ಬಿಜೆಪಿ ಯುವಕರನ್ನು ಬಾವುಟ ಕೊಟ್ಟು ಕೂಗಾಡಲು ಬಳಸಿದ್ದು ಬಿಟ್ಟರೆ ಉದ್ಯೋಗ ನೀಡಿಲ್ಲ – ಡಾ| ಜಯಮಾಲಾ

Spread the love

ಬಿಜೆಪಿ ಯುವಕರನ್ನು ಬಾವುಟ ಕೊಟ್ಟು ಕೂಗಾಡಲು ಬಳಸಿದ್ದು ಬಿಟ್ಟರೆ ಉದ್ಯೋಗ ನೀಡಿಲ್ಲ – ಡಾ| ಜಯಮಾಲಾ

ಕುಂದಾಪುರ: ಬಿಜೆಪಿಗರು ಯುವಜನತೆಯನ್ನು ಕೇವಲ ಬೀದಿಯಲ್ಲಿ ಬಾವುಟಗಳನ್ನು ಹಿಡಿದು, ಕೂಗಾಡಲಷ್ಟೇ ಬಳಸಿಕೊಳ್ಳುತ್ತಿದೆ ಆದರೆ ಅವರಿಗೆ ಉದ್ಯೋಗ ನೀಡುವುದರ ಕುರಿತು ಮಾತ್ರ ಸಂಪೂರ್ಣ ಮರೆತಿದೆ ಎಂದು ಉಡುಪಿ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಬಿಜೆಪಿ ವಿರುದ್ದ ಕಿಡಿಕಾರಿದರು.

ಅವರು ಮಂಗಳವಾರ ಇಲ್ಲಿನ ಆರ್.ಎನ್ ಶೆಟ್ಟಿ ಮಿನಿ ಹಾಲ್ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ಇಂದು ಯುವಜನತೆ ಇಂದು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಆದರೆ ಯುವಕರ ಆಲೋಚನೆಗೆ ಬಾರದಿರುವ ಅನೇಕ ವಿಚಾರಗಳಿವೆ. ದೇಶದಲ್ಲಿ ಉದ್ಯೋಗ ಸೃಷ್ಠಿಯಗುತ್ತಿಲ್ಲ. ಯುವಕರಿಗೆ ಉದ್ಯೋಗ ಕೊಟ್ಟರೆ ಬಿಜೆಪಿಯ ಬಾವುಟಗಳನ್ನು ಬೀದಿಯಲ್ಲಿ ಹಿಡಿಯುವವರಿರುವುದಿಲ್ಲ. ಯುವಜನತೆ ನೂರಾರು ಕನಸುಗಳನ್ನು ಕಟ್ಟಿಕೊಂಡು ಕಷ್ಟಪಟ್ಟು ವಿದ್ಯಾಭ್ಯಾಸ ನಡೆಸುವುದು ಯಾವುದಾದರೂ ಒಂದು ಕೆಲಸ ಸಿಗಲಿ ಎಂದು. ಆದರೆ ಇಪ್ಪತ್ತೇಳು ಲಕ್ಷ ಕೆಲಸಗಳು ಖಾಲಿ ಇರುವಾಗಲೂ ಉದ್ಯೋಗ ಕೊಡಲು ಸಾಧ್ಯವಾಗಿಲ್ಲ . ಇಪ್ಪತ್ತೇಳು ಲಕ್ಷ ಉದ್ಯೋಗ ಖಾಲಿ ಇದ್ದರೂ ಕೇಂದ್ರ ಸರ್ಕಾರ ಭರ್ತಿ ಮಾಡುತ್ತಿಲ್ಲ ಎಂದು ಉಡುಪಿ ಉಸ್ತುವಾರಿ ಸಚಿವೆ ಜಯಮಾಲಾ ಹೇಳಿದರು.

ಕಳೆದ ಐದು ವರ್ಷದಲ್ಲಿ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಕರಾವಳಿಗೆ ಏನೂ ಕೊಡುಗೆ ಕೊಟ್ಟಿಲ್ಲ. ಹಲವಾರು ಜ್ವಲಂತ ಸಮಸ್ಯೆಗಳು ಈ ಭಾಗದ ಜನರನ್ನು ಕಾಡಿದೆ. ಯಾವ ಸಮಸ್ಯೆಗೂ ಬರಿಹಾರ ಕಂಡುಕೊಳ್ಳದ ಸಂಸದರು ಈ ಭಾಗಕ್ಕೆ ಮತ್ತೆ ಬಂದು ಮತವನ್ನು ಕೇಳುತ್ತಿದ್ದಾರೆ.

