್ರವೇಶಿಸಿ ಹೆಚ್ವುವರಿ ಟೋಲ್ ಸೆಸ್ ವಸೂಲಿಗೆ ತಡೆ ವಿಧಿಸುವಂತೆ ಆಗ್ರಹಿಸುತ್ತದೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್ ಇದರ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ


Spread the love