ಬೆಂಗಳೂರು: ‘ಅಯೋಗ್ಯ ಎನ್ನಲು ಜೋಶಿಗೆಷ್ಟು ಧೈರ್ಯ?’ : ಗೃಹ ಸಚಿವ ಕೆ.ಜೆ. ಜಾರ್ಜ್‌ ಕಿಡಿ

Spread the love

ಬೆಂಗಳೂರು: ‘ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ನನ್ನಂಥವರನ್ನು ಕಂಡರೆ ಬಿಜೆಪಿಯವರಿಗೆ ಕಣ್ಣುರಿ. ರಾಜ್ಯದ ಗೃಹ ಸಚಿವ ಅಯೋಗ್ಯ ಎಂದು ಹೇಳಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಅವರಿಗೆ ಅದೆಷ್ಟು ಧೈರ್ಯ’ ಎಂದು ಕೆ.ಜೆ. ಜಾರ್ಜ್‌ ಕಿಡಿಕಾರಿದರು.

15ko3

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋಮುಗಲಭೆಗಳ ಸಂದರ್ಭದಲ್ಲಿ ದಾಖಲಾದ ಪ್ರಕರಣಗಳನ್ನು ಹಿಂಪಡೆಯಲು ತೀರ್ಮಾನಿಸುವ ಮೂಲಕ ನಮ್ಮ ಸರ್ಕಾರ ಯಾವುದೇ ಸಮುದಾಯವನ್ನು ತುಷ್ಟೀಕರಿಸುವ ಯತ್ನ ನಡೆಸಿಲ್ಲ’ ಎಂದರು.
‘ಕರ್ನಾಟಕ ಫೋರಂ ಫಾರ್‌ ಡಿಗ್ನಿಟಿ (ಕೆಎಫ್‌ಡಿ) ಮತ್ತು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಗಳ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಮೊಕದ್ದಮೆ ಹಿಂಪಡೆಯುವುದು ರಾಜ್ಯ ಸರ್ಕಾರ ಎಸಗಿದ ರಾಷ್ಟ್ರದ್ರೋಹದ ಕೆಲಸ, ಜಾರ್ಜ್‌ ಅಯೋಗ್ಯ ಗೃಹ ಸಚಿವ’ ಎಂದು ಜೋಶಿ ಆರೋಪಿಸಿದ್ದರು.

‘ಜೋಶಿಯವರು ನನ್ನ ಮೇಲೆ ವೈಯಕ್ತಿಕವಾಗಿ ಆರೋಪ ಮಾಡಲಿ. ಆದರೆ ನಾನಿರುವ ಸಾಂವಿಧಾನಿಕ ಹುದ್ದೆಯ ಬಗ್ಗೆ ಅವರು ಲಘುವಾಗಿ ಮಾತನಾಡಬಾರದು. ಬಿಜೆಪಿ ಅಧಿಕಾರಾವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಒಬ್ಬರು ಜೈಲಿಗೆ ಹೋಗಿದ್ದರಲ್ಲವೇ? ಬಿಜೆಪಿಯವರೆಲ್ಲರೂ ಯೋಗ್ಯರೇ?’ ಎಂದು ಜಾರ್ಜ್‌ ಪ್ರಶ್ನಿಸಿದರು.

ಪ್ರಹ್ಲಾದ ಜೋಶಿ ಸಹೋದರನ ವಿರುದ್ಧ ಬ್ಯಾಂಕಿಗೆ ವಂಚನೆ ಮಾಡಿದ ಆರೋಪ ಇತ್ತು. ಸಿಬಿಐ ತನಿಖೆ ನಡೆಸುತ್ತಿತ್ತು. ಆದರೆ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಆ ಪ್ರಕರಣ ಬಿದ್ದುಹೋಯಿತು ಎಂದು ಜಾರ್ಜ್‌ ನೆನಪಿಸಿದರು.

 


Spread the love