ಬೆಳ್ತಂಗಡಿ : ಎಲ್ಲ ವೈದ್ಯಕೀಯ ಪದ್ಧತಿ ಚಿಕಿತ್ಸೆಗಳು ಒಂದೇ ಕಡೆ ದೊರೆಯಲಿ: ಅರವಿಂದ ಕೇಜ್ರಿವಾಲ್

Spread the love

ಬೆಳ್ತಂಗಡಿ : ಒಂದೇ ಕಡೆ ಎಲ್ಲ ರೀತಿಯ ವೈದ್ಯ ಪದ್ಧ್ದತಿಗಳಲ್ಲಿ ಚಿಕಿತ್ಸೆಗೆ ಅವಕಾಶ ಸಿಗುವಂತಹ ಆಸ್ಪತ್ರೆಗಳು ಇಂದಿನ ಅಗತ್ಯವಾಗಿದೆ. ರೋಗಿಗೆ ಯಾವುದು ಸೂಕ್ತವೋ ಅದೇ ಪದ್ಧ್ದತಿಯಲ್ಲಿ ಅವರಿಗೆ ಚಿಕಿತ್ಸೆ ಸಿಗುವಂತಾಗಬೇಕು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.

07-kejr0-006 04-kejr0-003 03-kejr0-002 09-kejr0-008 11-kejr0-010 12-kejr0-011 08-kejriwal-dharmastala-20150909-007 09-kejriwal-dharmastala-20150909-008 10-kejriwal-dharmastala-20150909-009 05-kejriwal-dharmastala-20150909-004 06-kejriwal-dharmastala-20150909-005 07-kejriwal-dharmastala-20150909-006 02-kejriwal-dharmastala-20150909-001 03-kejriwal-dharmastala-20150909-002 04-kejriwal-dharmastala-20150909-003 01-kejriwal-dharmastala-20150909

ಅವರು ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಪದವಿಪ್ರದಾನ ಸಮಾರಂಭದಲ್ಲಿ ಪದವಿ ಪ್ರದಾನ ನೆರವೇರಿಸಿ ಮಾತನಾಡಿದರು. ವಿವಿಧ ವೈದ್ಯ ಪದ್ಧ್ದತಿಗಳು ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುತ್ತಿಲ್ಲ ಇದು ಬದಲಾಗಬೇಕು. ಈ ನಿಟ್ಟಿನಲ್ಲಿ ಸರಕಾರ ಹಾಗೂ ಖಾಸಗಿ ಸಂಸ್ಥೆಗಳು ಪ್ರಯತ್ನಿಸಬೇಕಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿಗಳು ಇಂತಹ ಪ್ರಯತ್ನ ನಡೆಸುವುದಾದರೆ ಅದಕ್ಕೆ ದಿಲ್ಲಿ ಸರಕಾರ ಬೆಂಬಲ ನೀಡುವುದಾಗಿ ತಿಳಿಸಿದರು.

ಆಧುನಿಕತೆಯ ದಿನಗಳಲ್ಲಿ ಆಹಾರ ಪದ್ಧ್ದತಿಯಿಂದ, ವೇಗದ ಜೀವನ ಶೈಲಿಯಿಂದಾಗಿ ಆರೋಗ್ಯದಲ್ಲಿ ನಿರಂತರ ಏರುಪೇರಾಗುತ್ತಿರುವುದು ಸಾಮಾನ್ಯವಾಗಿದೆ. ಭಾರತೀಯ ವೈದ್ಯಪದ್ಧತಿಗಳು ಇದಕ್ಕೆ ಪರಿಹಾರವೊದಗಿಸಲು ಶಕ್ತವಾಗಿದೆ. ಆದರೆ ಅದರ ಅರಿವು ಜನಸಾಮಾನ್ಯರಿಗೆ ಇಲ್ಲವಾಗಿದ್ದು, ಈ ಬಗ್ಗೆ ಜನರಿಗೆ ಮಾಹಿತಿ ನೀಡುವ ಕಾರ್ಯನಡೆಯಬೇಕಾಗಿದೆ. ಪ್ರಕೃತಿ ಚಿಕಿತ್ಸೆ ಒಂದು ಅದ್ಭುತವಾದ ಅನುಭವವನ್ನು ನೀಡುತ್ತದೆ ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಂಡರು. ನಿಮ್ಮ ಆದಾಯದಲ್ಲಿ ಸ್ವಲ್ಪಭಾಗವನ್ನು ಸಮಾಜ ಸೇವೆಗಾಗಿ ವಿನಿಯೋಗಿಸಿ. ಇದರಿಂದಾಗಿ ಅಹಂ ಕಡಿಮೆಯಾಗಿ ಮಾನಸಿಕ ಶಾಂತಿ ನೆಮ್ಮದಿ ಸಿಗುತ್ತದೆ. ಸಮಯ ದಾನ ಶ್ರೇಷ್ಠ ದಾನವಾಗಿದೆ. ಆತ್ಮಸಾಕ್ಷಿಗೆ ಅನುಗುಣವಾಗಿ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ಎಂದು ಅವರು ಯುವ ವೈದ್ಯರುಗಳಿಗೆ ಕರೆ ನೀಡಿದರು. ಯುವಕರು ಪ್ರಜಾಪ್ರಭುತ್ವದ ಉಳಿವಿಗಾಗಿ ಸಮಯ ಕೊಡುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.

