ಬೆಂಗಳೂರು: ವೃದ್ಧೆಯನ್ನು ಬರ್ಬರವಾಗಿ ಹತ್ಯೆ ಮಾಡಿ ಶವ ಡ್ರಮ್‌ ನಲ್ಲಿಟ್ಟಿದ್ದ ಕಿರಾತಕನ ಬಂಧನ

Spread the love

ಬೆಂಗಳೂರು: ವೃದ್ಧೆಯನ್ನು ಬರ್ಬರವಾಗಿ ಹತ್ಯೆ ಮಾಡಿ ಶವ ಡ್ರಮ್‌ ನಲ್ಲಿಟ್ಟಿದ್ದ ಕಿರಾತಕನ ಬಂಧನ

ಬೆಂಗಳೂರು: 70 ವರ್ಷದ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ, ವೃದ್ಧೆಯ ಶವವನ್ನು ತುಂಡುತುಂಡಾಗಿ ಕತ್ತರಿಸಿ ಡ್ರಮ್‌ನಲ್ಲಿ ತುಂಬಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಶನಿವಾರ ನಡೆದ ಭೀಕರ ಕೊಲೆಯ ಆರೋಪಿಯನ್ನು ದಿನೇಶ್(40) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವಿಚಾರಣೆ ವೇಳೆ ಆರೋಪಿಯು ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದು, ತಾನು ಸಾಲದ ಸುಳಿಯಲ್ಲಿ ಸಿಲುಕಿದ್ದರಿಂದ ಚಿನ್ನಾಭರಣ ದೋಚಲು ವೃದ್ಧೆಯನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾನೆ.

ವೃದ್ಧೆಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗುವ ನೆಪದಲ್ಲಿ ಆಕೆಯನ್ನು ತನ್ನ ಮನೆಗೆ ಕರೆದೊಯ್ದು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಮಹಿಳೆಯನ್ನು ಕೊಂದ ನಂತರ, ವೃದ್ಧೆಯ ಎಲ್ಲಾ ಚಿನ್ನಾಭರಣಗಳನ್ನು ಆಭರಣ ವ್ಯಾಪಾರಿ ಬಳಿಗೆ ತೆಗೆದುಕೊಂಡು ಹೋಗಿದ್ದಾನೆ. ಆದರೆ ಒಂದು ಜೊತೆ ಕಿವಿಯೋಲೆ ಹೊರತುಪಡಿಸಿ ಉಳಿದ ಎಲ್ಲವೂ ‘ರೋಲ್ಡ್ ಗೋಲ್ಡ್’ (ಚಿನ್ನ ಲೇಪಿತ) ಎಂದು ತಿಳಿದು ಬಂದಿದೆ. ತನ್ನ ಅಪರಾಧವನ್ನು ಮರೆಮಾಚಲು ವೃದ್ಧೆಯ ದೇಹವನ್ನು ತುಂಡುತುಂಡಾಗಿ ಕತ್ತರಿಸಿ, ಮನೆಯ ಸಮೀಪವಿರುವ ಖಾಲಿ ಜಾಗದಲ್ಲಿದ್ದ ಡ್ರಮ್‌ನೊಳಗೆ ತುಂಬಿದ್ದಾನೆ” ಎಂದು ಅಧಿಕಾರಿ ಹೇಳಿದ್ದಾರೆ.

ಮೃತ ಮಹಿಳೆ ಸುಶೀಲಮ್ಮ ಮತ್ತು ಅವರ ಮಗಳು ಕೆಆರ್ ಪುರಂನ ನಿಸರ್ಗ ಲೇಔಟ್‌ನಲ್ಲಿ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು.

ಸುಶೀಲಮ್ಮ ಆಗಾಗ್ಗೆ ದೇವಸ್ಥಾನಗಳಿಗೆ ಹೋಗುತ್ತಿದ್ದರು ಮತ್ತು ಕೆಲವೊಮ್ಮೆ ಮಗನ ಮನೆಗೆ ಹೋಗುತ್ತಿದ್ದರು. ಆದರೆ ಶನಿವಾರ ರಾತ್ರಿ ತಾಯಿ ಮನೆಗೆ ಬಾರದೆ ಇದ್ದಾಗ ಮಗಳು ಆರಂಭದಲ್ಲಿ ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳದಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ ನಂತರ ಭಾನುವಾರ ಸಂಜೆ ಮನೆಯ ಸಮೀಪವಿರುವ ಖಾಲಿ ನಿವೇಶನದಲ್ಲಿ ಶವ ಪತ್ತೆಯಾಗಿದೆ.


Spread the love