ಬಿಜೆಪಿ ಅಲ್ಪಸಂಖ್ಯಾತ ಸಮುದಾಯವನ್ನು ಕಡೆಗಣಿಸಿದೆ. – ಐವನ್ ಡಿಸೋಜಾ

Spread the love

ಬಿಜೆಪಿ ಅಲ್ಪಸಂಖ್ಯಾತ ಸಮುದಾಯವನ್ನು ಕಡೆಗಣಿಸಿದೆ. – ಐವನ್ ಡಿಸೋಜಾ

ಉಡುಪಿ: ಈ ಬಾರಿಯ ಲೋಕಸಭಾ ಚುನಾವಣೆ ಬಿಜೆಪಿಯ ಅಸತ್ಯ ಮತ್ತು ಕಾಂಗ್ರೆಸಿನ ಸತ್ಯದ ನಡುವೆ ನಡೆಯುವ ಯುದ್ದವಾಗಿದ್ದು ಕಳೆದ 5 ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸದೆ ಮೋಸ ಮಾಡಿದೆ ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವಾನ್ ಡಿಸೋಜಾ ಹೇಳಿದರು.

ಅವರು ಶನಿವಾರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, 2013ರ ಚುನಾವಣೆಯಲ್ಲಿ ಮೋದಿಯವರು ದೇಶಕ್ಕೆ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ರಾಜ್ಯದಿಂದ ಸಂಸತ್ತಿಗೆ 17 ಮಂದಿ ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದು ಯಾವುದೇ ರೀತಿಯ ಕೊಡುಗೆಯನ್ನ ರಾಜ್ಯಕ್ಕೆ ಅವರುಗಳು ನೀಡಿಲ್ಲ. ಅವರುಗಳು ಸಂಸತ್ತಿಗೆ ಆಯ್ಕೆಯಾಗಿ ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ನಡೆಯಬೇಕಾಗಿದ್ದು ಅದಕ್ಕೆ ಬಿಜೆಪಿಯ ಯಾವೊಬ್ಬ ಸಂಸದ ಕೂಡ ತಯಾರಿಲ್ಲ ಎಂದರು.

ಕಳೆದ ಚುನಾವಣೆಯಲ್ಲಿ ಮೋದಿಯವರು ಹಲವಾರು ಭರವಸೆಗಳನ್ನು ನೀಡಿದ್ದು ಯಾವುದೇ ಒಂದು ಭರವಸೆ ಈಡೇರಿಸುವ ಪ್ರಯತ್ನ ಮಾಡಿಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವಿದ್ದಾಗ 165 ಭರವಸೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದು ಎಲ್ಲಾ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆಯುವ ಕೆಲಸವನ್ನು ಮಾಡಿದ್ದೇವೆ. ಆದರೆ ಬಿಜೆಪಿ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದು ಯಾವುದೇ ಭರವಸೆ ಈಡೇರಿಸಿಲ್ಲ. ಈ ಕುರಿತು ಬಿಜೆಪಿ ಶ್ವೇತಪತ್ರ ಹೊರಡಿಸಲಿ ಎಂದು ಐವಾನ್ ಆಗ್ರಹಿಸಿದರು.

ಈ ಚುನಾವಣೆ ಅತೀ ಮುಖ್ಯವಾಗಿದ್ದು ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ನಡೆಸುವ ಹೋರಾಟವಾಗಿದೆ. ಪ್ರಜಾಪ್ರಭುತ್ವ ಮಾದರಿಯಲ್ಲಿ ಆಯ್ಕೆಯಾದ ಸಚಿವ ಅನಂತಕುಮಾರ್ ಹೆಗ್ಡೆಯವರು ತಾವು ಆಯ್ಕೆಯಾಗಿರುವುದು ಸಂವಿಧಾನವನ್ನು ಬದಲಿಸಲು ಎಂಬ ಹೇಳಿಕೆ ನೀಡುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ ಎಂದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕೇರಳದ ವಯನಾಡ್ ನಿಂದ ಸ್ಪರ್ಧಿಸಿರುವುದಕ್ಕೆ ಪ್ರಧಾನಿ ಮೋದಿಯವರು ವಯನಾಡ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಇರುವುದರಿಂದ ಸ್ಪರ್ಧಿಸಿದ್ದಾರೆ ಎಂದು ಟೀಕಿಸಿರುವುದು ಖಂಡನೀಯ. ಮೋದಿಯವರು ಈ ಹೇಳಿಕೆ ನೀಡುವುದರ ಮೂಲಕ ಅಲ್ಪಸಂಖ್ಯಾತ ಸಮುದಾಯಕ್ಕೆ ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ. ಈ ದೇಶಕ್ಕೆ ಅಲ್ಪಸಂಖ್ಯಾತರು ನೀಡಿರುವ ಕೊಡುಗೆ ಏನು ಇಲ್ಲವೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿಯನ್ನು ರಾಜ್ಯದ ಜನತೆ ಸ್ವೀಕಾರ ಮಾಡಿದ್ದ ಅದರಂತೆ ಚುನಾವಣೆಯಲ್ಲಿ ಸೀಟು ಹಂಚಿಕೆ ಮಾಡಿಕೊಳ್ಳಲಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಲಾಗಿದ್ದು ಅದರಂತೆ ಸಮರ್ಥ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಅವರು ಸ್ಪರ್ಧಿಸುತ್ತಿದ್ದಾರೆ. ಈ ಬಾರಿಯ ರಾಜ್ಯದಿಂದ 22 ಕ್ಕೂ ಅಧಿಕ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು.

ರಾಜ್ಯದ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮತ್ತು ಪ್ರಸ್ತುತ ಕುಮಾರಸ್ವಾಮಿಯವರ ಸರಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಅತೀ ಹೆಚ್ಚಿನ ಅನುದಾನವನ್ನು ಮೀಸಲಿರಿಸಿದೆ. ರೂ 200 ಕೋಟಿ ಅನುದಾನವನ್ನು ಕ್ರೈಸ್ತ ಅಭಿವೃದ್ಧಿ ನಿಗಮಕ್ಕೆ ಮೀಸಲಿರಿಸುವುದರ ಮೂಲಕ ದೇಶದಲ್ಲಿ ಅತೀ ಹೆಚ್ಚು ಹಣ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಮೀಸಲಿಟ್ಟ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಲ್ಪಸಂಖ್ಯಾತ ಸಮುದಾಯವನ್ನು ಸಂಪೂರ್ಣ ಮರೆತಿದೆ ಎಂದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಲ್ಪಸಂಖ್ಯಾತರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಒಂದೇ ಒಂದು ಸೀಟನ್ನು ಕೂಡ ನೀಡಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಕಾರ್ಯದರ್ಶಿ ಎಮ್ ಎ ಗಫೂರ್, ನಾಯಕರಾದ ಕ್ರಿಸ್ಟನ್ ಡಿ’ಆಲ್ಮೇಡಾ, ಪ್ರಶಾಂತ್ ಜತ್ತನ್ನ, ಇಸ್ಮಾಯಿಲ್ ಅತ್ರಾಡಿ, ನವೀನ್ ಚಂದ್ರ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು ಹಾಗೂ ಇತರರು ಉಪಸ್ಥಿತರಿದ್ದರು.

ಇದೇ ವೇಳೆ ಕಾಂಗ್ರೆಸ್ ನಾಯಕ ಕೃಷ್ಣಮೂರ್ತಿ ಆಚಾರ್ಯ ನೇತೃತ್ವದಲ್ಲಿ ಬಿಜೆಪಿಯ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.


Spread the love