ಬೈಂದೂರು ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ: ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ

Spread the love

ಬೈಂದೂರು ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ: ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ
 

ಕುಂದಾಪುರ: ಪ್ರಥಮ ವಿಧಾನಸಭಾ ಚುನಾವಣೆಯಲ್ಲಿ ಸೋಲಾದ ಬಳಿಕ ಕ್ಷೇತ್ರದ ಮೂಲೆಮೂಲೆಗೂ ಹೋಗಿ ಕಾರ್ಯಕರ್ತರ ಸಹಕಾರದಿಂದ ಪಕ್ಷ, ಸಂಘಟನೆಯನ್ನು ಕಟ್ಟಿದ ಪರಿಣಾಮ ಹಿಂದೆ ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದ ಬೈಂದೂರು ವಿಧಾನಸಭಾ ಕ್ಷೇತ್ರ ಇದೀಗ ಸಂಪೂರ್ಣ ಬಿಜೆಪಿ ಭದ್ರಕೋಟೆಯಾಗಿ ಬದಲಾಗಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿಎಮ್ ಸುಕುಮಾರ್ ಶೆಟ್ಟಿ ಹೇಳಿದರು.

ಅವರು ಆಲೂರು ಕ್ರಾಸ್ ಬಳಿಯ ಚಿತ್ತೂರಿನಲ್ಲಿರುವ ಸಕಲ ಕನ್ವೆನ್ಶನ್ ಹಾಲ್‍ ನಲ್ಲಿ ಮಂಗಳವಾರ ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು.

ಚುನಾವಣಾ ಪೂರ್ವದಲ್ಲಿ ಕ್ಷೇತ್ರದ ಜನರಿಗೆ ಏನೆಲ್ಲಾ ಭರವಸೆಗಳನ್ನು ಕೊಟ್ಟಿದ್ದೇನೊ ಎಲ್ಲವನ್ನೂ ಈಡೇರಿಸುವ ಪ್ರಯತ್ನ ಮಾಡುತ್ತಿದ್ದೇನೆ. ಕುಡಿಯುವ ನೀರು, ವೆಂಟೆಡ್ ಡ್ಯಾಂ, ರಸ್ತೆ ಮುಂತಾದ ಮೂಲಭೂತ ಸೌಕರ್ಯಗಳಿಗೆ ಒತ್ತು ಕೊಟ್ಟಿದ್ದೇನೆ. ಕೊಲ್ಲೂರಿನ ಕೊಡಚಾದ್ರಿಗೆ ರೋಪ್ ವೇ ಮಂಜೂರಾಗಿದ್ದು ಪ್ರವಾಸೋದ್ಯಮಕ್ಕೂ ಆದ್ಯತೆ ನೀಡಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಅವರ ಸಹಕಾರದಿಂದಾಗಿ ಬೈಂದೂರು ಕ್ಷೇತ್ರ ಅಭಿವೃದ್ದಿಯ ಪಥದತ್ತ ಸಾಗುತ್ತಿದೆ. ಇದನ್ನು ಸಹಿಸದ ಕಾಂಗ್ರೆಸ್ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಿದೆ. ಇದು ಕಾಂಗ್ರೆಸ್‍ನ ಚುನಾವಣೆಯ ಗಿಮಿಕ್. ಕ್ಷೇತ್ರದ ಜನರಿಗಾಗಿ ದಿನದ ಇಪ್ಪತ್ತನಾಲ್ಕು ಗಂಟೆಯೂ ಕೆಲಸ ಮಾಡುವೆ. ಕಾಂಗ್ರೆಸ್‍ನ ಎಲ್ಲಾ ಆಧಾರ ರಹಿತ ಆರೋಪಕ್ಕೆ ಮುಂದಿನ ಗ್ರಾ.ಪಂ ಚುನಾವಣೆಯಲ್ಲಿ ಕ್ಷೇತ್ರದ ಜನರು ಉತ್ತರ ನೀಡಲಿದ್ದಾರೆ ಎಂದ ಬಿಎಮ್ ಸುಕುಮಾರ್ ಶೆಟ್ಟಿ, ಕಾರ್ಯಕಾರಿಣಿ ಸಭೆಯಲ್ಲಾದ ವಿಚಾರಗಳನ್ನು ಕಾರ್ಯರೂಪಕ್ಕೆ ತರುವ ಕೆಲಸ ಆಗಬೇಕು. ಕಾರ್ಯಕರ್ತರೆಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಮಾತ್ರ ಮುಂದಿನ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಬಹುದು ಎಂದು ಸಲಹೆ ನೀಡಿದರು.

ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯ್ಕ್ ಮಾತನಾಡಿ, ಗ್ರಾಮ ಮಟ್ಟದಿಂದ ಕೇಂದ್ರದವರೆಗೂ ಅಧಿಕಾರದಲ್ಲಿರುವ ಬಿಜೆಪಿ ರಾಜಕೀಯವಾಗಿ ಮುಂಚೂಣಿಯಲ್ಲಿದೆ. ನಮ್ಮ ಪ್ರಭಾವ ಹೀಗೆಯೇ ಮುಂದುವರಿಯಬೇಕಾದರೆ ಇಂತಹ ಕಾರ್ಯಕಾರಿಣಿ ಸಭೆ ಅತ್ಯಗತ್ಯ. ಎಲ್ಲಾ ಪಕ್ಷಗಳಂತೆ ಬಿಜೆಪಿಯಲ್ಲ. ಬಿಜೆಪಿಯ ಪದಾಧಿಕಾರಿಗಳಿಗೆ ಅವಧಿ ಇದೆ. ಆದರೆ ಕಾಂಗ್ರೆಸ್ ಪದಾಧಿಕಾರಿಗಳಿಗೆ ಅವಧಿ ಎನ್ನುವುದೇ ಇಲ್ಲ. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನು ರಾಜ್ಯಾಧ್ಯಕ್ಷರ ಪಟ್ಟವನ್ನು ಅಲಂಕರಿಸುವ ಅವಕಾಶಗಳಿವೆ. ಭಾರತೀಯ ಜನತಾ ಪಾರ್ಟಿ ಒಂದು ಸಿದ್ದಾಂತದ ಆದರದ ಮೇಲೆ ದೇಶದಲ್ಲಿ ರಾಜಕೀಯ ಮಾಡುತ್ತಿದೆ. ಬೇರೆ ಪಕ್ಷಗಳು ರಾಜಕೀಯ ಪಕ್ಷವಾಗಿ ಉಳಿದಿಲ್ಲ. ಅವೆಲ್ಲವೂ ಕುಟುಂಬದ ಪ್ರಾಪರ್ಟಿಗಳಾಗಿ ಬದಲಾಗುತ್ತಿದೆ. ಇದು ನಮ್ಮ ದುರಂತ ಎಂದರು.

ಇಂದು ಗ್ರಾಮೀಣ ಮಟ್ಟದಲ್ಲಿ ಮಾತ್ರ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಗ್ರಾ.ಪಂ ಚುನಾವಣೆ ಬಂದಾಗ ಅವೆಲ್ಲವೂ ಅಣಬೆಯಂತೆ ತಲೆ ಎತ್ತುತ್ತವೆ. ಆದರೆ ಮುಂದಿನ ಗ್ರಾ.ಪಂ ಚುನಾವಣೆಯಲ್ಲಿ ಗ್ರಾಮಮಟ್ಟದಲ್ಲಿ ಕಾಂಗ್ರೆಸ್ ಅನ್ನು ಕಿತ್ತೊಗೆಯುವ ಕೆಲಸ ಮಾಡಬೇಕು. ಇದರಿಂದ ಕಾಂಗ್ರೆಸ್‍ನ ಒಡೆದಾಳುವ ಸಿದ್ದಾಂತವೂ ಕೊನೆಗೊಳ್ಳಬೇಕು. ಮುಂಬರುವ ಚುನಾವಣೆಯಲ್ಲಿ 39 ಗ್ರಾ.ಪಂ ಚುನಾವಣೆಯಲ್ಲೂ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಈ ಕ್ಷೇತ್ರ ಬಿಜೆಪಿ ಕ್ಷೇತ್ರ ಎನ್ನುವುದನ್ನು ಮತ್ತೆ ಸಾಬೀತು ಮಾಡಬೇಕು ಎಂದು ಕುಯಿಲಾಡಿ ಕಾರ್ಯಕರ್ತರಿಗೆ ಕರೆ ನೀಡಿದರು.

ಸಭೆಯಲ್ಲಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿಲ್ಲಾ ಬಿಜೆಪಿ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಮಂಡಲ ಪ್ರಭಾರಿ ಶ್ರೀಷ ನಾಯ್ಕ್ ಉಪಸ್ಥಿತರಿದ್ದರು.

ವಿನೋದ್ ಭಂಡಾರಿ ಸ್ವಾಗತಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ಪೂಜಾರಿ ಜೆಡ್ಡು ಧನ್ಯವಾದವಿತ್ತರೆ, ಪ್ರಿಯಾದರ್ಶಿನಿ ದೇವಾಡಿಗ ನಿರೂಪಿಸಿದರು.

ಸಭೆ ಆರಂಭಕ್ಕೂ ಮುನ್ನ ಅಗಲಿದ ಪಕ್ಷದ ನಾಯಕರು ಹಾಗೂ ಕೊಡೇರಿ ಬಂದರು ದೋಣಿ ದುರಂತ ಪ್ರಕರಣದಲ್ಲಿ ನಿಧನರಾದ ಮೀನುಗಾರರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು. ಮೀನುಗಾರರ ವಿವಿಧ ಬೇಡಿಕೆಗಳನ್ನು ಮೀನುಗಾರ ಮುಂಖಂಡ ಎ ಆನಂದ ಖಾರ್ವಿ, ಗೋಹತ್ಯೆ ನಿಷೇಧದ ನಿರ್ಣಯವನ್ನು ಸಂಸಾಡಿ ಅಶೋಕ್ ಕುಮಾರ್ ಶೆಟ್ಟಿ ಮಂಡಿಸಿದರು.


Spread the love