ಮಹಿಳೆಯರು, ಕಾರ್ಮಿಕರು, ಮೀನುಗಾರರಿಗೆ ಕೇಂದರದ ಕೊಡುಗೆ ಏನೂ ಇಲ್ಲ. ಕೇಂದ್ರ ಸರ್ಕಾರ ಮೀನುಗಾರರಿಗೆ ಸೀಮೆಎಣ್ಣೆ ಸಬ್ಸಿಡಿ ಕೊಡುವುದನ್ನು ನಿಲ್ಲಿಸಿದರೂ ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ನಿಭಾಯಿಸಿ ಮೀನುಗಾರರಿಗೆ ಸೀಮೆಎಣ್ಣೆ ಸಬ್ಸಿಡಿ ನೀಡುವ ಕೆಲಸಕ್ಕೆ ಮುಂದಾಗಿದೆ. ಕೇಂದ್ರ ಸರ್ಕಾರ ಬಿಟ್ಟು ಹೋದ ಯೋಜನೆಗಳನ್ನು ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಪಾಲನೆ ಮಾಡಿದೆ. ಆಶ್ವಾಸನೆ ನೀಡಿ ಏನೂ ಕೆಲಸ ಮಾಡದ ಬಿಜೆಪಿ ಮತ್ತೆ ಮತ ಕೇಳಲು ಯಾವ ನೈತಿಕತೆ ಇದೆ ಎಂದು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಜಯಮಾಲಾ, ರಾಜ್ಯ ಸರ್ಕಾರ ಕೊಟ್ಟಿರುವ ಯೋಜನೆಗಳ ಮುಖಾಂತರ ಜನತೆಯನ್ನು ಜಾಗೃತಗೊಳಿಸುವ ಕಾಲ ಸನ್ನಿಹಿತವಾಗಿದೆ. ಸುಳ್ಳುಗಾರ ಬಿಜೆಪಿಯ ಮುಖವಾಡವನ್ನು ನಮ್ಮ ಕಾರ್ಯಕರ್ತರೆಲ್ಲರೂ ಬಯಲುಗೊಳಿಸಬೇಕು ಎಂದು ಮನವಿ ಮಾಡಿಕೊಂಡರು.

ಸ್ವಾತಂತ್ರ್ಯ ಬಂದ ಬಳಿಕ 6ಲಕ್ಷದ 64ಸಾವಿರ ಹಳ್ಳಿಗಳಲ್ಲಿ ಕೇವಲ ಹದಿನೆಂಟು ಸಾವಿರ ಮನೆಗಳಿಗೆ ಮಾತ್ರ ವಿದ್ಯುತ್ ನೀಡಲು ಸಾಧ್ಯವಾಗಿಲ್ಲ. ಉಳಿದಂತೆ ಎಲ್ಲಾ ಮನೆಗಳಿಗೂ ಕಾಂಗ್ರೆಸ್ ಸರ್ಕಾರ ವಿದ್ಯುತ್ ಅನ್ನು ನೀಡಿದೆ. ಇದೀಗ ಕೇವಲ 18ಸಾವಿರ ಮನೆಗಳಿಗೆ ವಿದ್ಯುತ್ ಅನ್ನು ನೀಡಿದ ಬಿಜೆಪಿ ಸರ್ಕಾರ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿಕೊಳ್ಳುತ್ತಿದೆ. ಇತಿಹಾಸವನ್ನು ನಮ್ಮ ಮಕ್ಕಳಿಗೆ ಹೇಳಿಕೊಡಬೇಕಿದೆ. ಸಣ್ಣ ಮಕ್ಕಳ ತಲೆಯನ್ನು ಕೆಡಿಸುವ ಕೆಲಸಗಳು ನಡೆಯುತ್ತಿವೆ. ಮುಖವಾಡ ಪಕ್ಷವಾಗಿರುವ ಬಿಜೆಪಿಯ ಮುಖವಾಡವನ್ನು ನಾವೆಲ್ಲರೂ ಈ ಬಾರಿ ಬಯಲುಗೊಳಿಸಬೇಕು ಎಂದು ಜಯಮಾಲಾ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು .

