ಬೆಂಗಳೂರಿನಲ್ಲಿ ಸಿಎಎ ವಿರೋಧ ಪ್ರತಿಭಟನೆ ಸಭೆಯಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ಯುವತಿ

ಬೆಂಗಳೂರಿನಲ್ಲಿ ಸಿಎಎ ವಿರೋಧ ಪ್ರತಿಭಟನೆ ಸಭೆಯಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ಯುವತಿ

ಬೆಂಗಳೂರು (News18): ಎಐಎಂಎಂ ಪಕ್ಷದ ನಾಯಕ ಅಸ್ಸಾದುದ್ದೀನ್ ಓವೈಸಿ ಭಾಗವಹಿಸಿದ್ದ ಪ್ರತಿಭಟನಾ ಸಭೆಯ ವೇದಿಕೆ ಮೇಲೆಯೇ ಯುವತಿಯೊಬ್ಬಳು ಪಾಕಿಸ್ತಾನದ ಜಿಂದಾಬಾದ್ ಎಂದು ಘೋಷಣೆ ಕೂಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೂಡಲೇ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಯುನೈಟೆಡ್ ಫ್ರಂಟ್ ಸಂಘಟನೆ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಆಯೋಜಿಸಿತ್ತು. ಈ ಪ್ರತಿಭಟನಾ ಸಭೆಯಲ್ಲಿ ಅಸಾದುದ್ದೀನ್ ಓವೈಸಿ ಪಾಲ್ಗೊಂಡಿದ್ದರು. ಪ್ರತಿಭಟನೆ ಆರಂಭವಾಗುತ್ತಿದ್ದಂತೆ ವೇದಿಕೆ ಮೇಲೆ ಬಂದ ಅಮೂಲ್ಯ ಎಂಬ ಯುವತಿ ಇದ್ದಕ್ಕಿದ್ದ ಹಾಗೆ ಪಾಕಿಸ್ತಾನ ಜಿಂದಾಬಾದ್ ಎಂದು ಎರಡು ಬಾರಿ ಘೋಷಣೆ ಕೂಗಿದ್ದಾರೆ. ಇದರಿಂದ ಕಕ್ಕಾಬಿಕ್ಕಿಯಾದ ಓವೈಸಿ, ಒಮ್ಮೆಲೆ ಯುವತಿಯಿಂದ ಮೈಕ್​ ಕಸಿದುಕೊಂಡು, ಪಾಕಿಸ್ತಾನ ಪರ ಘೋಷಣೆ ಕೂಗುವುದನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

ಪ್ರತಿಭಟನೆ ಆಯೋಜಕರು ಮತ್ತು ಓವೈಸಿ ಅವರು ಯುವತಿಯ ಘೋಷಣೆಯನ್ನು ತಡೆದಿದ್ದಾರೆ. ಬಳಿಕ ಆಕೆ ಮಾಡಿದ್ದು ತಪ್ಪು. ಇದು ಪಾಕಿಸ್ತಾನ ಪರವಾಗಿ ನಡೆಸಿದ ರ್ಯಾಲಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಯುವತಿ ಘೋಷಣೆ ಕೂಗುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ವೇದಿಕೆ ಮೇಲೆ ಬಂದು ಯುವತಿಯನ್ನು ವಶಕ್ಕೆ ಪಡೆದು, ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಫ್ರೀಡಂ ಪಾರ್ಕ್ ಬಳಿಗೆ ಹೆಚ್ಚುವರಿ ಆಯುಕ್ತ ಸೌಮೆಂದು‌ ಮುಖರ್ಜಿ ಆಗಮಿಸಿ, ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.