ಬೆತ್ತಲೆ ಪ್ರಕರಣವನ್ನು ಮರುಕಳಿಸಲು ಹೊರಟಿರುವವರು ಗೋಮಾಂಸ ರಫ್ತು ನಿಲ್ಲಿಸಲಿ – ಅನ್ಸಾರ್ ಅಹಮ್ಮದ್

ಬೆತ್ತಲೆ ಪ್ರಕರಣವನ್ನು ಮರುಕಳಿಸಲು ಹೊರಟಿರುವವರು ಗೋಮಾಂಸ ರಫ್ತು ನಿಲ್ಲಿಸಲಿ – ಅನ್ಸಾರ್ ಅಹಮ್ಮದ್

ಉಡುಪಿ: ಬೆತ್ತಲೆ ಪ್ರಕರಣವನ್ನು ಮರುಕಳಿಸಲು ಹೊರಟಿರುವವರು ಮೊದಲು ಕೇಂದ್ರ ಸರ್ಕಾರದ ಗೋಮಾಂಸ ರಫ್ತಿನ ಹಿಂದಿರುವ  ಅಸಲಿಯತ್ತನ್ನು ಬೆತ್ತಲೆಗೊಳಿಸಲಿ ಎಂದು ಸಾಮಾಜಿಕ ಹೋರಾಟಗಾರ ಅನ್ಸಾರ್ ಅಹಮ್ಮದ್ ಒತ್ತಾಯಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ಯಶ್ ಪಾಲ್ ಸುವರ್ಣರವರು ಗೋಕಳ್ಳತನ ಪ್ರಕರಣವನ್ನು ಹತೋಟಿಗೆ ತರಲು ಆಗ್ರಹಿಸುವ ಭರದಲ್ಲಿ ಸಮಾಜದ ಶಾಂತಿ ಕದಡುವ ರೀತಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರುವುದು ಖಂಡನೀಯ. ಗೋಕಳ್ಳತನವನ್ನು ಯಾವ ಜಾತಿ ಧರ್ಮದವರೂ ಸಮರ್ಥಿಸಿಕೊಳ್ಳುತ್ತಿಲ್ಲ.

ಯಶ್ ಪಾಲ್ ಸುವರ್ಣದವರು ಭಾರತದಿಂದ ವಿದೇಶಕ್ಕೆ ರಫ್ತಾಗುತ್ತಿರುವ ಗೋಮಾಂಸದ ಬಗ್ಗೆ ಚಕಾರವೆತ್ತದೆ ಸ್ಥಳೀಯವಾಗಿ ನಡೆಯುತ್ತಿರುವ ಗೋಸಾಗಾಟ ಗೋಹತ್ಯೆಯ ಬಗ್ಗೆ ಮಾತನಾಡುತ್ತಿರುವುದು ಅವರ ದ್ವಿಮುಖ ನೀತಿಯನ್ನು ಎತ್ತಿ ತೋರಿಸುತ್ತಿದೆ.

 ಗೋಹತ್ಯೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಹೇಳಿಕೆ ನೀಡುವ ಪ್ರತಿಭಟನೆಯನ್ನು ನಡೆಸುವ ಸಂಘ ಸಂಸ್ಥೆಗಳು ಸಂಘಟನೆಗಳು ತಾಕತ್ತಿದ್ದರೆ ವಿದೇಶಕ್ಕೆ ಗೋಮಾಂಸ ರಫ್ತು ಆಗುತ್ತಿರುವುದನ್ನು ಮೊದಲು ಪ್ರಶ್ನಿಸಲಿ ಎಂದು ಸಾಮಾಜಿಕ ಹೋರಾಟಗಾರರಾದ ಅನ್ಸಾರ್ ಅಹಮದ್ ರವರು ಸವಾಲೆಸೆದಿದ್ದಾರೆ.