ಬಾಲಕಾರ್ಮಿಕ ಪದ್ಧತಿಯನ್ನು ಅಳಿಸಿಹಾಕೋಣ- ನ್ಯಾಯಾಧೀಶ ವೆಂಕಟೇಶ್

Spread the love

ಬಾಲಕಾರ್ಮಿಕ ಪದ್ಧತಿಯನ್ನು ಅಳಿಸಿಹಾಕೋಣ- ನ್ಯಾಯಾಧೀಶ ವೆಂಕಟೇಶ್

ಉಡುಪಿ: ಮಕ್ಕಳು ದೇವರು ನೀಡಿದ ಅತ್ಯಮೂಲ್ಯ ಕೊಡುಗೆ ಸಮಾಜಕ್ಕೆ. ಅಂತಹ ಉತ್ತಮ ವರವನ್ನು ದೇಶದ ಅತ್ಯುತ್ತಮ ಸಂಪನ್ಮೂಲವನ್ನಾಗಿ ಮಾಡಿ ಸದ್ಬಳಕೆ ಮಾಡುವುದು ನಮ್ಮೆಲ್ಲರ ಹೊಣೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮತ್ತು ಅಧ್ಯಕ್ಷರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವೆಂಕಟೇಶ್ ನಾಯ್ಕ ಟಿ ಹೇಳಿದರು.

ಜಿಲ್ಲಾಡಳಿತ ಉಡುಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ವಕೀಲರ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಯುಕ್ತ ಆಶ್ರಯದಲ್ಲಿ ‘ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ’ ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಹಲವಾರು ಕಾರಣಗಳಿಂದ ನಮ್ಮ ನಡುವೆ ಬಾಲ ಕಾರ್ಮಿಕ ಪದ್ಧತಿ, ಪಿಡುಗು ಬೆಳೆಯುತ್ತಿದೆ; ಈ ಪಿಡುಗನ್ನು ಚಿವುಟಿ ಹಾಕಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಹಲವು ಕಾನೂನು, ಕಾಯಿದೆಗಳನ್ನು ರೂಪಿಸಲಾಗಿದೆ. ನ್ಯಾಯಾಂಗ ಮಕ್ಕಳ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದೆ. ಅನಕ್ಷರತೆ, ಬಡತನಗಳಿಂದ ಕಠಿಣ ಪರಿಶ್ರಮ ಬೇಡುವ, ಅಪಾಯಕಾರಿ ಕೆಲಸಗಳಲ್ಲಿ ಮಕ್ಕಳ ದುಡಿಯುತ್ತಿದ್ದು ಇದನ್ನೆಲ್ಲ ನಿಷೇಧಿಸಲಾಗಿದೆ ಎಂದು ನ್ಯಾಯಾಧೀಶರು ಹೇಳಿದರು.

ನ್ಯಾಯಾಂಗ ಮಕ್ಕಳ ಹಕ್ಕು ರಕ್ಷಣೆಗೆ ಪ್ರೊ ಆಕ್ಟಿವಾಗಿ ಕಾರ್ಯಾಚರಿಸುತ್ತಿದ್ದು, 18 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ಕಳಿಸುವುದು ಅಪರಾಧ ಎಂದೆನಿಸುತ್ತದೆ. ಭಾರತೀಯ ಸಂವಿಧಾನ ಕಡ್ಡಾಯ ಶಿಕ್ಷಣ ನೀತಿ ಜಾರಿಗೊಳಿಸಿದ್ದು, ಬಾಲ ಕಾರ್ಮಿಕತೆಗೆ ಪ್ರಚೋದನೆ ನೀಡುವುದನ್ನು ಅಪರಾಧ ಎಂದು ಪರಿಗಣಿಸಿದೆ ಎಂದರು.

ಕಾನೂನು, ಕಾಯಿದೆಗಳ ಪರಿಣಾಮಕಾರಿ ಜಾರಿಗೆ ಸಮೀಕ್ಷೆ ನಡೆಸಿ, ಪಿಡುಗುಗಳ ನಿರ್ಮೂಲನೆಗೆ ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದು, ಅರಿವು ಮೂಡಿಸುವಲ್ಲಿ ಯಶಸ್ವಿಯಾಗುತ್ತಿದ್ದೇವೆ ಎಂದರು.

