ಬೈಂದೂರು ಕ್ಷೇತ್ರ ಪಾಕಿಸ್ತಾನದಲ್ಲಿಲ್ಲ, ನಾನು ಭಾರತದ ಪ್ರಜೆ: ಶಾಸಕ ಬಿ.ಎಮ್.ಎಸ್ ಗೆ ವಿಕಾಸ್ ಹೆಗ್ಡೆ ಟಾಂಗ್

Spread the love

ಬೈಂದೂರು ಕ್ಷೇತ್ರ ಪಾಕಿಸ್ತಾನದಲ್ಲಿಲ್ಲ, ನಾನು ಭಾರತದ ಪ್ರಜೆ: ಶಾಸಕ ಬಿ.ಎಮ್.ಎಸ್ ಗೆ ವಿಕಾಸ್ ಹೆಗ್ಡೆ ಟಾಂಗ್

ಕುಂದಾಪುರ: ಬೈಂದೂರು ಕ್ಷೇತ್ರ ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿಲ್ಲ. ಕುಂದಾಪುರ ಕ್ಷೇತ್ರದವರು ಅನ್ಯಾಯದ ವಿರುದ್ದ ಎಲ್ಲಿಯೂ ಮಾತನಾಡಬಹುದು. ಬೈಂದೂರು ಕ್ಷೇತ್ರವನ್ನು ಶಾಸಕರು ಗುತ್ತಿಗೆ ಪಡೆದಿಲ್ಲ. ನನಗೆ ಮಾತನಾಡುವ, ಮಹಿಳೆಯರ ಮೇಲೆ ಆದ ಅನ್ಯಾಯವನ್ನು ಪ್ರಶ್ನಿಸುವ ಹಕ್ಕನ್ನು ಸಂವಿಧಾನ ನೀಡಿದೆ ಎಂದು ಕಾಂಗ್ರೆಸ್ ಯುವ ಮುಖಂಡ ವಿಕಾಸ್ ಹೆಗ್ಡೆ ಗುಡುಗಿದ್ದಾರೆ.

ರಾಜಕೀಯ ಹಿನ್ನೆಲೆಯಲ್ಲಿ ವಂಡ್ಸೆ ಸ್ವಾವಲಂಬನಾ ಹೊಲಿಗೆ ತರಬೇತಿ ಕೇಂದ್ರವನ್ನು ಸ್ಥಳಾಂತರಿಸಿರುವ ಬೈಂದೂರು ಶಾಸಕರ ವಿರುದ್ದ ಬುಧವಾರ ಸಿದ್ದಾಪುರದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಕುಂದಾಪುರದವರೆಲ್ಲಾ ಬಂದು ಇಲ್ಲಿ ಭಾಷಣ ಬಿಗಿಯುತ್ತಾರೆ ಎಂಬ ಶಾಸಕ ಬಿಎಮ್ಎಸ್ ಹೇಳಿಕೆಗೆ ವಿಕಾಸ್ ಹೆಗ್ಡೆ ಟಾಂಗ್ ನೀಡಿದ್ದಾರೆ.

ಕ್ಷೇತ್ರದಲ್ಲಿ ಅಕ್ರಮ, ಅನಾಚಾರ, ಶಾಸಕರು ಹಾಗೂ ಅವರ ಪಟಾಲಂಗಳು ಗುತ್ತಿಗೆದಾರರಿಗೆ ಹೇಗೆ ಕಿರುಕುಳ ಕೊಡುತ್ತಿದ್ದಾರೆ. ಕಮಿಶನ್ ದಂದೆ ಹೇಗೆ ನಡೆಯುತ್ತಿದೆ ಎಲ್ಲದರ ಬಗ್ಗೆಯೂ ಹೇಳುವೆ.

ನನ್ನ ಹೆಸರಿನ ಬಗ್ಗೆ ಟೀಕಿಸಿದ ಉಮೇಶ್ ಕಲ್ಗೆದ್ದೆಯ ಬಗ್ಗೆ ನಾನು ಮಾತನಾಡಲು ಹೋಗೋದಿಲ್ಲ. ಆತ ಹೇಳಿರುವ ಮಾತಿಗೆ ಸುಕುಮಾರ ಶೆಟ್ಟರಿಗೆ ಉತ್ತರ ಕೊಡುತ್ತೇನೆ. ನನ್ನ ತಂದೆ ನನಗೆ ವಿಕಾಸ್ ಎನ್ನುವ ಒಳ್ಳೆಯ ಹೆಸರನ್ನಿಟ್ಟಿದ್ದಾರೆ. ನಿನ್ನೆ ಆತ ನನ್ನ ಹೆಸರಿನ‌ಬಗ್ಗೆ ಏನೇ ಹೇಳಿರಬಹುದು. ಈ ದೇಶದ ಪ್ರಧಾನಿ ನನ್ನ ಹೆಸರನ್ನು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳುತ್ತಾರೆ. ಆದರೆ ಬೈಂದೂರು ಶಾಸಕರಿಗೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಬೇಡ. ಅವರಿಗೆ ಅವರ ವಿಕಾಸವಾದರೆ ಸಾಕು. ಸುಮಾರು ಮೂವತ್ತೊಂಭತ್ತು ವರ್ಷಗಳಿಂದಲೂ ವಿಕಾಸ್ ಎಂದು ಹೆಸರನ್ನಿಟ್ಟಕೊಂಡು ನಾನು ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕವಾಗಿ ವಿಕಾಸಗೊಂಡಿದ್ದೇನೆ. ಆದರೆ ಸುಕುಮಾರ್ ಎಂದು ಹೆಸರಿಟ್ಟುಕೊಂಡಿರುವ ನೀವು ಇನ್ನೂ ವಿಕಾಸಗೊಂಡಿಲ್ಲ. ಈಗಲೂ ನೀವು ಕುಮಾರ. ಇನ್ನೂ ನಿಮಗೆ ಬುದ್ದಿ ಬೆಳೆದಿಲ್ಲ. ಬಡವರ , ದೀನದಲಿತರ ಬಗ್ಗೆ ನಿಮಗಿನ್ನೂ ಕಾಳಜಿ ಇಲ್ಲ. ಆದಷ್ಟು ಬೇಗ ನೀವು ವಿಕಾಸಗೊಳ್ಳಿ ಎಂದು ಜರಿದರು.


Spread the love