ಪ್ರಮಾಣವಚನ ಬೋಧಿಸಿ ಮಾತನಾಡಿದ ರಾಜ್ಯ ಸರಕಾರದ ಆರೋಗ್ಯ ಸಚಿವರಾದ ಯು.ಟಿ ಖಾದರ್, ವೈದ್ಯರು ಜನರೊಂದಿಗೆ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡು ಜನರಿಗೆ ಒಳಿತನ್ನು ಮಾಡಬೇಕು ಎಂಬ ಮನೋಭಾವದೊಂದಿಗೆ ಕಾರ್ಯ ನಿರ್ವಹಿಸಿದಾಗ ಯಶಸ್ಸನ್ನು ಪಡೆಯಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಪ್ರಕೃತಿ ಚಿಕಿತ್ಸಾ ಪದ್ಧತಿಗೆ ಭಾರತದಲ್ಲಿ ಹಾಗೂ ಜಗತ್ತಿನೆಲ್ಲ್ಲೆಡೆ ಮಾನ್ಯತೆ ದೊರಕುತ್ತಿದ್ದು, ಇನ್ನೂ ಹೆಚ್ಚು ಅವಕಾಶಗಳು ಮುಂದಿನ ದಿನಗಳಲ್ಲಿ ಲಭಿಸಲಿದೆ. ರಾಜ್ಯ ಸರಕಾರವು ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ಹೆಚ್ಚು ಬೆಂಬಲ ಪ್ರೋತ್ಸಾಹ ನೀಡುತ್ತಿದೆ. ಪ್ರವಾಸೋದ್ಯಮ ಮತ್ತು ಆಯುಷ್ ಅನ್ನು ಒಟ್ಟಿಗೆ ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ ರಾಜ್ಯದಲ್ಲಿಯೂ ಎಲ್ಲಾ ಚಿಕಿತ್ಸಾ ವಿಧಾನಗಳನ್ನು ಒಂದೆಡೆ ದೊರಕುವಂತೆ ಮಾಡುವ ಪ್ರಯತ್ನ ನಡೆಸುವುದಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪ್ರಕೃತಿ ಚಿಕಿತ್ಸೆ ಔಷಧವಿಲ್ಲದ ಚಿಕಿತ್ಸಾವಿಧಾನವಾಗಿದ್ದು, ರೋಗಿಯ ಸಹಕಾರವೂ ಇದರಲ್ಲಿ ಮುಖ್ಯವಾಗುತ್ತದೆ. ಪ್ರಕೃತಿದತ್ತವಾದ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ಬಹುತೇಕ ರೋಗಗಳಿಗೆ ಪರಿಹಾರ ಕಾಣಲು ಸಾಧ್ಯವಿದೆ. ಪ್ರಕೃತಿ ಚಿಕಿತ್ಸೆಯು ಇದೇ ರೀತಿಯದ್ದಾಗಿದ್ದು, ಪ್ರಕೃತಿಯೆಡೆಗೆ ಹೋಗುವ ಕಾರ್ಯಮಾಡಲಾಗುತ್ತಿದೆ ಇದಕ್ಕೆ ಈಗ ಎಲ್ಲೆಡೆಯಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.

ವೇದಿಕೆಯಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಉಪಾಧ್ಯಕ್ಷ ಪ್ರೊ.ಎಸ್. ಪ್ರಭಾಕರ್, ಶಾಂತಿವನ ಟ್ರಸ್ಟಿನ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ಕಾಲೇಜಿನ ಪ್ರಾಂಶುಪಾಲ ಪ್ರಶಾಂತ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿ ದ್ದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಸ್ವಾಗತಿಸಿದರು. ರೀಟಾ ಮರಿಟಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಡಾ. ಶಿವಪ್ರಸಾದ್ ಶೆಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ 54 ಮಂದಿ ಪದವಿಪಡೆದ ವಿದ್ಯಾರ್ಥಿಗಳಿಗೆ ಹಾಗೂ 9 ಮಂದಿ ಸ್ನಾತಕೋತ್ತರ ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು.


Spread the love