ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ದೂರು ದಾಖಲು

Spread the love

ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ದೂರು ದಾಖಲು

ಬೆಂಗಳೂರು : ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿರುವ ತೇಜಸ್ವಿ ಸೂರ್ಯ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಬಿ.ಪುಷ್ಪಾ ಅಮರನಾಥ್ ನೇತೃತ್ವದ ನಿಯೋಗ ಶುಕ್ರವಾರ ದೂರು ದಾಖಲು ಮಾಡಿದೆ.

ತೇಜಸ್ವಿ ಸೂರ್ಯ ವಿರುದ್ಧ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಡಾ.ಸೋಮ್ ದತ್ತ ತನಗಾದ ಮಾನಸಿಕ, ದೈಹಿಕ ಕಿರುಕುಳದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮಾ.27ರಂದು ತಮ್ಮ ಟ್ವಿಟರ್ ಖಾತೆಯಿಂದ ಸರಣಿಯಾಗಿ ತೇಜಸ್ವಿ ಸೂರ್ಯನಿಂದ ತನಗಾದ ದೌರ್ಜನ್ಯ, ಮಾನಸಿಕ, ದೈಹಿಕ ಹಲ್ಲೆಯ ಬಗ್ಗೆ ಸರಣಿಯಾಗಿ ಬರೆದುಕೊಂಡಿದ್ದಾರೆ ಎಂದು ಪುಷ್ಪಾ ಅಮರನಾಥ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ, ತೇಜಸ್ವಿ ಸೂರ್ಯ ಅನೇಕ ಯುವತಿಯರಿಗೆ ಈ ರೀತಿಯ ಕಿರುಕುಳ ವಂಚನೆ ಮಾಡಿದ್ದಾನೆ ಎಂದು ಸೋಮ್ ದತ್ತ ಗಂಭೀರ ಆರೋಪ ಮಾಡಿದ್ದಾರೆ. ಸ್ವಭಾವತಃ ಮಹಿಳಾ ವಿರೋಧಿ ನಿಲುವು ಹೊಂದಿರುವ ತೇಜಸ್ವಿ ಸೂರ್ಯ, ತನ್ನ ಟ್ವಿಟರ್ ಖಾತೆಯಲ್ಲಿ ಮಹಿಳಾ ಮೀಸಲಾತಿಯ ಕುರಿತು ತುಚ್ಛವಾಗಿ ಬರೆದು ವಿರೋಧಿಸಿದ್ದಾನೆ ಎಂದು ಅವರು ದೂರಿದ್ದಾರೆ.

ತೇಜಸ್ವಿ ಸೂರ್ಯನ ಈ ಸ್ತ್ರೀ ಕಂಟಕ ವ್ಯಕ್ತಿತ್ವದಿಂದ ಆತನನ್ನು ನಂಬಿದ ಯುವತಿ ಸೋಮ್‌ದತ್ತಾ ಮಾನಸಿಕ, ದೈಹಿಕ ದೌರ್ಜನ್ಯವೆಸಗಿರುವುದನ್ನು ಸ್ವತಃ ಆಕೆ ಬಹಿರಂಗಪಡಿಸಿದ್ದಾರೆ. ಅವರಿಗಾದ ಕಹಿ ಘಟನೆಯನ್ನು ಟ್ವಿಟರ್‌ನಲ್ಲಿ ಬರೆದ ನಂತರ ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ ಎಂದು ಪುಷ್ಪಾ ಅಮರನಾಥ್ ತಿಳಿಸಿದ್ದಾರೆ.

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಭಾವಿ ರಾಜಕಾರಣಿಗಳ, ಬಸವನಗುಡಿಯ ಶಾಸಕ ರವಿ ಸುಬ್ರಹ್ಮಣ್ಯ ಸಂಬಂಧಿಯಾದ ತೇಜಸ್ವಿ ಸೂರ್ಯ ತನ್ನ ಪ್ರಭಾವ ಬೀರಿ ಸೋಮ್ ದತ್ತಾ ಅವರಿಗೆ ಒತ್ತಡ ತಂದು ಮತ್ತಷ್ಟು ಸಂಕಷ್ಟಕ್ಕೀಡು ಮಾಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎಂದು ಅವರು ಹೇಳಿದ್ದಾರೆ.
ಸೋಮ್ ದತ್ತಾ ಈಗಾಗಲೇ ತೇಜಸ್ವಿ ಸೂರ್ಯನ ಪ್ರಭಾವಕ್ಕೆ ಹೆದರಿ ತಮ್ಮ ಟ್ವಿಟರ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ಇದನ್ನು ಗಮನಿಸಿದರೂ ಸೋಮ್ ದತ್ತಾ ಅವರ ಜೀವಕ್ಕೆ ಅಪಾಯವಿರುವುದು ಸ್ಪಷ್ಟ. ತೇಜಸ್ವಿ ಸೂರ್ಯನಿಂದ ನೊಂದಿರುವ ಅಸಹಾಯಕ ಯುವತಿ, ಸೋಮ್‌ದತ್ತಾಗೆ ಮಹಿಳಾ ಆಯೋಗ ಅಭಯ ನೀಡಬೇಕು ಎಂದು ಪುಷ್ಪಾ ಅಮರನಾಥ್ ಮನವಿ ಮಾಡಿದ್ದಾರೆ.

ಮಾಧ್ಯಮಗಳ ವರದಿ ಮತ್ತು ಸೋಮ್ ದತ್ತಾ ಟ್ವಿಟರ್‌ನಲ್ಲಿ ಬಹಿರಂಗಪಡಿಸಿದ ತಮಗಾದ ವಂಚನೆ, ದೈಹಿಕ ಹಲ್ಲೆ ದೌರ್ಜನ್ಯದ ಕಿರುಕುಳದ ಗಂಭೀರ ವಿಚಾರಗಳನ್ನು ಪರಿಗಣಿಸಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ತ್ರೀ ಪೀಡಕ ತೇಜಸ್ವಿ ಸೂರ್ಯ ವಿರುದ್ಧ ಮಹಿಳಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು. ಮತ್ತು ನೊಂದ ಮಹಿಳೆ ಸೋಮದತ್ತಾಗೆ ರಕ್ಷಣೆ ನೀಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.

ನಿಯೋಗದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಮಂಜುಳಾ ನಾಯ್ಡು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Spread the love