ಬಾಲ ಕಾರ್ಮಿಕ ನಿಷೇಧ ಕುರಿತು ಪ್ರತಿಜ್ಞೆ ಬೋಧಿಸಿದ ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ, ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿಸಿದಲ್ಲಿ ಅವರು ಸಮಾಜಕಂಟಕರಾಗುವ ಅಪಾಯವಿದೆ. ಈ ಬಗ್ಗೆ ತಂದೆ- ತಾಯಿ ಎಚ್ಚರ ವಹಿಸಬೇಕು. ಮಕ್ಕಳು ಅಪರಾಧಗಳ ಪ್ರಕರಣಗಳಲ್ಲಿ ಭಾಗಿಯಾದರೆ ಹೆತ್ತವರಿಗೆ ಶಿಕ್ಷೆ ವಿಧಿಸುವ ಕಾನೂನಿನ ಬಗ್ಗೆ ವಿವರಿಸಿದರು. ನೈಜೀರಿಯಾ, ಪಾಕಿಸ್ತಾನ ಮೊದಲಾದ ದೇಶಗಳಲ್ಲಿ ಬಾಲ ಕಾರ್ಮಿಕ ಪದ್ಧತಿ ಅಧಿಕವಾಗಿದೆ. ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದುಹಾಕಿ ಅವರನ್ನೂ ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಲು ಎಲ್ಲರ ಸಹಕಾರ ಅಗತ್ಯ ಎಂದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ. ಕೆ. ನಾರಾಯಣ, ಬಾಲ ಕಾರ್ಮಿಕ ಪದ್ಧತಿ ತಡೆದು ಮಕ್ಕಳಿಗೆ ಶಿಕ್ಷಣ ನೀಡಬೇಕು. ಮಕ್ಕಳ ಬದುಕುವ ಹಕ್ಕು, ರಕ್ಷಣೆ ಹಕ್ಕು, ವಿಕಾಸಗೊಳ್ಳುವ ಹಕ್ಕು ಮತ್ತು ಭಾಗವಹಿಸುವ ಹಕ್ಕುಗಳನ್ನು ಗೌರವಿಸಬೇಕು. ಉಡುಪಿ ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆ ಎಂದು ಘೋಷಿಸುವಲ್ಲಿ ಸರ್ವರೂ ಸಹಕರಿಸಬೇಕು ಎಂದರು.

ಸಂಪನ್ಮೂಲವ್ಯಕ್ತಿಯಾಗಿದ್ದ ಅಪರ ಜಿಲ್ಲಾ ಸರ್ಕಾರಿ ವಕೀಲರಾದ ಮಹಮ್ಮದ್ ಸುಹಾನ್, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ದೇಶದೆಲ್ಲೆಡೆ ಏಕಕಾಲದಲ್ಲಿ ಕ್ರಮಕೈಗೊಳ್ಳಲು ಸರ್ವೋಚ್ಛ ನ್ಯಾಯಾಲಯ ಆದೇಶ ನೀಡಿದ್ದರ ಹಿನ್ನಲೆ ಈ ಪಿಡುಗು ನಿವಾರಣೆಗೆ ಎಂದರು.

ಕಾಯಿದೆ ಕಾನೂನು ಅನುಷ್ಠಾನಗೊಳಿಸುವಲ್ಲಿ ಸಮಾಜ ಮತ್ತು ಅಧಿಕಾರಿಗಳ ಸಮನ್ವಯ ಮತ್ತು ಸಹಕಾರ ಬೇಕು. ಶಿಕ್ಷಣ ಇಂದು ಹಕ್ಕಾಗಿದ್ದು, ಗರ್ಭದೊಳಗಿನ ಮಗುವಿಂದ ಹಿಡಿದು ಸಾಯುವವರೆಗೆ ನಮ್ಮ ಹಕ್ಕುಗಳ ರಕ್ಷಣೆಗೆ ಕಾನೂನು ರೂಪಿಸಲಾಗಿದೆ. ಮಕ್ಕಳಿಗೆ ಇದರಲ್ಲಿ ಆದ್ಯತೆ. ಈ ನಿಟ್ಟಿನಲ್ಲಿ ಪರಿಹಾರ, ಕಲ್ಯಾಣ ನಿಧಿಗಳನ್ನು ತೆರೆಯಲಾಗಿದ್ದು, ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆ ಬಾಲಕಾರ್ಮಿಕರನ್ನು ಕಂಡಲ್ಲಿ 1098 ಗೆ ಕರೆ ಮಾಡಿ ಎಂದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ. ಪಿ. ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಮಾಲತಿ ದಿನೇಶ್, ವಕೀಲರ ಸಂಘ ಕಾರ್ಯದರ್ಶಿ ಸಂತೋಷ ಹೆಬ್ಬಾರ್ ಇದ್ದರು. ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಯೋಜನಾ ನಿರ್ದೇಶಕ ನಿರೂಪಿಸಿದರು. ಕಾರ್ಮಿಕ ಇಲಾಖೆ ಹಿರಿಯ ಅಧಿಕಾರಿ ರಾಮಮೂರ್ತಿ ಸ್ವಾಗತಿಸಿ, ಕಾರ್ಮಿಕ ನಿರೀಕ್ಷಕ ಜೀವನ್ ಕುಮಾರ್ ವಂದಿಸಿದರು.

ಈ ಸಂದರ್ಭದಲ್ಲಿ ಬಾಲ ಕಾರ್ಮಿಕನಾಗಿದ್ದು, ಬಿಡುಗಡೆಗೊಂಡು ಶಿಕ್ಷಣ ಪಡೆಯುತ್ತಿರುವ ರಾಜು ಎಂಬ ವಿದ್ಯಾರ್ಥಿಯನ್ನು ಗೌರವಿಸಲಾಯಿತು. ಬಾಲ ಕಾರ್ಮಿಕತೆ ತಡೆ ಹಾಗೂ ಬಾಲ ಕಾರ್ಮಿಕರು ಸಿದ್ಧಪಡಿಸಿದ ವಸ್ತುಗಳ ಬಹಿಷ್ಕಾರ ಕುರಿತಂತೆ ಪ್ರತಿಜ್ಞೆ ಬೋಧಿಸಲಾಯಿತು.
ಬಾಲಕಾರ್ಮಿಕ ಪಿಡುಗು ಕುರಿತು ಜಾಗೃತಿ ಮೂಡಿಸಲು ಕಿರುನಾಟಕ ಪ್ರದರ್ಶನವೂ ನಡೆಯಿತು.


Spread the love