ಜನಗಳ ಮಧ್ಯೆ ಹೋಗದೆ ಕೆಲಸವನ್ನೂ ಮಾಡದೆ ಇರುವವರು ಗೆಲ್ಲುತ್ತೇವೆ ಎಂದು ಘಂಟಾಘೋಷವಾಗಿ ಹೇಳುತ್ತಿರುವಾಗ ಜನಸಾಮಾನ್ಯರ ಮಧ್ಯೆ ಇದ್ದು ಕೆಲಸ ಮಾಡುವ, ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ ಕ್ಷೇತ್ರವನ್ನು ಅಭಿವೃದ್ದಿಪಥದತ್ತ ಕೊಂಡೊಯ್ದ ಈಗಿನ ಕಾಂಗ್ರೆಸ್, ಜೆಡಿಎಸ್ನ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವಾರಾಜ್ ಗೆದ್ದೆ ಗೆಲ್ಲುತ್ತಾರೆ. ಪ್ರಮೋದ್ ಹಿಂದೆ ಮಾಡಿರುವ ಕೆಲಸ ಅವರನ್ನು ಗೆಲ್ಲಿಸಿಕೊಳ್ಳುತ್ತದೆ ಎಂಬ ಆತ್ಮವಿಶ್ವಾಸ ನನ್ನಲ್ಲಿದೆ ಎಂದರು.

ಒಬ್ಬ ಅಭ್ಯರ್ಥಿಯನ್ನು ಸೋಲಿಸಬೇಕು ಎಂದು ಕಾರ್ಯಕರ್ತರು ಮನಸ್ಸು ಮಾಡಿದರೆ ಆ ಅಭ್ಯರ್ಥಿಯನ್ನು ಯಾರಿಂದಲೂ ಗೆಲ್ಲಿಸಲು ಸಾಧ್ಯವಿಲ್ಲ. ಕಾರ್ಯಕರ್ತರೇ ನನಗೆ ಆಸ್ತಿ. ನೀವೆಲ್ಲ ಒಗ್ಗೂಡಿ ಕೆಲಸ ಮಾಡಿದರೆ ಮಾತ್ರ ನನಗೆ ಗೆಲುವು ಸಾಧ್ಯ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.

ನಮ್ಮದು ಹಾಲುಜೇನಿನ ಮೈತ್ರಿ. ನಾನು ಕಾಂಗ್ರೆಸ್ನ ಅಭ್ಯರ್ಥಿಯಾಗಿ, ಜೆಡಿಎಸ್ ಚಿಹ್ನೆಯಡಿಯಲ್ಲಿ ಕಾಂಗ್ರೆಸ್-ಜೆಡಿಎಸ್ನ ಮೈತ್ರಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.

ಜನವಿರೋಧಿ ಮರಳು ನೀತಿಯನ್ನು ಬದಲಿಸುವ ಅಧಿಕಾರ ಸಂಸದೆ ಶೋಭಾ ಕರಂದ್ಲಾಜೆಯವರಿಗಿತ್ತು. ಐದು ವರ್ಷದಲ್ಲಿ ಯಾವುದೇ ಕೆಲಸ ಮಾಡಿಲ್ಲ. ಇವತ್ತು ಮರಳು ಸಮಸ್ಯೆಗೆ ಕೇಂದ್ರ ಸರ್ಕಾರ ಹಾಗೂ ಶೋಭಾ ಕರಂದ್ಲಾಜೆಯವರೇ ನೇರ ಹೊಣೆ. ಏಳು ಜನ ಮೀನುಗಾರರು ನಾಪತ್ತೆಯಾಗಿ ನೂರು ದಿನ ಕಳೆಯುತ್ತಾ ಬಂತು. 50ಸಾವಿರ ಮೀನುಗಾರರು ರಸ್ತೆಗೆ ಬಂದು ಪ್ರತಿಭಟನೆ ಮಾಡಿದರೂ ಶೋಭಾ ಮಾತನಾಡಲಿಲ್ಲ. ನಿರ್ಮಲಾ ಸೀತಾರಾಮನ್ ಅವರು ಮೀನುಗಾರರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳುವ ಕೆಲಸಕ್ಕೂ ಮುಂದಾಗಿಲ್ಲ. ಆದರೆ ಮೊನ್ನೆಯಷ್ಟೆ ಶೋಭಾ ಕರಂದ್ಲಾಜೆಯವರ ನಾಮಪತ್ರ ಸಲ್ಲಿಸುವ ಕಾರ್ಯಕ್ರಮಕ್ಕೆ ಬಂದಾಗ ಇಬ್ಬರೂ ಮೀನುಗಾರರ ಮನೆಗೆ ಹೋಗಿ ಸಾಂತ್ವಾನ ಹೇಳಿದ್ದಾರೆ. ಚುನಾವಣೆ ಬಂದಾಗ ಮಾತ್ರ ಇವರಿಗೆ ಮೀನುಗಾರರ ನೆನಪಾಗುತ್ತದೆ ಎಂದು ಪ್ರಮೋದ್ ಮಧ್ವರಾಜ್ ಆಕ್ರೋಶ ವ್ಯಕ್ತಪಡಿಸಿದರು.


Spread the love