ಬಿಬಿಎಂಪಿ ಚುಕ್ಕಾಣಿ ವಿಚಾರ: ಆರ್ ಅಶೋಕ್ ಗೆ ಆರ್ ಎಸ್ ಎಸ್ ತರಾಟೆ

Spread the love

ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ಗರಿಷ್ಟ ಸ್ಥಾನಗಳನ್ನು ಹೊಂದಿದ್ದರೂ ಆಡಳಿತ ಹಿಡಿಯಲು ಒದ್ದಾಡುತ್ತಿರುವ ಬಿಜೆಪಿ ಪರಿಸ್ಥಿತಿ ಕುರಿತಂತೆ ಆರ್ ಎಸ್ ಎಸ್ ತೀವ್ರ ಕಿಡಿಕಾರಿದೆ.

ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಯ ಮುಂದಾಳತ್ವ ವಹಿಸಿದ್ದ ಮುಖಂಡ ಆರ್ ಅಶೋಕ್ ಅವರಿಗೆ ಇಂದು ಬೆಳಗ್ಗೆ ಕರೆ ಮಾಡಿದ ಆರ್ ಎಸ್ ಎಸ್ ಮುಖಂಡರು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಚುನಾವಣೆಯಲ್ಲಿ ಗರಿಷ್ಠ ಸ್ಥಾನಗಳಿದ್ದರೂ, ಆಡಳಿತ ಹಿಡಿಯಲು ಒದ್ದಾಡಬೇಕಾದ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣ ಯಾರು ಎಂದು ಮುಖಂಡರು ಪ್ರಶ್ನಿಸಿದ್ದಾರೆ.

ಅಲ್ಲದೆ ಚುನಾವಣೆಯ ಗೆಲುವಿನ ಬಳಿಕ ಮೈಮರೆತದ್ದು ಪಕ್ಷಕ್ಕೆ ಮುಳುವಾಗಿದ್ದು, ಮನೆ ಬಾಗಿಲಿಗೆ ಬಂದ ಪಕ್ಷೇತರರನ್ನು ಕಡೆಗಣಿಸಲಾಗಿತ್ತು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಜೆಡಿಎಸ್ ಇದೀಗ ಆಟವಾಡುತ್ತಿದೆ. ಪಕ್ಷೇತರರನ್ನು ವಿಶ್ವಾಸದಲ್ಲಿಟ್ಟುಕೊಂಡಿದ್ದರೆ ಬಿಜೆಪಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಆರ್ ಎಸ್ ಎಸ್ ಮುಖಂಡರು ಆರ್ ಅಶೋಕ್ ಅವರಿಗೆ ಹೇಳಿದ್ದಾರೆ.

ಇಂದು ದೇವೇಗೌಡ-ಪರಮೇಶ್ವರ್ ಭೇಟಿ..?

ಇದೇ ವೇಳೆ ಇಂದು ಜೆಡಿಎಸ್ ವರಿಷ್ಠ ಎಚ್ ದೇವೇಗೌಡ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಅವರು ಪರಸ್ಪರ ಭೇಟಿಯಾಗುವ ಸಂಭವವಿದ್ದು, ಭೇಟಿ ಬಳಿಕ ಕಾಂಗ್ರೆಸ್ ಮೈತ್ರಿ ಕುರಿತು ಅಧಿಕೃತ ಹೇಳಿಕ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.


Spread the love